ಮಹಾತ್ಮಾ ಗಾಂಧಿಯವರ ಹಂತಕ ನಾಥುರಾಂ ಗೋಡ್ಸೆಯನ್ನು ಭಾರತದ ಸುಪುತ್ರ ಎಂದು ಕರೆಯುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಛತ್ತೀಸ್‌ಘಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಟುವಾಗಿ ಟೀಕಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಭಾಗವಾಗಿ ರಾಯ್‌ಪುರದಲ್ಲಿ ನಡೆದ ಆಡಳಿತಾರೂಢ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಘೇಲ್, “ಬಿಜೆಪಿ ನಾಯಕರು ಗೋಡ್ಸೆಯನ್ನು ಹೊಗಳಿ ಮಹಾತ್ಮಾ ಗಾಂಧಿಯನ್ನು ಅದೇಗೆ ಅಪ್ಪಿಕೊಳ್ಳುತ್ತಾರೆ” ಎಂದು ಪ್ರಶ್ನಿಸಿದರು.
“ನಾಥುರಾಂ ಗೋಡ್ಸೆ ಭಾರತದ ಸುಪುತ್ರ ಎಂದು ಕರೆಯುವುದಕ್ಕೆ ಬಿಜೆಪಿಯವರಿಗೆ ಎಷ್ಟು ನಾಚಿಕೆಯಾಗಬೇಕು. ಗೋಡ್ಸೆ ಅವರ ಆರಾಧ್ಯ ದೈವ. ಅವರ ಮುಖ್ಯ ಅಜೆಂಡಾ ಮತಾಂತರ ಮತ್ತು ಕೋಮುವಾದ. ನಾವು ಅದನ್ನು ಚುನಾವಣೆಯಲ್ಲಿ ಎದುರಿಸಬೇಕಿದೆ” ಎಂದು ಭೂಪೇಶ್ ಬಘೇಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೋದಿ ಗೋಡ್ಸೆ ಭಕ್ತರನ್ನು ಹೊರಹಾಕಲಿ, ಇಲ್ಲವೇ ಗಾಂಧಿ ನಮನದ ಸೋಗನ್ನು ಕೊನೆಗೊಳಿಸಲಿ: ಕಾಂಗ್ರೆಸ್
ಛತ್ತೀಸ್‌ಘಢ ವಿಧಾನಸಭೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ ಬಘೇಲ್, “ಮಹಾತ್ಮ ಗಾಂಧಿ, ಅವರ ಕನ್ನಡಕ ಮತ್ತು ಅವರ ಲಾಠಿಗಳನ್ನು ನೀವು ಸ್ವೀಕರಿಸಿದ್ದೀರಿ ಎಂದು ನಾನು ಬಿಜೆಪಿ ಶಾಸಕರಿಗೆ ಹೇಳಿದೆ. ಅದು ನಿಮ್ಮ ಒಳ್ಳೆಯ ಸ್ವಭಾವ. ನೀವು ‘ಮಹಾತ್ಮ ಗಾಂಧಿ ಅಮರ್ ರಹೇ’ ಎಂಬ ಘೋಷಣೆ ಕೂಗುತ್ತೀರಿ. ಆದರೆ ಒಮ್ಮೆ ನೀವು ‘ನಾಥುರಾಂ ಗೋಡ್ಸೆ ಮುರ್ದಾಬಾದ್’ ಎಂದು ಹೇಳಬಹುದೇ ಎಂದು ಕೇಳಿದಾಗ ಅವರು ‘ಗೋಡ್ಸೆ ಮುರ್ದಾಬಾದ್’ ಎಂದು ಹೇಳಲು ಸಾಧ್ಯವಿಲ್ಲ ಎಂದರು. ಏಕೆಂದರೆ ಅವರು ಗೋಡ್ಸೆ ಅವರನ್ನು ತಮ್ಮ ಆದರ್ಶವೆಂದು ಪರಿಗಣಿಸುತ್ತಾರೆ” ಎಂದು ಹೇಳಿದರು.
“ಮಹಾತ್ಮ ಗಾಂಧಿಯವರ ಹಂತಕ ಮೊಘಲ್ ದೊರೆಗಳಾದ ಬಾಬರ್ ಮತ್ತು ಔರಂಗಜೇಬ್ ಅವರಂತೆ ಆಕ್ರಮಣಕಾರರಲ್ಲ. ಏಕೆಂದರೆ ಅವರು ಭಾರತದಲ್ಲಿ ಜನಿಸಿದರು” ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಛತ್ತೀಸ್‌ಘಡದ ದಾಂತೇವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುವಾಗ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದರು. ನಾನು ಗೋಡ್ಸೆಯನ್ನು ಅರ್ಥಮಾಡಿಕೊಂಡಂತೆ ಮತ್ತು ಓದಿದ ಮಟ್ಟಿಗೆ, ಆತ ಕೂಡ ದೇಶಭಕ್ತನಾಗಿದ್ದ. ಆದರೆ ಗಾಂಧೀಜಿಯ ಹತ್ಯೆಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದರು.