ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ವಿರುದ್ಧ ಸ್ನೇಹಮಯಿ ಕೃಷ್ಣ ಮಾಡಿದ್ದ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ಲೋಕಾಯುಕ್ತದ ಮಧ್ಯಂತರ ತನಿಖಾ ವರದಿ ಹೇಳಿದೆ.
ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತಕ್ಕೆ ದೂರು ನೀಡಿ, ಮೊ.ನಂ 11/2024, 500 120(2), 166, 403, 406, 420, 426, 465, 468, 340, 351 ಭಾರತೀಯದಂಡ ಸಂಹಿತೆ, 9, 13 ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988, 3, 53 & 54 ಬೇನಾಮಿ ಆಸ್ತಿ ವಹಿವಾಟುತಡೆ ಕಾಯ್ದೆ-1988, 3, 4 ಕರ್ನಾಟಕ ಭೂ ಕಬಳಿಕೆ -2011 (1) ಅಡಿ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಲೋಕಾಯುಕ್ತ ತನಿಖಾಧಿಕಾರಿಗಳು ಮುಡಾ ಪ್ರಕರಣ ಸಿವಿಲ್ ಸ್ವರೂಪದ್ದೆಂದು, ತನಿಖೆ ನಡೆಸಲು ತಕ್ಕುದಲ್ಲವೆಂದು, ಸಂಗತಿ ಅಥವಾ ಕಾನೂನಿನ ತಪ್ಪು ತಿಳಿವಳಿಕೆಯೆಂದು, ಕ್ರಮ ಜರುಗಿಸತಕ್ಕುದಲ್ಲವೆಂದು (ಇದರಡಿಯಲ್ಲಿ ತನಿಖೆ ನಡೆಸದೆ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ) ಹಾಗೂ ಸಾಕ್ಷ್ಯಾಧಾರಗಳ ಕೊರತೆ ಕಂಡು ಬಂದಿದೆ ಎಂದು ಐದು ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!
ಪ್ರಕರಣದ ಆರೋಪಿ-1 ರಿಂದ ಆರೋಪಿ-4 ರವರೆಗಿನ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲವಾದ್ದರಿಂದ ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಳ್ಳುತ್ತಿದ್ದು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ 2016ನೇ ಸಾಲಿನಿಂದ 2024ನೇ ಸಾಲಿನವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನಗಳನ್ನು ನೀಡಿರುವ ಆರೋಪಗಳ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಕಲಂ 173 (8) ಸಿ.ಆರ್.ಪಿ.ಸಿ ರೀತ್ಯಾ ಹೆಚ್ಚುವರಿ ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಳ್ಳಲಾಗುವುದು ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ.
ಲೋಕಾಯುಕ್ತ ವರದಿಯನ್ನು ವಿರೋಧಿಸುವುದಿದ್ದರೆ, ತಾವು (ಸ್ನೇಹಮಯಿ ಕೃಷ್ಣ) ಈ ನೋಟಿಸ್ ತಲುಪಿದ ಒಂದು ವಾರದೊಳಗಾಗಿ ಮೇಲೆ ನಮೂದಿಸಿದ ಮ್ಯಾಜಿಸ್ಟ್ರೇಟರ ಎದುರು ಆ ಬಗ್ಗೆ ವಿರೋಧಿಸಬಹುದಾಗಿದೆ ಎಂದು ಲೋಕಾಯುಕ್ತ ಹೇಳಿದೆ.
