ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆಹಾನಿಯಾಗಿದ್ದು, ಸಂತ್ರಸ್ತ ರೈತರಿಗೆ ಮಧ್ಯಂತರ ಪರಿಹಾರದ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿಯಿರುವ ಕಡತಗಳಿಗೆ ಸಹಿ ಹಾಕಿ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜುಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, “ಮುಂಗಾರು ಹಂಗಾಮಿನ ಹವಾಮಾನ ವೈಪರೀತ್ಯ ಹಾಗೂ ಜಿಆರ್‌ಜಿ-152 ಹಾಗೂ ಜಿಆರ್‌ಜಿ-811 ಸ್ಥಳೀಯ ಕಳಪೆ ಬಿತ್ತನೆ ಬೀಜದಿಂದಾಗಿ ಶೇ.90ರಷ್ಟು ತೊಗರಿ ಬೆಳೆ ಹಾಳಾಗಿದೆ. ಈ ಬೆಳೆಹಾನಿಗೆ ಈವರೆಗೂ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಈ ಕುರಿತು ಹಲವು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಪರಿಹಾರದ ಹಣ ಬಿಡುಗಡೆಗೊಳಿಸಲು ಕಡತಗಳನ್ನು ಮುಖ್ಯಮಂತ್ರಿಗಳಿಗೆ ರವಾನಿಸಲಾಗಿದೆಯೆಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕೆ ಸಹಿ ಹಾಕಿ ಅನುಮೋದನೆ ಮಾಡಬೇಕು. ಜತೆಗೆ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ವಿಮಾ ತುಂಬಿದ ಜಿಲ್ಲೆಯ ರೈತರಿಗೆ ₹85 ಕೋಟಿ ಬಿಡುಗಡೆ ಮಾಡಲಾಗುವುದೆಂದು ಹೇಳಿ ಅದರಲ್ಲಿ ಕೇವಲ ₹14 ಕೋಟಿ ಮಾತ್ರ ಬಂದಿದೆ. ಬಾಕಿ ₹71 ಕೋಟಿ ಪರಿಹಾರ ಹಣ ಬಿಡುಗಡೆಯಾಗಿಲ್ಲ” ಎಂದು ದೂರಿದರು.
ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದ್ದು, ಸಂಕನಾಳ ಶಾಖಾ ಕಾಲುವೆಯಿಂದ ಅಂದಾಜು 2 ಕಿಮೀವರೆಗೆ ವಿತರಣೆ ಕಾಲುವೆ ನಿರ್ಮಿಸಿ, ಕಾಲುವೆಗೆ ಮೂಲಕ ಸುತ್ತಮುತ್ತಲಿನ ಹಳ್ಳಿಗಳಾದ ಕನ್ನಳ, ಅಗಸಬಾಳ, ಸಂಕನಾಳ, ಶೂಲವಾಡಗಿ, ಕಣಕಾಲ ಸೇರಿದಂತೆ ಒಟ್ಟು ಎಂಟು ಹಳ್ಳಿಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಹಲವು ಮಂದಿ ಸಾವು: ಎನ್ ಎಸ್ ಬೋಸರಾಜ್
ಬಸವನಬಾಗೇವಾಡಿ ತಾಲೂಕು ಅಧ್ಯಕ್ಷ ಉಮೇಶ್ ವಾಲಿಕಾರ, ಬಾಲಪ್ಪ ಗೌಡ ಲಿಂಗದಹಳ್ಳಿ, ಮಾರುತಿ ವಾಲಿಕಾರ, ಮಾರುತಿ ಹೂಗಾರ, ಪರಶುರಾಮ ಮುತ್ತಣ್ಣ, ಶಿವಪ್ಪ ವಾಲಿಕಾರ, ಹನುಮಂತ ಕಲಬುರ್ಗಿ, ಶಿವಶರಣ ನಾಗಶೆಟ್ಟಿ, ಬಸವರಾಜ ನಾಗರೆಡ್ಡಿ, ಸೋಮೇಶ ನಾಗರೆಡ್ಡಿ, ಬಸವರಾಜ ನಾಟಿಕಾರ, ಆನಂದ ನಾಗರೆಡ್ಡಿ, ಸಿದ್ಲಿಂಗಪ್ಪ ನಾಗರೆಡ್ಡಿ, ಮಡಿವಾಳಪ್ಪ ನಾಗರೆಡ್ಡಿ, ಸಾಹೇಬಗೌಡ ಹೊಸೂರು, ಯಮನಪ್ಪ ಸರೊರ, ಹೊನ್ನಪ್ಪ ನಾಟಿಕಾರ, ಗುರುಲಿಂಗಯ್ಯ ಹಳ್ಳಿಮಠ, ಜೀವಯ್ಯ ತೆಗ್ಗಿನ ಮಠ, ಹನುಮಂತ ಹಡಪದ, ಮಲ್ಲು ಬಜಂತ್ರಿ, ಸಂಗಮೇಶ ಮೇಟಿ ಇತರರು ಇದ್ದರು.