ಭಾರತದ ಹೊಸ ಮುಖ್ಯ ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರನ್ನು ಮುಖ್ಯ ಆಯುಕ್ತರನ್ನಾಗಿ ನೇಮಿಸಿರುವ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ನೇಮಕ ಪ್ರಕ್ರಿಯೆಗಳ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ನೇಮಕ ಸಮಿತಿಯ ರಚನೆಯೇ ಸರಿ ಇಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಸಮಿತಿ ರಚನೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯೂ ನಡೆಯುತ್ತಿದೆ.
ವಿವಾದಿತ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದ್ದಾರೆ. ಆಡಳಿತ ಪಕ್ಷದಿಂದ ಇಬ್ಬರು, ವಿರೋಧ ಪಕ್ಷದಿಂದ ಒಬ್ಬರು ಇರುವ ಈ ಸಮಿತಿಯಲ್ಲಿ ನಿಷ್ಪಕ್ಷಪಾತವಾಗಿ ಚುನಾವಣಾ ಆಯುಕ್ತರನ್ನು ನೇಮಕ ಸಾಧ್ಯವೇ ಇಲ್ಲ. ಆಯ್ಕೆಯಾಗುವ ಆಯುಕ್ತರು ಆಡಳಿತಾರೂಢ ಪಕ್ಷದ ಬೆಂಬಲಿಗರು, ನಂಬಿಕಸ್ಥರು ಆಗಿರುತ್ತಾರೆ ಅಥವಾ ಆಗುತ್ತಾರೆ ಎಂಬುದು ವಿವಾದದ ಸರಳ ಸಂಗತಿ.
ಅಂದಹಾಗೆ, ಈ ಸಮಿತಿ ಹಿಂದಿನಿಂದಲೇ ಅಸ್ತಿತ್ವದಲ್ಲಿದೆ. ಆದರೆ, ಹಿಂದೆ ಪ್ರಧಾನಿ, ವಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ಸಿಜೆಐ ಸಮಿತಿಯಲ್ಲಿದ್ದರು. ಈಗ, 2023ರಲ್ಲಿ ನಿಮಯವನ್ನೇ ಬದಲಿಸಿದ ಮೋದಿ ಸರ್ಕಾರ, ಸುಪ್ರೀಂ ಕೋರ್ಟ್ ಸಿಜೆಐ ಅವರನ್ನು ಹೊರಗಿಟ್ಟು, ಸಚಿವ ಸಂಪುಟದ ಒಬ್ಬರು ಸಚಿವರು ಸಮಿತಿಯಲ್ಲಿರುತ್ತಾರೆ ಎಂದು ತಿದ್ದುಪಡಿ ಮಾಡಿತು. ಈ ತಿದ್ದುಪಡಿ ಅಂದಿನಿಂದಲೂ ಚರ್ಚೆಗೂ, ವಿರೋಧಕ್ಕೂ, ವಿವಾದಕ್ಕೂ ಕಾರಣವಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಓರ್ವ ಚುನಾವಣಾ ಆಯುಕ್ತರ ಆಯ್ಕೆಗಾಗಿ ಸೋಮವಾರ (ಫೆ.17) ಆಯ್ಕೆ ಸಮಿತಿಯು ಸಭೆ ಸೇರಿತ್ತು. 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆ ಮತ್ತು ತೀರ್ಪು ಬರುವವರೆಗೆ ನೇಮಕಾತಿಯನ್ನು ಮುಂಡೂಡಬೇಕೆಂದು ಸರ್ಕಾರವನ್ನು ರಾಹುಲ್ ಒತ್ತಾಯಿಸಿದ್ದರು.
ಆದರೂ, ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ರಾತ್ರೋರಾತ್ರಿ ಮೋದಿ ಸರ್ಕಾರ ಶಿಫಾರಸು ಮಾಡಿತು. ಅದಕ್ಕೆ ತಕ್ಷಣವೇ ರಾಷ್ಟ್ರಪತಿಗಳು ಅಂಕಿತ ಹಾಕಿದರು. ನೇಮಕದ ಆದೇಶ ಹೊರಡಿಸಿದರು.
ಮುಖ್ಯ ಚುನಾವಣಾ ಆಯುಕ್ತರನ್ನು ಹಿಂದೆ ಹೇಗೆ ನೇಮಿಸಲಾಗುತ್ತಿತ್ತು?
ಚುನಾವಣಾ ಆಯೋಗವು ಓರ್ವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿರುವ ಮೂರು ಸದಸ್ಯರ ಸಂಸ್ಥೆಯಾಗಿದೆ. ಮೂವರು ಚುನಾವಣಾ ಆಯುಕ್ತರು ಸಮಾನರಾಗಿದ್ದರೂ, ಭಾರತದ ಮುಖ್ಯ ನ್ಯಾಯಮೂರ್ತಿಯಂತೆ ಮುಖ್ಯಚುನಾವಣಾ ಆಯುಕ್ತರು ಕೂಡ ಹೆಚ್ಚು ಜವಾಬ್ದಾರಿ ಉಳ್ಳವರು ಅಥವಾ ಆದ್ಯತೆಯನ್ನು ಹೊಂದಿರುವವರು.
ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾದ ಆರಂಭದಲ್ಲಿ ಮುಖ್ಯ ಆಯುಕ್ತರು ಮತ್ತು ಆಯುಕ್ತರ ನೇಮಕಾತಿಗಾಗಿ ಸಂಸತ್ತು ಯಾವುದೇ ಕಾನೂನನ್ನು ಅಂಗೀಕರಿಸಿರಲಿಲ್ಲ. ಪ್ರಧಾನಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ನೇಮಕಾತಿ ಮಾಡುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಬಹುತೇಕ ಸಮಯಗಳಲ್ಲಿ, ಅಧಿಕಾರದಲ್ಲಿದ್ದ ಮುಖ್ಯ ಆಯುಕ್ತರ ಉತ್ತರಾಧಿಕಾರಿಯು ಅವರ ಜೊತೆಗೆ ಇರುತ್ತಿದ್ದ ಹಿರಿಯ ಚುನಾವಣಾ ಆಯುಕ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿತ್ತು. ಅದರಲ್ಲೂ, ಆಯೋಗಕ್ಕೆ ಮೊದಲು ನೇಮಕಗೊಂಡವರನ್ನು ಹಿರಿಯರು ಎಂದು ಹೇಳಲಾಗುತ್ತಿತ್ತು. ಅದರಂತೆ, ಇದ್ದ ಇಬ್ಬರು ಆಯುಕ್ತರಲ್ಲಿ ಮೊದಲು ಯಾರು ಚುನಾವಣಾ ಆಯುಕ್ತರಾಗುತ್ತಿದ್ದರೋ, ಅವರು ನಂತರದಲ್ಲಿ ಮುಖ್ಯ ಆಯುಕ್ತರಾಗಿ ಬಡ್ತಿ ಪಡೆಯುತ್ತಿದ್ದರು.
ಉದಾಹರಣೆಗೆ, ಕಳೆದ ನಾಲ್ಕೂವರೆ ವರ್ಷದಿಂದ ರಾಜೀವ್ ಕುಮಾರ್ ಮುಖ್ಯ ಆಯುಕ್ತರಾಗಿದ್ದರು. ಅವರೊಂದಿಗೆ ಜ್ಞಾನೇಶ್ ಕುಮಾರ್ ಮತ್ತು ಸುಖ್‌ಬೀರ್ ಸಿಂಗ್ ಸಂಧು ಚುನಾವಣಾ ಆಯುಕ್ತರಾಗಿದ್ದರು. ಆದರೆ, ಕುಮಾರ್ ಮತ್ತು ಸಂಧು – ಇಬ್ಬರನ್ನೂ 2024ರ ಮಾರ್ಚ್ 14ರಂದು ಒಂದೇ ದಿನ ಚುನಾವಣಾ ಆಯೋಗಕ್ಕೆ ನೇಮಿಸಲಾಯಿತು. ಗಮನಾರ್ಹವಾಗಿ ಇಬ್ಬರೂ 1988ರ ಬ್ಯಾಚ್‌ನ ಐಎಎಸ್ ಅಧಿಕಾರಿಗಳು. ಹಾಗಾದರೆ, ಹಿರಿಯ ನೇಮಕಾತಿ ಯಾರು? ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿದ ನೇಮಕಾತಿ ಅಧಿಸೂಚನೆಯಲ್ಲಿ ಮೊದಲಿಗೆ ಜ್ಞಾನೇಶ್ ಕುಮಾರ್ ಅವರ ಹೆಸರಿದ್ದ ಕಾರಣ, ಅವರೇ ಹಿರಿಯರಾಗುತ್ತಾರೆ ಎಂದು ಸರ್ಕಾರ ಮತ್ತು ಆಯೋಗದ ಮೂಲಗಳು ಹೇಳುತ್ತವೆ.
ಅಂದರಂತೆಯೇ, ಹಳೆಯ ವ್ಯವಸ್ಥೆಯಡಿ ನೇಮಕಾತಿ ನಡೆಸಿದ್ದರೆ, ರಾಜೀವ್ ಕುಮಾರ್ ನಿವೃತ್ತರಾದ ನಂತರ, ಅವರ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ಅವರನ್ನು ರಾಷ್ಟ್ರಪತಿಗಳು ನೇಮಿಸುತ್ತಿದ್ದರು. ಆದರೆ, ಈ ಬಾರಿ ನೇಮಕಾತಿ ಪ್ರಕ್ರಿಯೆಯು ಹಿಂದಿನ ರೀತಿಯಲ್ಲಿ ಅಥವಾ ಹಳೆಯ ರೀತಿಯಲ್ಲಿ ನಡೆಯಲಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕಾಯ್ದೆಯ ಅಡಿಯಲ್ಲಿ ನಡೆಯಿತು.
ಹೊಸ ಕಾನೂನು ಏಕೆ ಜಾರಿಗೆ ಬಂದಿತು?
ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವಲ್ಲಿ ಕೇಂದ್ರ ಸರ್ಕಾರಕ್ಕಿದ್ದ ವಿಶೇಷ ಅಧಿಕಾರವನ್ನು ಪ್ರಶ್ನಿಸಿ 2015 ಮತ್ತು 2022ರ ನಡುವೆ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಆ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕಾರ್ಯಾಂಗಕ್ಕೆ ವಿಶೇಷ ನೇಮಕಾತಿ ಅಧಿಕಾರವನ್ನು ಸಂವಿಧಾನದಲ್ಲಿ ನೀಡಲಾಗಿಲ್ಲ ಎಂಬುದನ್ನು ಗಮನಿಸಿತ್ತು. ಚುನಾವಣಾ ಆಯುಕ್ತರ ನೇಮಕಾತಿಗಾಗಿ ಹೊಸ ಪ್ರಕ್ರಿಯೆಯನ್ನು ರಚಿಸಿ, 2023ರ ಮಾರ್ಚ್ 2ರಂದು ತೀರ್ಪು ನೀಡಿತು. ಆ ತೀರ್ಪಿನಲ್ಲಿ, ”ಪ್ರಧಾನಿ, ಲೋಕಸಭಾ ವಿಪಕ್ಷ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಾಧೀಶರು (ಸಿಜೆಐ) ಇರುವ ಆಯ್ಕೆ ಸಮಿತಿಯು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುತ್ತದೆ. ಇದಕ್ಕೆ ಪೂರಕವಾಗಿ ಚುನಾವಣಾ ಆಯುಕ್ತರ ನೇಮಕದ ಪ್ರಕ್ರಿಯೆಗಾಗಿ ಸಂಸತ್ತು ಹೊಸ ಕಾನೂನನ್ನು ಜಾರಿಗೆ ತರಬೇಕು” ಎಂದು ಆದೇಶಿಸಿತ್ತು.
ತೀರ್ಪು ಬಂದ ಕೆಲವೇ ತಿಂಗಳುಗಳಲ್ಲಿ, ಚುನಾವಣಾ ಆಯೋಗದಲ್ಲಿ ಆಯುಕ್ತರ ಹುದ್ದೆಗಳು ಖಾಲಿಯಾಗುವುದಕ್ಕೂ ಮುನ್ನವೇ ಕೇಂದ್ರ ಸರ್ಕಾರವು 2023ರ ಡಿಸೆಂಬರ್‌ನಲ್ಲಿ ಹೊಸ ಮಸೂದೆಯನ್ನು ಮಂಡಿಸಿ, ಅಂಗೀಕರಿಸಿತು. ಆದರೆ, ನ್ಯಾಯಾಲಯವು ಶಿಫಾರಸು ಮಾಡಿದಂತೆ, ಆಯ್ಕೆ ಸಮಿತಿಯು ‘ಪ್ರಧಾನಿ, ವಿಪಕ್ಷ ನಾಯಕ ಹಾಗೂ ಸಿಜೆಐ’ ಅವರನ್ನು ಒಳಗೊಳ್ಳಬೇಕು ಎಂಬುದನ್ನು ಕೇಂದ್ರ ಸರ್ಕಾರ ಬದಲಾಯಿಸಿತು. ಸಿಜೆಐ ಬದಲಿಗೆ, ಸಮಿತಿಯಲ್ಲಿ ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಸಂಪುಟ ಮಂತ್ರಿ ಇರುತ್ತಾರೆಂದು ಸೇರಿಸಿತು. ಮತ್ತೆ, ಸರ್ಕಾರಕ್ಕೆ ವಿಶೇಷ ಅಧಿಕಾರವನ್ನೇ ನೀಡಿತು.
ಅದರಂತೆ, ಹೊಸ ಕಾಯ್ದೆಯಡಿ, ಸುಪ್ರೀಂ ಕೋರ್ಟ್ ಸಿಜೆಐ ಅವರನ್ನು ಸಮಿತಿಯಿಂದ ಕೈಬಿಡಲಾಗಿದೆ. ಕೇಂದ್ರ ಸಂಪುಟದ ಒಬ್ಬರು ಸಚಿವರು ಸಮಿತಿಯ ಸದಸ್ಯರನ್ನಾಗಿ ಒಳಗೊಳ್ಳಿಸಿಕೊಳ್ಳಲಾಗಿದೆ. ಪ್ರಸ್ತುತ ಆಯ್ಕೆ ಸಮಿತಿಯಲ್ಲಿ ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಮೋದಿಯಿಂದ ನಾಮನಿರ್ದೇಶಿತರಾಗಿರುವ ಗೃಹ ಸಚಿವ ಅಮಿತ್ ಶಾ ಇದ್ದಾರೆ.
ಹೊಸ ಕಾಯಿದೆಯಡಿ ಇರುವ ಷರತ್ತುಗಳೇನು?
ಸಾಮಾನ್ಯವಾಗಿ, ಹಿಂದಿನಿಂದ ಈವರೆಗೂ ಆಯೋಗಕ್ಕೆ ನಿವೃತ್ತ ಹಿರಿಯ ಅಧಿಕಾರಿಗಳನ್ನು ನೇಮಿಸುತ್ತಿದೆ. ಆದರೆ, ಹೊಸ ಕಾಯಿದೆಯು ಆಯುಕ್ತರಾಗಲು ಕೆಲವು ಅರ್ಹತೆಗಳನ್ನು ಸೂಚಿಸಿದೆ. ಕಾಯಿದೆಯ ಸೆಕ್ಷನ್ 5ರಲ್ಲಿ “ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರಾಗಿ ಆಯ್ಕೆಯಾಗುವವರು ಭಾರತ ಸರ್ಕಾರದ ಕಾರ್ಯದರ್ಶಿ ಹುದ್ದೆಗೆ ಸಮಾನವಾದ ಹುದ್ದೆಗಳನ್ನು ನಿರ್ವಹಿಸಿದ್ದವರಾಗಿರಬೇಕು. ಚುನಾವಣಾ ನಿರ್ವಹಣೆ ಜ್ಞಾನ ಮತ್ತು ಅನುಭವವನ್ನು ಹೊಂದಿರುವ ವ್ಯಕ್ತಿಗಳಾಗಿರಬೇಕು” ಎಂದು ಹೇಳಲಾಗಿದೆ.
ಅಲ್ಲದೆ, “ಒಮ್ಮೆ ಮುಖ್ಯ ಚುನಾವಣಾ ಆಯುಕ್ತರಾಗಿ ಅಥವಾ ಇತರ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದವರು ಮರು ನೇಮಕಾತಿಗೆ ಅರ್ಹರಾಗಿರುವುದಿಲ್ಲ. ಚುನಾವಣಾ ಆಯುಕ್ತರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದರೂ, ಅವರ ಅಧಿಕಾರಾವಧಿಯು ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರಾಗಿ ಒಟ್ಟು ಆರು ವರ್ಷಗಳಿಗಿಂತ ಹೆಚ್ಚಿರಬಾರದು” ಎಂದು ಕೂಡ ಆಯೋಗ ಹೇಳುತ್ತದೆ.
ಈ ಬಾರಿ, ಮುಖ್ಯ ಆಯುಕ್ತರು ಮತ್ತು ಆಯುಕ್ತರ ನೇಮಕಾತಿ ಹೇಗೆ ನಡೆಯಿತು?
ಪ್ರಸ್ತುತ ಮುಖ್ಯ ಆಯುಕ್ತರನ್ನಾಗಿ ಜ್ಞಾನೇಶ್ ಕುಮಾರ್ ಅವರನ್ನು ಹೊಸ ಕಾನೂನಾದ ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಹಾಗೂ ಅಧಿಕಾರಾವಧಿ) ಕಾಯ್ದೆ-2023’ ಅಡಿಯಲ್ಲಿ ನೇಮಿಸಲಾಗಿದೆ. ಈ ಕಾನೂನಿನ ಅಡಿಯಲ್ಲಿ ಮುಖ್ಯ ಆಯುಕ್ತರು ಮತ್ತು ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಕೆಲವು ಕಾರ್ಯವಿಧಾನಗಳನ್ನು ನಿಗದಿಪಡಿಸಲಾಗಿದೆ.
ಈ ಕಾಯ್ದೆಯಡಿ, ಚುನಾವಣಾ ಆಯುಕ್ತರ ಆಯ್ಕೆಗಾಗಿ ‘ಶೋಧನಾ ಸಮಿತಿ’ಯನ್ನು ರಚಿಸಲಾಗಿದೆ. ಈ ಸಮಿತಿಯು ಕಾನೂನು ಸಚಿವರು ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಗಳಾಗಿರುವ ಇಬ್ಬರು ಹಿರಿಯ ಅಧಿಕಾರಿಗಳನ್ನು ಹೊಂದಿರುತ್ತದೆ. ಕಾನೂನು ಸಚಿವರು (ಪ್ರಸ್ತುತ ಅರ್ಜುನ್ ರಾಮ್ ಮೇಘವಾಲ್) ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಈ ಸಮಿತಿಯು ಮೊದಲಿಗೆ, ಮುಖ್ಯ ಆಯುಕ್ತರು ಮತ್ತು ಆಯುಕ್ತರ ಹುದ್ದೆಗಳಿಗೆ ತಲಾ ಐದು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸುತ್ತದೆ. ನಂತರ, ಆ ಪಟ್ಟಿಯನ್ನು ಆಯ್ಕೆ ಸಮಿತಿಗೆ ಕಳುಹಿಸಲಾಗುತ್ತದೆ.
ಆಯ್ಕೆ ಸಮಿತಿಯು ಶೋಧನಾ ಸಮಿತಿ ಸಲ್ಲಿಸಿದ ಪಟ್ಟಿಯನ್ನು ಪರಿಶೀಲಿಸಿ, ಮುಖ್ಯ ಆಯುಕ್ತರು ಮತ್ತು ಆಯುಕ್ತರನ್ನು ನೇಮಿಸುತ್ತದೆ. ಮತ್ತೊಂದು ಮುಖ್ಯವಿಚಾರವೆಂದರೆ, ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ, ಶೋಧನಾ ಸಮಿತಿ ಕಳಿಸಿದ ಪಟ್ಟಿಯಲ್ಲಿನ 5 ಅಭ್ಯರ್ಥಿಗಳ ಹೊರತಾಗಿಯೂ, ಹೆಚ್ಚಿನ ಹೆಸರುಗಳನ್ನು ಪರಿಗಣಿಸುವ ಅಧಿಕಾರವನ್ನು ಆಯ್ಕೆ ಸಮಿತಿಗೆ ನೀಡಲಾಗಿದೆ.
ಅದರಂತೆ, ಕಾಯ್ದೆಯು ತಮಗೆ ನೀಡಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ತಲಾ ಐದು ಮಂದಿಗಳ ಹೆಸರನ್ನು ಶೋಧನಾ ಸಮಿತಿಯು ಆಯ್ಕೆ ಸಮಿತಿಗೆ ಕಳಿಸಿತ್ತು. ಆ ಪಟ್ಟಿಯನ್ನು ಪರಿಶೀಲಿಸಿ, ಒಬ್ಬರನ್ನು ಮುಖ್ಯ ಚುನಾವಣಾ ಆಯುಕ್ತರು ಮತ್ತು ಮತ್ತೊಬ್ಬರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಲು ಆಯ್ಕೆ ಸಮಿತಿಯು ಸೋಮವಾರ ಸಂಜೆ ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಸಭೆ ಸೇರಿತ್ತು.
30 ನಿಮಿಷಗಳ ಸಭೆಯಲ್ಲಿ ರಾಹುಲ್ ಗಾಂಧಿ, ‘ಸರ್ಕಾರದ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿವೆ. ಆ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಳ್ಳುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಬೇಕು’ ಎಂದು ಒತ್ತಾಯಿಸಿ ಅಸಮ್ಮತಿ ಪತ್ರ ಸಲ್ಲಿಸಿದ್ದಾರೆ. ಸಭೆಯ ನಡಾವಳಿಗಳಲ್ಲಿ ಅವರ ಅಸಮ್ಮತಿಯನ್ನು ದಾಖಲಿಸಿದ್ದಾರೆ. ಆದಾಗ್ಯೂ, ಮುಖ್ಯ ಚುನಾವಣಾ ಆಯುಕ್ತ ಹುದ್ದೆಗೆ ಜ್ಞಾನೇಶ್ ಕುಮಾರ್ ಮತ್ತು ಆಯುಕ್ತರ ಹುದ್ದೆಗೆ ವಿವೇಕ್ ಜೋಶಿ ಅವರನ್ನು ಆಯ್ಕೆ ಮಾಡಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿ ಅವರ ಅಸಮ್ಮತಿಯನ್ನು ಲೆಕ್ಕಿಸದೆ ಆಯ್ಕೆ ಮಾಡಲಾದ ಆಯ್ಕೆ ಸಮಿತಿಯ ಶಿಫಾರಸಿ ಮೇಲೆ ಸೋಮವಾರ ರಾತ್ರೋರಾತ್ರಿ ಅಧಿಕೃತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, 2023ರ ಕಾಯಿದೆಯಲ್ಲಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫೆಬ್ರವರಿ 19ರಿಂದ ಜಾರಿಗೆ ಬರುವಂತೆ ಮುಖ್ಯ ಆಯುಕ್ತರು ಮತ್ತು ಆಯುಕ್ತರನ್ನು ನೇಮಿಸಿ ಆದೇಶಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕರ್ನಾಟಕ 50 | ಪ್ರಾದೇಶಿಕ ರಾಜಕಾರಣದ ಪ್ರಯೋಗಗಳು; ಒಂದು ಹೆಣ್ಣೋಟ
ಹೀಗಾಗಿಯೇ, ಕೇಂದ್ರ ಸರ್ಕಾರವು ತನ್ನ ಹೆಚ್ಚಿನ ಅಧಿಕಾರದೊಂದಿಗೆ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವುದನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರೋಧಿಸಿದ್ದಾರೆ. “ಚುನಾವಣಾ ಆಯೋಗವು ಚುನಾವಣೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿದೆ. ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ವಿಪಕ್ಷಗಳ ಸ್ಪಷ್ಟ ಪ್ರಶ್ನೆಗಳಿಗೆ ಸರಿಯದ ಉತ್ತರ ನೀಡುತ್ತಿಲ್ಲ. ಆಯೋಗವ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಚಿಯರ್‌ಲೀಡರ್ ರೀತಿಯಲ್ಲಿ ವರ್ತಿಸುತ್ತಿದೆ. ಮಾರ್ಪಡುತ್ತಿದೆ” ಎಂದು ಹೇಳಿದ್ದಾರೆ.
ಹೊಸ ನೇಮಕಾತಿ ಪ್ರಕ್ರಿಯೆ ಅಥವಾ ಕಾನೂನು ಸಮಸ್ಯೆಗಳನ್ನು ಇತ್ಯರ್ಥಪಡಿಸಿದೆಯೇ?
ಹೊಸ ಕಾನೂನಿನ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಾತಿ ಪ್ರಕ್ರಿಯೆಯು ಹಿಂದೆ ಎತ್ತಲಾಗಿದ್ದ ಸಮಸ್ಯೆಗಳು ಅಥವಾ ಪ್ರಶ್ನೆಗಳು ಅಥವಾ ಕಳವಳಗಳನ್ನು ಇತ್ಯರ್ಥಪಡಿಸಿದೆಯೇ ಎಂದು ನೋಡಿದರೆ, ಖಂಡಿತಾ ಇಲ್ಲ. ಚುನಾವಣಾ ಆಯುಕ್ತರ ನೇಮಕಾತಿಗಾಗಿ ಜಾರಿಗೆ ತರಲಾಗಿರುವ ಕಾಯ್ದೆಯೂ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿವೆ. ಮೂವರ ಸಮಿತಿಯಲ್ಲಿ ಇಬ್ಬರು ಸರ್ಕಾರದವರು, ಅಂದರೆ ಆಡಳಿತ ಪಕ್ಷದವರೇ ಆಗಿದ್ದಾರೆ. ಹೀಗಿರುವಾಗ ಬಹುಮತವು ಸರ್ಕಾರದ ನಿರ್ಧಾರದಂತೆಯೇ ಬರುತ್ತದೆ. ಇದು ಪಕ್ಷಾತೀತವಾಗಿ, ಪ್ರಾಮಾಣಿಕವಾಗಿ ಆಯುಕ್ತರನ್ನು ನೇಮಿಸಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಕೇಂದ್ರ ಸರ್ಕಾರಕ್ಕೆ ಮರಳಿ ಅಧಿಕಾರ ನೀಡಿದ್ದು, 2025ರಿಂದ 2022ರವರೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಗಳು ಯಾವ ಪ್ರಶ್ನೆಗಳನ್ನು ಎತ್ತಿದ್ದವೋ, ಆ ಪ್ರಶ್ನೆಗಳಿಗೆ ತದ್ವಿರುದ್ದವಾಗಿವೆ.
ಹೀಗಾಗಿಯೇ, ಹೊಸ ನೇಮಕಾತಿ ಪ್ರಕ್ರಿಯೆಯನ್ನೂ ಪ್ರಶ್ನಿಸುವ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ತೆಗೆದುಹಾಕಿರುವುದನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಶ್ನಿಸಿದೆ. ಎಡಿಆರ್ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಆದರೆ, ಆ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈವರೆಗೆ ವಿಚಾರಣೆ ಮಾಡಿಲ್ಲ.
ಈ ಅರ್ಜಿಗಳು ಎತ್ತಿರುವ ಪ್ರಮುಖ ಸಾಂವಿಧಾನಿಕ ಪ್ರಶ್ನೆ; ಸಂವಿಧಾನ ಪೀಠವು ಹೊರಡಿಸಿದ ತೀರ್ಪನ್ನು ಶಾಸನ ಅಥವಾ ಸುಗ್ರೀವಾಜ್ಞೆಯ ಮೂಲಕ ಅತಿಕ್ರಮಿಸಲು, ಬದಲಿಸಲು ಸಂಸತ್ತಿಗೆ ಅಧಿಕಾರವಿದೆಯೇ ಎಂಬುದು.
ಅರ್ಜಿದಾರರು ರಾಜೀವ್ ಕುಮಾರ್ ಅವರ ನಿವೃತ್ತಿಗೂ ಮೊದಲೇ ಆರಂಭಿಕ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ನ್ಯಾಯಾಲಯವು ಫೆಬ್ರವರಿ 19 ರಂದು – ರಾಜೀವ್ ಕುಮಾರ್ ನಿವೃತ್ತಿಯ ಒಂದು ದಿನದ ಬಳಿಕ – ವಿಚಾರಣೆ ನಡೆಸುವುದಾಗಿ ಸಮಯ ನಿಗದಿ ಮಾಡಿತು. ಆದರೆ, ಇದೀಗ, ವಿಚಾರಣೆಯನ್ನು ಮಾರ್ಚ್ 19ರಂದು ಅಧಿಕೃತವಾಗಿ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ನ್ಯಾಯಾಲಯವು ಹೊಸ ಕಾಯ್ದೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿದರೆ, ನಾನಾ ಪರಿಣಾಮಗಳು ಎದುರಾಗುತ್ತವೆ. ಜ್ಞಾನೇಶ್ ಕುಮಾರ್ ಮತ್ತು ವಿವೇಕ್ ಜೋಶಿ ಅವರ ನೇಮಕವೂ ರದ್ದಾಗುವ ಸಾಧ್ಯತೆಗಳಿವೆ. ಜೊತೆಗೆ, ಆಯ್ಕೆ ಸಮಿತಿಯಿಂದ ಅಮಿತ್ ಶಾ ಹೊರಹೋಗುವ ಮತ್ತು ಮುಖ್ಯ ನ್ಯಾಯಾಮೂರ್ತಿಗಳು ಸಮಿತಿಯ ಭಾಗವಾಗುವ ಸಾಧ್ಯತೆಗಳಿವೆ.