- ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಭರಾಟೆ
- ಕೋವಿಡ್ ಸಂದರ್ಭದಲ್ಲಿ ನಿಂತ ನರ್ಮ್ ಬಸ್ ಸೇವೆ
ಉಡುಪಿ ಜಿಲ್ಲಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನರ್ಮ್ ಬಸ್‌ಗಳನ್ನು ಪುನಾರಂಭಿಸಿ, ಹೆಚ್ಚಿನ ಬಸ್‌ಗಳನ್ನು ಒದಗಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯದ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ “ಶಕ್ತಿ ಯೋಜನೆ” ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಯೋಜನೆಯ ಉದ್ಘಾಟನೆಗೆ ಉಡುಪಿಗೆ ಆಗಮಿಸಿದ್ದ ವೇಳೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಜಿಲ್ಲೆಯ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಉಡುಪಿ ನಗರಪ್ರದೇಶದಲ್ಲಿ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 40ಕ್ಕೂ ಅಧಿಕ ಸರ್ಕಾರಿ ನರ್ಮ್ ಬಸ್ಸುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಂಚಾರ ನಡೆಸುವ ನಿಟ್ಟಿನಲ್ಲಿ ಆರಂಭಿಸಿತ್ತು. ಇದರಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಮಹಿಳೆಯರು ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಭರಾಟೆ ಮತ್ತು ಲಾಭಿಯಿಂದಾಗಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಸರ್ಕಾರಿ ನರ್ಮ್ ಬಸ್ಸುಗಳು ತಮ್ಮ ಸಂಚಾರವನ್ನು ನಿಲ್ಲಿಸಿದ್ದು, ಇಂದಿಗೂ ಮತ್ತೆ ಸಂಚಾರ ಆರಂಭಿಸಿಲ್ಲ. ಉಡುಪಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನರ್ಮ್ ಬಸ್ಸುಗಳ ಸಂಚಾರದಿಂದ ಜನರಿಗೆ ಹೆಚ್ಚಿನ ಅನೂಕೂಲವಾಗುತ್ತದೆ. ಇಂದಿಗೂ ಹಲವಾರು ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ಬಸ್ಸುಗಳೂ ಸಹ ಸಂಚರಿಸದ ಪರಿಸ್ಥಿತಿ ಇದೆ ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಳಕೆಯಾಗದೇ ಪಾಳುಬಿದ್ದಿದೆ ಸಂತಪೂರ ಬಸ್ ನಿಲ್ದಾಣ
ನಿಂತುಹೋಗಿರುವ ನರ್ಮ್ ಬಸ್ಸುಗಳನ್ನು ಮತ್ತೆ ಆರಂಭಿಸಿದರೆ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನೂಕೂಲವಾಗುತ್ತದೆ. ಜಿಲ್ಲೆಯ ಹಲವು ಭಾಗಗಳಿಗೆ ಹೆಚ್ಚಿನ ಸರ್ಕಾರಿ ಬಸ್ ಸೇವೆ ಆರಂಭಿಸಿದ್ದಲ್ಲಿ ಜನರಿಗೆ ಸರ್ಕಾರದ ಯೋಜನೆಯ ಪ್ರಯೋಜನ ತಲುಪಲಿದೆ ಎಂದು ತಿಳಿಸಿದ್ದಾರೆ.
ಈ ವಿಷಯವನ್ನು ಸಾರಿಗೆ ಸಚಿವರ ಗಮನಕ್ಕೆ ತಂದು ಅವರ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿ ಜಿಲ್ಲೆಯಲ್ಲಿ ಈಗಾಗಲೇ ಓಡಾಟ ನಿಲ್ಲಿಸಿರುವ ನರ್ಮ್ ಬಸ್ಸುಗಳು ಮತ್ತೆ ಸಂಚಾರ ಆರಂಭಿಸುವಂತೆ ಹಾಗೂ ಹೊಸ ಸರ್ಕಾರಿ ಬಸ್ಸುಗಳನ್ನು ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಣೇಶ್ ನೆರ್ಗಿ, ಸತೀಶ್ ಕುಮಾರ್ ಮಂಚಿ, ಭರತ್ ಮಣಿಪಾಲ್, ಸದಾನಂದ್ ಮೂಲ್ಯ, ಕೃಷ್ಣಮೂರ್ತಿ ಆಚಾರ್ಯ, ಸುಕನ್ಯಾ ಪೂಜಾರಿ, ವಿಘ್ನೇಶ್ ಕಿಣಿ ಹಾಗೂ ಇತರರು ಇದ್ದರು.