ನಿರುದ್ಯೋಗ ವಿಚಾರದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೇಂದ್ರದ ಮೋದಿ ಸರ್ಕಾರವು ಉದ್ಯೋಗ ಸೃಷ್ಟಿ ಮಾಡುವ ಬದಲಾಗಿ ಗಮನ ಬೇರೆಡೆಗೆ ಸೆಳೆಯುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. “ಸದ್ಯ ದೇಶದಲ್ಲಿ ಪರಿಸ್ಥಿತಿ ಅತೀ ಕೆಟ್ಟದಾಗಿದ್ದು, ಲಕ್ಷಾಂತರ ಜನರು ಉದ್ಯೋಗ ಹುಡುಕಿ ವಿದೇಶಕ್ಕೆ ಹೋಗುವಂತಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ಫಲಿತಾಂಶಕ್ಕೆ ನೀವೇ ಹೊಣೆಗಾರರಾಗುತ್ತೀರಿ: ಕಾಂಗ್ರೆಸ್ ಪದಾಧಿಕಾರಿಗಳಿಗೆ ಖರ್ಗೆ ಎಚ್ಚರಿಕೆ
ಭಾರತದ ಪದವಿ ಸೂಚ್ಯಂಕ 2025ರ ವರದಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಜೈರಾಮ್ ರಮೇಶ್ ಅವರು ಮೋದಿ ಸರ್ಕಾರವು ಉದ್ಯೋಗ ಸೃಷ್ಟಿಸುವ ಬದಲಾಗಿ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ದೂರಿದ್ದಾರೆ. ಪದವಿ ಪಡೆದ ಶೇಕಡ 42.6ರಷ್ಟು ಜನರು ಉದ್ಯೋಗ ಪಡೆಯುವ ಅರ್ಹತೆ ಹೊಂದಿದ್ದಾರೆ. ಆದರೆ ಶೇಕಡ 57.4ರಷ್ಟು ಪದವಿದರರು ಉದ್ಯೋಗ ಪಡೆಯುವ ಅರ್ಹತೆ ಹೊಂದಿಲ್ಲ ಎಂದು ಭಾರತದ ಪದವಿ ಸೂಚ್ಯಂಕ ವರದಿ ಹೇಳುತ್ತದೆ.
“ಪ್ರಸ್ತುತ ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ಹತಾಶೆಗೆ ಒಳಗಾಗಿದ್ದಾರೆ, ಒತ್ತಡಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ ಲಕ್ಷಾಂತರ ಯುವಕರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬೇಕಾದ ಸ್ಥಿತಿಯಿದೆ. ಆದರೆ ಮೋದಿ ಸರ್ಕಾರವು ಉದ್ಯೋಗ ಸೃಷ್ಟಿ ಮಾಡುವ ಬದಲಾಗಿ ನಿರಂತರವಾಗಿ ದೇಶದ ಗಮನವನ್ನು ಬೇರೆಡೆ ಸೆಳೆಯುವುದರಲ್ಲಿ ನಿರತವಾಗಿದೆ” ಎಂದು ಕಾಂಗ್ರೆಸ್ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
आज युवा बेरोज़गारी से हताश और निराश हैं। हालात इतने खराब हैं कि लाखों युवा विदेशों में जाकर रोजगार ढूंढने को मजबूर हैं, लेकिन मोदी सरकार रोजगार सृजन की बजाय लगातार देश का ध्यान भटकाने में जुटी रहती है।
— Jairam Ramesh (@Jairam_Ramesh) February 19, 2025
रिपोर्ट के भयावह आंकड़ों से पता चलता है कि भारत में 57.4 प्रतिशत ग्रेजुएट… pic.twitter.com/wP4k6Miczo
“ಸುಮಾರು ಶೇಕಡ 57.4ರಷ್ಟು ಪದವಿದರರಿಗೆ ಉದ್ಯೋಗವೇ ಇಲ್ಲ ಎಂದು ವರದಿ ಹೇಳುತ್ತದೆ. ಖಾಸಗಿ ಸಂಸ್ಥೆಗಳು ಮತ್ತು ಕಾರ್ಖಾನೆಗಳು ಈ ಪದವಿದರರನ್ನು ಉದ್ಯೋಗ ಪಡೆಯಲು ಅರ್ಹರೆಂದೇ ಪರಿಗಣಿಸುವುದಿಲ್ಲ. ಪದವಿ ಮತ್ತು ಕೌಶಲ್ಯದ ನಡುವೆ ವ್ಯತ್ಯಾಸವಿದೆ ಎಂಬುದು ಅವರ ಅಭಿಪ್ರಾಯವಾಗಿದೆ” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
“ಮೋದಿ ಸರ್ಕಾರವು ತಮ್ಮ ಕೆಲವು ಸ್ನೇಹಿತರಿಗೆ ಲಾಭ ಉಂಟು ಮಾಡುವುದರೆಡೆಗೆ ಅಧಿಕ ಗಮನ ಹರಿಸಿದೆ. ಇದರಿಂದಾಗಿ ಭಾರತದಲ್ಲಿ ಅರ್ಧಕ್ಕಿಂತ ಅಧಿಕ ಭಾರತೀಯರಿಗೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಯುವಕರು ನಮ್ಮ ದೇಶದ ಭವಿಷ್ಯ. ಅವರಿಗೆ ಉದ್ಯೋಗವಿಲ್ಲ ಎಂದಾದರೆ ನಮ್ಮ ದೇಶದಲ್ಲಿ ಅಭಿವೃದ್ಧಿ ಹೇಗಾಗುತ್ತದೆ” ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ನಿರುದ್ಯೋಗದಿಂದ ದೇಶ ತತ್ತರಿಸುತ್ತಿದೆ – ಡಾ ಪ್ರಕಾಶ್
“ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವಂತೆ ಶಿಕ್ಷಣ ವ್ಯವಸ್ಥೆ ಯಾಕೆ ಬದಲಾಗಿಲ್ಲ? ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಕೇಂದ್ರಿತ ತರಬೇತಿಗಳನ್ನು ಮುಖ್ಯವಾಹಿನಿಗೆ ತರುವುದು ಯಾವಾಗ” ಎಂದು ಕೂಡಾ ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
2014ರಲ್ಲಿ ಅಧಿಕಾರ ಪಡೆಯುವ ಮುನ್ನ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಈವರೆಗೆ ಒಂದು ಕೋಟಿ ಉದ್ಯೋಗವನ್ನು ಕೂಡಾ ಸೃಷ್ಟಿಸಿಲ್ಲ. ಬದಲಾಗಿ ದೇಶದಲ್ಲಿ ನಿರುದ್ಯೋಗ ದರವು ಮೋದಿ ಆಡಳಿತದ ಬಳಿಕ ಏರಿಕೆಯಾಗುತ್ತಾ ಬಂದಿದೆ. ಈ ನಿರುದ್ಯೋಗದಿಂದಾಗಿ ಕಳ್ಳತನ ಮೊದಲಾದ ಅಪರಾಧಗಳು ಅಧಿಕವಾಗುತ್ತಿವೆ ಎಂದು ಹಲವು ತಜ್ಞರುಗಳು ಅಭಿಪ್ರಾಯಿಸಿದ್ದಾರೆ. ಆದರೆ ಮೋದಿ ಸರ್ಕಾರ ನಿರಂತರವಾಗಿ ನೈಜ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಮಾಡುತ್ತಲೇ ಬಂದಿದೆ. ಕೆಲವು ಬಾರಿ ಸಫಲವೂ ಆಗಿದೆ.
