ಮುಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ ಎಂದು ಆರ್ ಅಶೋಕ್ ಟೀಕಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಡಾ ಹಗರಣದಲ್ಲಿ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಕಾಂಗ್ರೆಸ್ ಶಾಸಕರು ಆರೋಪಿ ಸಿದ್ದರಾಮಯ್ಯ ಹಾಗು ಅವರ ಧರ್ಮ ಪತ್ನಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಲೋಕಾಯುಕ್ತ ಪೊಲೀಸರೂ ಸ್ವಲ್ಪ ತಡವಾಗಿ ‘ಬಿ ರಿಪೋರ್ಟ್’ ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪಾಠ ಕಲಿಯದ ‘ರೈಲ್ವೆ ಇಲಾಖೆ’
ಒಂದೇ ಒಂದು ದಿನ ನೆಪಮಾತ್ರಕ್ಕೆ ಆರೋಪಿ ಸಿಎಂ ಸಿದ್ದರಾಮಯ್ಯ ಹಾಗು ಅವರ ಪತ್ನಿ ಅವರನ್ನು ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡಿರಿವುದು ರಾಜ್ಯ ಕಂಡ ‘ಐತಿಹಾಸಿಕ ದುರಂತ’. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ‘ನ್ಯಾಯ’ ಮಣ್ಣುಪಾಲಾಗಿದೆ. ಸಮರ್ಪಕ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡಿ ‘ನ್ಯಾಯದ ಸಮಾಧಿ’ ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಐಗೆ ನೀಡಲು ಆಗ್ರಹ: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ನೀಡಿದರೆ ಬಯಲಾಗುತ್ತದೆ. ಕಾಂಗ್ರೆಸ್ನವರಿಗೆ ಸಿಬಿಐ ಮೇಲೆ ವಿಶ್ವಾವಿಲ್ಲವೆಂದರೆ ಏನರ್ಥ. ಕಾಂಗ್ರೆಸ್ನವರು ಕೇಂದ್ರದಲ್ಲಿದ್ದಾಗ ನಡೆದ ತನಿಖೆಗಳ ಸ್ಥಿತಿ ಏನು? ಹಾಗಾದರೆ ಕಾಂಗ್ರೆಸ್ನವರು ಸಿಬಿಐ ದುರ್ಬಳಕೆ ಮಾಡಿಕೊಂಡಿದ್ದರಾ? ಮುಡಾ ಅಕ್ರಮದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ಕಾನೂನು ಹೋರಾಟ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
