ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನವೀನ್ ಎಂಬುವವರಿಗೆ ಸೇರಿದ ಕರುವನ್ನು ಪ್ರತಿದಿನ ಎಂದಿನಂತೆ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ರಾತ್ರಿ ವೇಳೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಕಾಲ್ಕಿತ್ತಿದ್ದಾರೆ. ಹಲ್ಲೆಗೊಳಗಾದ ಕರು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಕರುವಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇತ್ತೀಚೆಗೆ ಗೋವುಗಳ ಮೇಲಿನ ದಾಳಿಗಳು ಹೆಚ್ಚುತ್ತಿದ್ದು, ಈ ಪ್ರಕರಣವೂ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಗ್ರಾಮದಲ್ಲಿ ಈ ಪ್ರಕರಣ ಪುನರಾವರ್ತನೆಯಾಗಿದೆ. ಈಗಾಗಲೇ ನಡೆದಿರುವ ಕೆಲವು ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಕರುವಿನ ಮೇಲಿನ ದಾಳಿಗೆ ಕಾರಣವಾಗಿದೆ. ಕೂಡಲೇ ಇಲಾಖೆ ಎಚ್ಚೆತ್ತು ಇಂತಹ ಕೃತ್ಯ ಎಸಗುವ ದುರುಳನ್ನು ಪತ್ತೆ ಹಚ್ಚಿ ಗಂಭೀರ ಶಿಕ್ಷೆಗೆ ಒಳಪಡಿಸಬೇಕು. ಈ ರೀತಿಯ ಪೈಶಾಚಿಕ ಕೃತ್ಯಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಮತ್ತೊಂದು ಎಟಿಎಂ ಕಳ್ಳತನ ಪ್ರಕರಣ; ಸಾರ್ವಜನಿಕರಲ್ಲಿ ಆತಂಕ
ಘಟನೆ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
