ಚುನಾವಣಾ ಆಯುಕ್ತರ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡುರಾತ್ರಿಯ ನಿರ್ಧಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಡುರಾತ್ರಿಯಲ್ಲಿ ‘ಮೋಶಾ’ ತೆಗೆದುಕೊಂಡ ನಿರ್ಧಾರವು ಅಗೌರವ ತರುವಂತದ್ದು ಎಂದು ತಿಳಿಸಿದ್ದಾರೆ.
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಇಸಿ) ಆಯ್ಕೆ ಮಾಡಲಾಗಿದೆ ಎಂದು ರಾತ್ರೋರಾತ್ರಿ ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ. ಚುನಾವಣಾ ಆಯೋಗದ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ಹೊಸ ಕಾಯ್ದೆಗೆ ಅನುಗುಣವಾಗಿ ಜ್ಞಾನೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಇದನ್ನು ಓದಿದ್ದೀರಾ? ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ
ಈ ಬಗ್ಗೆ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. “ಮುಂದಿನ ಚುನಾವಣಾ ಆಯುಕ್ತ ಆಯ್ಕೆ ಸಮಿತಿಯ ಸಭೆಗೆ ನನ್ನ ಅಸಮ್ಮತಿ ಸೂಚಿಸಿ ಪ್ರಧಾನಿ ಮತ್ತು ಗೃಹ ಸಚಿವರಿಗೆ ಸುದೀರ್ಘವಾದ ಪತ್ರ ಬರೆದೆ. ಆ ಪತ್ರದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡಬಾರದು” ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
During the meeting of the committee to select the next Election Commissioner, I presented a dissent note to the PM and HM, that stated: The most fundamental aspect of an independent Election Commission free from executive interference is the process of choosing the Election… pic.twitter.com/JeL9WSfq3X
— Rahul Gandhi (@RahulGandhi) February 18, 2025
ಹಾಗೆಯೇ “ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ತೆಗೆದುಹಾಕುವ ಮೂಲಕ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದ ಚುನಾವಣಾ ಪ್ರಕ್ರಿಯೆಯ ಬಗ್ಗೆ ಲಕ್ಷಾಂತರ ಮತದಾರರಿಗೆ ಇರುವ ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ” ಎಂದಿದ್ದಾರೆ.
“ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ದೇಶದ ಇತರೆ ನಾಯಕರುಗಳ ಆದರ್ಶವನ್ನು ಎತ್ತಿ ಹಿಡಿಯುವುದು ಲೋಕಸಭೆಯ ವಿಪಕ್ಷ ನಾಯಕನಾಗಿ ನನ್ನ ಕರ್ತವ್ಯವಾಗಿದೆ. ಪ್ರಧಾನಿ ಮತ್ತು ಗೃಹ ಸಚಿವರು ನಡುರಾತ್ರಿ ಸಿಇಸಿ ಆಯ್ಕೆ ಮಾಡಿರುವುದು ಅತೀ ಅಗೌರವಯುತವಾದದ್ದು. ಅದು ಕೂಡಾ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ನೂತನ ನಿಯಮಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೇನು 48 ಗಂಟೆಗೂ ಕಡಿಮೆ ಅವಧಿಯಲ್ಲಿ ನಡೆಯಲಿದೆ” ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ನಿವೃತ್ತರಾಗುವ ಮುನ್ನ ಮುಖ್ಯ ಚುನಾವಣಾ ಆಯುಕ್ತರು ಕೆಲವು ಉತ್ತರಗಳನ್ನು ನೀಡಬೇಕು
ಇನ್ನು ತನ್ನ ಅಧಿಕಾರಾವಧಿಯಲ್ಲಿ ಬಹುತೇಕ ನಿರ್ಧಾರಗಳನ್ನು ನಡುರಾತ್ರಿಯಲ್ಲಿಯೇ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಬೇಕಾದ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಿದ ಆದೇಶ ಹೊರಡಿಸಲು ಕೂಡಾ ನಡುರಾತ್ರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ 500 ಮತ್ತು 1000 ರೂಪಾಯಿ ನೋಟು ಅಮಾನ್ಯೀಕರಣ ಮಾಡಿದಾಗಲೂ ಕೂಡಾ ಪ್ರಧಾನಿ ಮೋದಿ ಯಾವುದೇ ಪೂರ್ವ ಸಿದ್ಧತೆ ನಡೆಸದೆ ರಾತ್ರೋರಾತ್ರಿ ಘೋಷಣೆ ಮಾಡಿ ಜನರು ತಬ್ಬಿಬ್ಬಾಗುವಂತೆ ಮಾಡಿದ್ದರು.
ಇನ್ನು ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಈ ಹಿಂದೆ ಸಮಿತಿಯಲ್ಲಿ ಮೂವರು ಸದಸ್ಯರು ಇರಬೇಕಾಗಿತ್ತು. ವಿರೋಧ ಪಕ್ಷದ ನಾಯಕರು, ಪ್ರಧಾನಿ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ಮೂವರು ಸದಸ್ಯರಾಗಿದ್ದರು. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಆಯ್ಕೆ ಪ್ರಕ್ರಿಯೆಯನ್ನೇ ಬದಲಾಯಿಸಿದೆ. ಈಗ ಪ್ರಧಾನಿ (ಮೋದಿ), ವಿಪಕ್ಷ ನಾಯಕ (ರಾಹುಲ್ ಗಾಂಧಿ) ಮತ್ತು ಆಡಳಿತ ಪಕ್ಷದ ಇನ್ನೋರ್ವ ನಾಯಕ (ಅಮಿತ್ ಶಾ) ಸೇರಿ ಚುನಾವಣಾ ಆಯುಕ್ತರ ಆಯ್ಕೆ ಮಾಡುತ್ತಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷಕ್ಕೆ ಬೇಕಾದವರನ್ನೇ ಆಯ್ಕೆ ಮಾಡಲು ಸಂಪೂರ್ಣ ಅವಕಾಶವಿರುವುದು ಪಾರದರ್ಶಕವಾಗಿದೆ. ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು ವಿಚಾರಣೆ ಇನ್ನೆರಡು ದಿನಗಳಲ್ಲಿ ನಡೆಯಲಿದೆ.
