- ಅಲೆಮಾರಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ
- ಸಮಾಜ ಕಲ್ಯಾಣ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ
ಸಮಾಜದಲ್ಲಿ ಸಂಕಷ್ಟಕ್ಕೊಳಗಾಗಿರುವ ಸಮುದಾಯಗಳಲ್ಲಿ ಅಲೆಮಾರಿ ಜನಾಂಗವೂ ಒಂದು. ಪ್ರಸಕ್ತ ಸನ್ನಿವೇಶದಲ್ಲಿಈ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲೆಮಾರಿ ಜನಾಂಗದ ಸ್ಥಿತಿಗತಿ ಕುರಿತ ಸಮಗ್ರ ಅಧ್ಯಯನ ನಡೆಸಲು ಆಯೋಗ ರಚಿಸಲಿದ್ದೇವೆ. ಅದರ ಅಧ್ಯಯನ ವರದಿ ಪಡೆದು ನಂತರ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚನೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ನೇತೃತ್ವದಲ್ಲಿ ಅಲೆಮಾರಿ ಸಮುದಾಯಗಳ ಮುಖಂಡರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ನಿಗಮ ಮಂಡಳಿ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್, “23 ಅಲೆಮಾರಿ ಜನಾಂಗಗಳಿಗೆ ಸೇರಿದ ಸಮುದಾಯಗಳ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತರಲಾಗಿದೆ. ಇವರೊಂದಿಗೆ ಇದೇ ಮಾದರಿ ಬದುಕು ಸಾಗಿಸುವ ಅನೇಕ ಸಮುದಾಯದವರನ್ನು, ಪ್ರಮಾಣಪತ್ರ ಇಲ್ಲದವರು, ಗುರುತಿಲ್ಲದವರನ್ನೂ ನಾವು ಮರಳಿ ಗುರುತಿಸಬೇಕಿದೆ. ಇದಕ್ಕಾಗಿ ಆಯೋಗ ರಚಿಸಬೇಕು ಎಂದಿದ್ದಾರೆ. ಈ ವಿಚಾರವನ್ನು ಸಮಾಜ ಕಲ್ಯಾಣ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಲಾಗುವುದು” ಎಂದು ಹೇಳಿದರು.
“ಯಾರು ತುಳಿತಕ್ಕೆ ಒಳಗಾಗಿದ್ದಾರೋ, ಅವರನ್ನು ಗುರುತಿಸಿ ಅವರಿಗೆ ನ್ಯಾಯ ಮತ್ತು ಸರಿಯಾದ ಗುರುತು ನೀಡಬೇಕೆನ್ನುವುದು ನಮ್ಮ ಪಕ್ಷದ ಸಿದ್ಧಾಂತವಾಗಿದೆ. ಹೀಗಾಗಿ ಈ ಸಮುದಾಯಗಳಿಗೂ ಸರಿಯಾದ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ?:ನನಗೆ ರಾಜಕಾರಣದಲ್ಲಿ ಒಲವಿಲ್ಲ; ಕಾರ್ಯಕರ್ತರ ಒತ್ತಾಯಕ್ಕೆ ಇದ್ದೇನೆ : ಎಚ್‌ಡಿಕೆ
ಇದೇ ವೇಳೆ ನಿಷ್ಕ್ರಿಯ ನಿಗಮ ಮಂಡಳಿಗಳನ್ನು ಮುಂದುವರೆಸುವ ಇಲ್ಲ ಬಂದ್ ಮಾಡುವ ವಿಚಾರವಾಗಿ ಮಾತನಾಡಿದ ಡಿಕೆಶಿ, ಬಜೆಟ್ ಅಧಿವೇಶನದ ಬಳಿಕ ಇವುಗಳ ಭವಿಷ್ಯದ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
“ನಿಷ್ಕ್ರಿಯ ನಿಗಮ ಮಂಡಳಿಗಳನ್ನು ಸದ್ಯ ಬಂದ್ ಮಾಡಲ್ಲ. ಈಗಾಗಲೇ ಬಜೆಟ್‌ನಲ್ಲಿ ಎಲ್ಲ ನಿಗಮ ಮಂಡಳಿಗಳಿಗೂ ಹಣ ಹಂಚಿಕೆ ಆಗಿದೆ. ಮುಂದಿನ ಬಜೆಟ್ ವೇಳೆಗೆ ನಮ್ಮ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಯುಕ್ತ ನಿಗಮ ಮಂಡಳಿಗಳ ಕುರಿತು ನಿರ್ಧಾರ ಮಾಡುತ್ತಾರೆ” ಎಂದರು.