ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭಮೇಳದ ಬಗ್ಗೆ ಉತ್ತರ ಪ್ರದೇಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದಿದ್ದು, ಈಗ ಅಲ್ಲಿ ಸೂಕ್ತ ವ್ಯವಸ್ಥೆವಿಲ್ಲದೆ ಹಲವು ಮಂದಿ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಪ್ರಶ್ನೆ ಮಾಡಿದರೆ ಹಿಂದೂ ವಿರೋಧಿ, ದೇಶದ್ರೋಹಿಗಳೆಂದು ಪಟ್ಟಕಟ್ಟುತ್ತಾರೆ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆಯಿಲ್ಲದೆ ನೂರಾರು ಮಂದಿ ಭಕ್ತರು ಮರಣ ಹೊಂದಿದ್ದಾರೆ. ಸರಿಯಾದ ಅಂಕಿಸಂಖ್ಯೆ ನೀಡದೆ ತಮ್ಮ ವೈಫಲ್ಯ ಮರೆಮಾಚುತ್ತಿದ್ದಾರೆ. ವ್ಯವಸ್ಥೆಯ ಬಗ್ಗೆ ವಿರೋಧ ಪಕ್ಷದವರು ಏನಾದರೂ ಪ್ರಶ್ನಿಸಿದರೆ ಹಿಂದೂ ವಿರೋಧಿ, ಧರ್ಮವಿರೋಧಿಗಳೆಂದು ಹೇಳುತ್ತಾರೆ” ಎಂದರು.
“ಮಾಜಿ ಪ್ರಧಾನಿ ದೇವೆಗೌಡರು ಮಹಾದಾಯಿ ಯೋಜನೆ ಹಾಗೂ ಮೇಕೆದಾಟು ಯೋಜನೆ ಬಗ್ಗೆ ಹೋರಾಟ ಮಾಡೋಣವೆಂದು ಕಾಂಗ್ರೆಸ್ ನಾಯಕರಿಗೆ ಹೇಳಿರುವುದು ಹಾಸ್ಯಾಸ್ಪದ. ಅವರು ಎನ್‌ಡಿಎ ಸರ್ಕಾರದ ಭಾಗವಾಗಿದ್ದು, ರಾಜ್ಯ ಸಭೆಯಲ್ಲಿ ಪ್ರಧಾನಿ ಮೋದಿಯನ್ನು ಹೋಗಳಿದ್ದೇ ಆಗಿದೆ. ಆದರೆ ಪ್ರಧಾನಿ ಬಳಿ ಹೋಗಿ ಸಹಿಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ” ಆಕ್ರೋಶ ವ್ಯಕ್ತಪಡಿಸಿದರು.
“ದೇವೆಗೌಡರು ವಿಧಾನಸಭೆ ಚುನಾವಣೆಗೂ ಮುಂಚೆ, ʼನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ದಿನದಲ್ಲಿ ಮಹದಾಯಿ ಯೋಜನೆಗೆ ಜಾರಿಗೊಳಿಸುತ್ತೇವೆʼ ಅಂದು ಹೇಳಿದ್ದರು. ಈಗ ಏನಾಗಿದೆ? ಪ್ರಧಾನಿ ಮೋದಿ ಬಳಿ ಚರ್ಚೆ ಮಾಡುವ ಧೈರ್ಯವಿಲ್ಲವೇ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಅತಿಥಿ ಉಪನ್ಯಾಸಕರ ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹ
“ರಾಯಚೂರು ನಗರ ಸೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಇಲಾಖೆಗೆ ಬಿಡುಗಡೆಯಾದ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಮಾಡಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣ ದುರ್ಬಳಕೆಯಾದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಸರಿಪಡಿಸಿ ಜನರಿಗೆ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು” ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಸದಸ್ಯ ಜಯಣ್ಣ, ಮುಖಂಡರಾದ ಮಹಮ್ಮದ್ ಶಾಲಂ, ನರಸಿಂಹಲು ಮಾಡಗಿರಿ, ರಾಮಣ್ಣ ಇರಬಗೇರ ಸೇರಿದಂತೆ ಇತರರು ಇದ್ದರು.
