ದಾವಣಗೆರೆ ತಾಲೂಕು ಮಾಯಕೊಂಡ ಗ್ರಾಮದ ರೈತ ಗುಡ್ಡಪ್ಪ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ರೈತರ ಮನೆಗಳಿಗೆ ಫೈನಾನ್ಸ್ ನವರು ಸಾಲ ಮರುಪಾವತಿ ನೋಟಿಸ್ ಅಂಟಿಸಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತಸಂಘ ಮತ್ತು ಹಸಿರುಸೇನೆ, ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಮಾಯಕೊಂಡದಿಂದ ದಾವಣಗೆರೆಗೆ ನೂರಾರು ರೈತರು ಬೈಕ್ ರ್ಯಾಲಿ ಮೂಲಕ ಆಗಮಿಸಿ ಫೈನಾನ್ಸ್ ಕಂಪೆನಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ್, “ರೈತನ ಮನೆ ಬಾಗಿಲಿಗೆ ಸಾಲ ವಸೂಲಾತಿ ಅಥವಾ ಹರಾಜು ನೋಟಿಸ್ ಅಂಟಿಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ರೈತರು ಗೌರವಯುತವಾಗಿ ಸಾಲ ತೀರಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಮನೆ ಬಾಗಿಲಿಗೆ ಹೋಗಿ ನೋಟಿಸ್ ಅಂಟಿಸುವುದು, ಗಲಾಟೆ ಮಾಡುವುದು ರೈತನಿಗೆ ಅವಮಾನ ಮಾಡಿದಂತಾಗುತ್ತದೆ. ಕೇವಲ ಒಂದು ಎರಡು ಕಂತುಗಳು ಬಾಕಿ ಇದ್ದರೆ ನೋಟಿಸ್ ನೀಡುವುದು ಕಾನೂನಿನ ಉಲ್ಲಂಘನೆ ಆಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ದಾವಣಗೆರೆಯ ಫೈನಾನ್ಸ್ ಕಂಪನಿಯಲ್ಲಿ 18 ಲಕ್ಷ ಸಾಲ ಪಡೆದಿದ್ದ ಮಾಯಕೊಂಡ ಗ್ರಾಮದ ಗುಡ್ಡಪ್ಪ ಈವರೆಗೆ 9 ಲಕ್ಷ ಮರುಪಾವತಿ ಮಾಡಿದ್ದು, ಈಗಲೂ ಕೂಡ 18 ಲಕ್ಷ ಬಾಕಿ ಇದೆ ಅನ್ನುತ್ತಾರೆ. ಕಟ್ಟಿರುವ ಹಣವೆಲ್ಲ ಬಡ್ಡಿಗೆ ಜಮಾ ಮಾಡಿಕೊಂಡಿದ್ದಾರೆ. ಇದೇ ರೀತಿ ಜಿಲ್ಲೆಯ ಹಲವು ರೈತರಿಗೆ ಮೋಸವಾಗಿದೆ. ಜಿಲ್ಲೆಯ ಹಲವು ರೈತರ ಮನೆಗಳಿಗೆ ನೋಟಿಸ್ ಗಳನ್ನು ಅಂಟಿಸಿದ್ದಾರೆ. ಇದಕ್ಕೆ ಹೆದರಿ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಫೈನಾನ್ಸ್ ಗಳ, ಬ್ಯಾಂಕುಗಳ ಈ ವರ್ತನೆಯನ್ನು ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ. ರೈತ ಸಂಘ ಈ ಹೋರಾಟ ಹಮ್ಮಿಕೊಂಡಿದ್ದು, ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಸುಗ್ರೀವಾಜ್ಞೆ ಅನ್ವಯ ಕಂಪನಿಗಳ ವಿರುದ್ಧ ದೂರು ನೀಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಯ ಹಾವಳಿ; ಚಿಕಿತ್ಸೆಗೆ ಹೊರಗಿನಿಂದ ಔಷಧಿ ತರಿಸಿದ ಆರೋಪ
ತಾಲೂಕು ಕಛೇರಿಗೆ ತೆರಳಿ ಫೈನಾನ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅಶ್ವಥ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಜನಹಟ್ಟಿ ರಾಜು, ಚಿನ್ನ ಸಮುದ್ರ ಭೀಮಾನಾಯ್ಕ, ಹುಚ್ಚವ್ವನಹಳ್ಳಿ ಪ್ರಕಾಶ್, ಕೋಗಲೂರು ಕುಮಾರ್, ಹೂವಿನಮಡು ನಾಗರಾಜ್, ಸಿರಗಾನಹಳ್ಳಿ ರಾಜಣ್ಣ, ಆನಗೋಡು ಭೀಮಣ್ಣ, ಮಾಯಕೊಂಡದ ಸಂತೋಷ್ ಕೋಟಿ, ಮುಂಡರಗಿ ರಾಮಣ್ಣ, ಹೊನ್ನಮರಡಿ ಶಿವಕುಮಾರ್, ಗಿರಿಯಾಪುರ ಗಂಗಾಧರಸ್ವಾಮಿ, ಚಿನ್ನಸಮುದ್ರ ಸುರೇಶ್ ನಾಯ್ಕ, ಕುರ್ಕಿ ಹನುಮಂತ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಉಪ್ಪನಾಯಕನಹಳ್ಳಿ ಉಮೇಶ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
