ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೇಸ್ ಸಮಿತಿ ‘ ಬಿಡದಿ ಬಳಿಯ ಕೇತಗಾನ ಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಭೂಮಿಯನ್ನು ಹೆಚ್ಡಿಕೆ ಕುಟುಂಬದವರು ಒತ್ತುವರಿ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಸರ್ವೇ ನಡೆಯುತ್ತಿದ್ದು,ಯಾವುದೇ ಒತ್ತಡ ಬೀರದಂತೆ, ಪಾರದರ್ಶಕತೆಯಿಂದ ನಡೆಯಲು ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದೆ.
ಮೈಸೂರು ನಗರ ಕಾಂಗ್ರೆಸ್ ವಕ್ತಾರ ಎಸ್ ರಾಜೇಶ್ ಮಾತನಾಡಿ ” ಹೆಚ್ ಡಿ ಕುಮಾರ ಸ್ವಾಮಿಯವರ 45 ಎಕರೆ ಜಮೀನನ್ನು ಕಾಂಗ್ರೆಸ್ ಸರ್ಕಾರ ಲಪಟಾಯಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಸರ್ವೆ ನಡೆಸುತ್ತಿರುವುದು ತಮ್ಮದೇ ಕುಟುಂಬದ ಸದಸ್ಯರಾದ ಅನಸೂಯ ಹಾಗೂ ಸಂಭಂದಿ ಡಿ ಸಿ ತಮ್ಮಣ್ಣ ಕೇತಗಾನ ಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಹಾಗೂ ಗೋಮಾಳವನ್ನು ಕಬಳಿಸಿದ್ದಾರೆ ಎಂದು ಉಚ್ಚ ನ್ಯಾಯಾಲಯದಲ್ಲಿ ಸಮಾಜ ಪರಿವರ್ತನಾ ಸಂಘಟನೆಯಿಂದ ದಾವೆ ಹೂಡಲಾಗಿದೆ.ಅದರ ಅನ್ವಯ ಘನ ನ್ಯಾಯಾಲಯ ಆದೇಶದಂತೆ ಕೇತಗಾನ ಹಳ್ಳಿಯಲ್ಲಿ ಬರುವ 150 ಕ್ಕೂ ಹೆಚ್ಚು ಕುಟುಂಬಗಳ ಜಮೀನನ್ನು ಸರ್ವೆ ನಡೆಸಲು ಅಧಿಕಾರಿಗಳನ್ನು ನೇಮಕ ಮಾಡಿದೆ ಹೊರತು ಕಾಂಗ್ರೆಸ್ ಸರ್ಕಾರ ನಿಮ್ಮ ಜಮೀನನ್ನು ಕಬಳಿಸಲು ಪ್ರಯತ್ನಿಸಿಲ್ಲ, ಇಂತಹ ಆರೋಪ ಸತ್ಯಕ್ಕೆ ದೂರವಾದದ್ದು “ಎಂದರು.
ಅರ್ಜಿಯ ಅನ್ವಯ ಘನ ನ್ಯಾಯಾಲಯ ಕಂದಾಯ ಅಧಿಕಾರಿಗಳಿಗೆ ಛೀಮಾರಿ ಹಾಕಿ, ಪಾರದರ್ಶಕವಾಗಿ,ಪ್ರಾಮಾಣಿಕವಾಗಿ ತನಿಖೆ ನಡೆಸಿ,ವರದಿ ನೀಡುವಂತೆ ಸೂಚಿಸಿದೆ.
ಸರ್ವೆ ಕಾರ್ಯಕ್ಕೆ ಕುಮಾರ ಸ್ವಾಮಿಯವರು ಅಧಿಕಾರಿಗಳಿಗೆ ಧಮ್ಕಿ ಹಾಕಿ, ಬೆದರಿಕೆ ಒಡ್ಡಿ, ತನಿಖೆಗೆ ಅಡ್ಡಿ ಪಡಿಸುತ್ತಿರುವುದು ಘನ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವಂತಿದೆ. ಭೂ ಕಂದಾಯಾಧಿಕಾರಿಗಳು ಸುಮಾರು 150 ಕ್ಕೂ ಹೆಚ್ಚು ಕುಟುಂಬಗಳ ಜಮೀನುಗಳ ಸರ್ವೆ ಕಾರ್ಯ ನಡೆಸುತ್ತಿದ್ದಾರೆ. ಕೇವಲ ಕುಮಾರ ಸ್ವಾಮಿಯವರ ಜಮೀನು ಮಾತ್ರ ಸರ್ವೆ ನಡೆಸುತ್ತಿಲ್ಲ ಎಂಬುದು ಮನಗಾಣಬೇಕಾಗಿದೆ.
ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ‘ ಸಂಡೂರಿನ ಎನ್ ಈ ಬಿ ರೇಂಜ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರು, ಗಣಿ ಅಧಿಕಾರಿಗಳು ಅನುಮತಿಗೆ ವಿರೋಧ ವ್ಯಕ್ತಪಡಿಸಿದ್ದರೂ ಕೂಡಾ 450 ಎಕರೆ ಜಮೀನನ್ನು ಗಣಿಗಾರಿಕೆ ನಡೆಸಲು ತರಾತುರಿಯಲ್ಲಿ ಸಹಿ ಮಾಡಿದ್ದೀರಿ ವಿನಯ್ ಘೋಯಲ್ ಎಂಬ ವ್ಯಕ್ತಿಗೆ. ಈ ಸಂಭಂದ ತಮ್ಮ ವಿರುದ್ಧ ಘನ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವುದು ಮರೆತಂತಿದೆ ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಹಲಗೆ ಒಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಲವಾರು ಭೂ ಹಗರಣದಲ್ಲಿ ನೀವು ಭಾಗಿಯಾಗಿರುವುದು ಕರ್ನಾಟಕದ ಜನತೆಗೆ ತಿಳಿದಿದೆ. ಹೀಗಾಗಿ ಕೇತಗಾನ ಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಸರ್ವೆ ಕಾರ್ಯ ನಿಷ್ಪಕ್ಷಪಾತ ತನಿಖೆ ನಡೆಯಲು ತಾವು ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮೈಸೂರು ನಗರ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬೆಟ್ಟಿಂಗ್ ದಂಧೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶ್ರೀನಿವಾಸ್, ಕೇಶವ, ಓಂಕಾರ್ ರವಿ, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಎಸ್ ಎ ರಹೀಮ್, ಶ್ರೀನಿವಾಸ್, ಸೈಯ್ಯದ್ ಫಾರೂಕ್ ಇನ್ನಿತರರು ಇದ್ದರು.
