“ರಾಜ್ಯ ಕೆಪಿಸಿಸಿ ಘಟಕದಲ್ಲಿ ಅಧ್ಯಕ್ಷರ ಹುದ್ದೆ ಭರ್ತಿಯಾಗಿದೆ. ಈಗಾಗಲೇ ಅಧ್ಯಕ್ಷರೂ ಇದ್ದಾರೆ. ಬದಲಾವಣೆ ಕುರಿತು ನನ್ನ ಗಮನಕ್ಕೆ ಯಾವುದೇ ಮಾಹಿತಿ ಬಂದಿಲ್ಲ” ಎಂದು ದಾವಣಗೆರೆಯಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟಪಡಿಸಿದರು.
ದಾವಣಗೆರೆಯ ಪ್ರವಾಸದ ವೇಳೆ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ನನಗೆ ತಿಳಿದಿಲ್ಲ. ಬದಲಾವಣೆ ಬಗ್ಗೆ ಹೈಕಮಾಂಡ್ ಏನಾದರೂ ಹೇಳಿದೆಯಾ? ಕೆಪಿಸಿಸಿ ಅಧ್ಯಕ್ಷರು ನೇಮಕ ಮಾಡುವುದು ಹೈಕಮಾಂಡ್‌ಗೆ ಸೇರಿದ ವಿಚಾರ” ಎಂದು ತಿಳಿಸಿದರು.
“ರಾಜ್ಯದ ಯಾವ ಭಾಗದಲ್ಲೂ ಕೂಡ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವುದಿಲ್ಲ. ವಿದ್ಯುತ್ ಪ್ರಸರಣಾ ಕೇಂದ್ರಗಳಲ್ಲಿ ದುರಸ್ತಿ, ನಿರ್ವಹಣೆ ಇತರ ಕಾರ್ಯಗಳಿದ್ದಾಗ ಮಾತ್ರ ಕೆಲವೊಮ್ಮೆ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿರಬಹುದು. ಅದನ್ನು ಹೊರತುಪಡಿಸಿ, ಈ ಬಾರಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವ ಯಾವುದೇ ವಿಚಾರ ಇಲ್ಲ. ಆದರೆ ಸರ್ಕಾರದ ಬದ್ದತೆಯಂತೆ ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಪ್ರತಿನಿತ್ಯ 18500 ಮೆಗಾವ್ಯಾಟ್ ಬೇಡಿಕೆ ಇದ್ದು, ಬೇಸಿಗೆ ಆರಂಭವಾಗಿರುವುದರಿಂದ ಸರಾಸರಿಗಿಂತ ಶೇ.10ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದರಿಂದ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಬ್ಯಾಂಕಿಂಗ್ ಮಾಡಿಕೊಂಡು, ಜೂನ್‍ನಿಂದ ಆ ರಾಜ್ಯಗಳಿಗೆ ಕರ್ನಾಟಕದಿಂದ ವಿದ್ಯುತ್ ನೀಡಿ ಬೇಸಿಗೆಯಲ್ಲಿ ಅಲ್ಲಿಂದ ಗ್ರಿಡ್ ಮೂಲಕ ವಿದ್ಯುತ್ ಪಡೆಯಲು ಉದ್ದೇಶಿಸಲಾಗಿದೆ. ಗುಣಮಟ್ಟದ ವೋಲ್ಟೇಜ್‍ಗಾಗಿ ಅಗತ್ಯವಿರುವ ಕಡೆ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ವಿದ್ಯುತ್ ಪೂರೈಕೆಯನ್ನು ಉತ್ತಮವಾಗಿ ನಿರ್ವಹಿಸಲು ಕ್ರಮ ಕೈಗೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದರು.
“ಸಚಿವ ರಾಜಣ್ಣ ಅವರ ಬಗ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿರುವ ದೂರಿನ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ಅವರನ್ನೇ ಕೇಳಬೇಕಷ್ಟೇ” ಎಂದು ಹೈಕಮಾಂಡ್‌ಗೆ ನೀಡಿರುವ ದೂರಿನ ಬಗ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೀದಿ ನಾಯಿ ದಾಳಿ, ಗಂಭೀರವಾಗಿ ಗಾಯಗೊಂಡ ಮೂರು ವರ್ಷದ ಹೆಣ್ಣುಮಗು
“ಪಂಚಗ್ಯಾರಂಟಿ ಯೋಜನೆಗೂ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರ್ಕಾರದಿಂದಲೇ ಬೆಲೆ ಏರಿಕೆ ಹಾಗೂ ನಿರುದ್ಯೋಗ ಹೆಚ್ಚಾಗುತ್ತಿದೆ. ರೆವಿನ್ಯೂ ಕೊಡುವುದರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಗೃಹಲಕ್ಷ್ಮಿ ಹಣ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇಡಿ. ವರ್ಷದ ಅಂತ್ಯದಲ್ಲಿ ಹೆಚ್ಚು ಹಣ ಬರಲಿದೆ. ಬಂದ ಕೂಡಲೇ ಕೊಡಲಿದ್ದೇವೆ” ಎಂದು ತಿಳಿಸಿದರು.
ಶಾಸಕರಾದ ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ.ದೇವೇಂದ್ರಪ್ಪ, ಹಾಗೂ ಇತರರು ಜೊತೆಯಲ್ಲಿದ್ದರು.