ಬಸವಕಲ್ಯಾಣದ ಬಸವ ಮಹಾಮನೆ ಟ್ರಸ್ಟ್‌ನಿಂದ ಫೆಬ್ರವರಿ 21, 22 ಮತ್ತು 23ರಂದು 7ನೇ ಅನುಭವ ಮಂಟಪ ಸಂಸತ್ತು ಕಾರ್ಯಕ್ರಮ ನಡೆಯಲಿದೆ. ಕೊನೆಯ ದಿನ ಸಮಾನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬೆಲ್ದಾಳ ಸಿದ್ಧರಾಮ ಶರಣರು ತಿಳಿಸಿದರು.
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ʼಸಮಾಜದಲ್ಲಿ ಇರುವ ಭೇದ-ಭಾವ ಗೊಂದಲ ಹೋಗಲಾಡಿಸಿ ಮಾನವರೆಲ್ಲರೂ ಒಂದೇ, ಜಾತಿ-ಲಿಂಗ-ವರ್ಣ-ವರ್ಗ ರಹಿತ ಸಮಾಜ ಕಟ್ಟುಬೇಕೆಂಬ ಉದ್ದೇಶದಿಂದ ಸಮಾನತಾ ಸಮಾವೇಶ ಹಾಗೂ ಅನುಭವ ಮಂಟಪ ಸಂಸತ್ತಿನ ಅಧಿವೇಶನ ಆಯೋಜಿಸಲಾಗಿದೆ ಎಂದರು.
ʼಫೆಬ್ರುವರಿ23ರಂದು ಬೆಳಿಗ್ಗೆ ಸಮಾನತಾ ಸಮಾವೇಶ ನಡೆಯುವುದು. ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಮಲಗಿ ಜಗದೀಶ್ವರಿ ಮಾತಾ, ಮನಗೂಳಿ ವಿರತೀಶಾನಂದ ಸ್ವಾಮೀಜಿ, ಭಂತೆ ಧಮ್ಮಾನಂದ ಅಣದೂರ, ಮೌಲಾನಾ ತಾಸಾದ್ದುಕ್ ನಾದ್ವಿ, ಧರ್ಮಾಧ್ಯಕ್ಷ ರಾಬರ್ಟ್ ಮೈಕೆಲ್ ಮಿರಾಂಡಾ, ಗ್ಯಾನಿ ಬಲಬೀರಸಿಂಗ್ ಸಾನಿಧ್ಯ ವಹಿಸುವರು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯಸಿಂಗ್, ಮಾಜಿ ಸಂಸದ ಭಗವಂತ ಖೂಬಾ ಸೇರಿದಂತೆ ವಿವಿಧ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮಾವೇಶದ ಗೌರವ ಅಧ್ಯಕ್ಷರನ್ನಾಗಿ ಉಸ್ತುವಾರಿ ಈಶ್ವರ ಖಂಡ್ರೆ ಹಾಗೂ ಶಾಸಕ ಶರಣು ಸಲಗರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ’ ಎಂದರು.
ಸಮಾವೇಶದಲ್ಲಿ ಪ್ರಸಕ್ತ ಸಾಲಿನ ʼಸೌಹಾರ್ದ ರತ್ನʼ ಪ್ರಶಸ್ತಿಯನ್ನು ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಖದೀರ್ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತ : ಓರ್ವ ವ್ಯಕ್ತಿ ಸಾವು
ಕಾರ್ಯಕ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ, ಹೋರಾಟಗಾರ ಲಕ್ಷ್ಮಣ ದಸ್ತಿ, ಮನೋಹರ ಮೈಸೆ, ಪಿಂಟು ಕಾಂಬಳೆ ಮಾತನಾಡಿದರು. ಶಾಮರಾವ್ ಪ್ಯಾಟಿ, ಸಂಜೀವ ಗಾಯಕವಾಡ, ಎಂ.ಬಿ.ನಿಂಗಪ್ಪ, ದಿಗಂಬರ ಜಲ್ದೆ, ಸಿಕಂದರ ಶಿಂಧೆ ಉಪಸ್ಥಿತರಿದ್ದರು.