ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೊಡಗಿನ ‘ಗೋಣಿಗದ್ದೆ ಹಾಡಿ’ ವರದಿಗೆ ಸ್ಪಂದಿಸಿದ್ದು, ಅರಣ್ಯ ಸಚಿವರ ಜತೆಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ನಾಲ್ಕೇರಿ ಪಂಚಾಯಿತಿಗೆ ಒಳಪಡುವ ಗೋಣಿಗದ್ದೆಯಲ್ಲಿ ಬದುಕುತ್ತಿರುವ ಹಾಡಿ ಆದಿವಾಸಿಗಳ ದಿನನಿತ್ಯದ ಕಷ್ಟ ಹೇಳತೀರದು. ಕಾಡು ಪ್ರಾಣಿಗಳ ಹಾವಳಿಗಳಿಂದಷ್ಟೇ ಭಯಪಡುವುದಲ್ಲದೆ ಅಲ್ಲಿನ ಜೀವನವೇ ನರಕವಾಗಿದೆ. ಮನುಷ್ಯರು ಸಾಮಾಜಿಕವಾಗಿ ಬದುಕಲು ನಾಡಿನ ಆಸರೆ ಅಗತ್ಯವಿದೆ. ಯಾಕಂದರೆ ಕಾಡಿನಲ್ಲಿ ಬದುಕಲು ಇವತ್ತಿನ ಅರಣ್ಯ ಇಲಾಖೆಯ ಕಾನೂನು ಬಿಡುವುದಿಲ್ಲ. ಅಲ್ಲಿಯ ಉತ್ಪನ್ನವನ್ನೂ ಬಳಸಲು ಆಗದ ಪರಿಸ್ಥಿತಿ. ಕಾಡಿನಲ್ಲಿ ಆಸರೆಗಾಗಿ ಉಳಿಸಿಕೊಂಡಿದ್ದ ಅಷ್ಟೋ ಇಷ್ಟು ಗದ್ದೆ ಜಾಗ ಎಲ್ಲ ಅರಣ್ಯ ಕಾಯ್ದೆ ಹೆಸರಿನಲ್ಲಿ ಕಿತ್ತುಕೊಂಡಾಗ ಭಯದ ನಡುವೆಯೇ ಬದುಕು ನಡೆಯುತ್ತಿದ್ದು, ಮುಂದಿನ ಜೀವನದ ಗತಿಯೇನು? ಎಂಬ ಕಳವಳ ಉಂಟಾಗಿದೆ.
ಗೋಣಿಗದ್ದೆ ಹಾಡಿ ನಿವಾಸಿಗಳ ಬದುಕಿನ ಬವಣೆಯನ್ನು ಕಂಡು ಈ ದಿನ.ಕಾಮ್ ಫೆಬ್ರವರಿ 15ರಂದು “ಭಯದಲ್ಲೇ ದಿನ ದೂಡುವ ಆದಿವಾಸಿಗಳು; ಪರ್ಯಾಯ ವ್ಯವಸ್ಥೆಗೆ ಮನವಿ” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟ ಮಾಡಲಾಗಿತ್ತು. ಜತೆಗೆ ಇಲ್ಲಿಯ ನಿಯೋಗವು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದಾಗ ಸ್ಪಂದಿಸಿದ್ದು, ಸಮಸ್ಯೆ ಆಲಿಸಿದ ಸಚಿವರು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆಯವರ ಜತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸ್ವಗೃಹದಲ್ಲಿ ಕೊಡಗು ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮುಖಂಡರನ್ನು ಭೇಟಿ ಮಾಡಿದ್ದು, ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಗೋಣಿಗದ್ದೆ ಹಾಡಿ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಸಚಿವರು ಈ ದಿನ.ಕಾಮ್ ವಿಶೇಷ ವರದಿ ಹಾಗೂ ನಿಯೋಗದಲ್ಲಿದ್ದ ಮುಖಂಡರ ಮಾತುಗಳನ್ನು ಆಲಿಸಿ, ಕೊಡಗಿನಲ್ಲಿ ದಲಿತರಿಗೆ, ಶೋಷಿತ ವರ್ಗಗಳಿಗೆ ನಿವೇಶನ, ಮನೆ, ಭೂಮಿ ಇಲ್ಲದಿರುವುದರ ಕುರಿತಾಗಿಯೂ ಚರ್ಚೆ ಮಾಡಿದ್ದಾರೆ. ಈ ವೇಳೆ ದಲಿತ ಮುಖಂಡರ ನಿಯೋಗ, “ಭೂಗುತ್ತಿಗೆ ಆದೇಶ ಹಿಂಪಡೆಯುವಂತೆ ಸರ್ಕಾರದ ಗಮನಕ್ಕೆ ತಂದು ಮುಂದಾಗುವ ಅಪಾಯವನ್ನು ತಪ್ಪಿಸಬೇಕು” ಎಂದು ಕೋರಿದ್ದಾರೆ.

“ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮ ಪಂಚಾಯಿತಿಯ ಗೋಣಿಗದ್ದೆ ಹಾಡಿಯಲ್ಲಿ ಬದುಕುತ್ತಿರುವ ಗಿರಿಜನ ನಿವಾಸಿಗಳು, ಜೇನು ಕುರುಬ ಸಮುದಾಯಗಳಿಗೆ ಈ ಹಿಂದೆ, ಅರಣ್ಯ ಕಾಯ್ದೆಯಡಿ ನಾಗರಹೊಳೆ ಅರಣ್ಯದ ಮಧ್ಯೆ ಸುಮಾರು 30 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಈ ಸ್ಥಳದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಹಾಗೂ ಕ್ರೂರ ಪ್ರಾಣಿಗಳ ಪ್ರಾಣ ಭಯದಿಂದ ಬದುಕುತ್ತಿರುವ ಹಾಡಿ ಜನಗಗಳಿಗೆ ಈ ಹಿಂದೆ ಅರಣ್ಯ ಕಾಯ್ದೆಯಡಿ ಮಂಜೂರಾಗಿದ್ದ ಸ್ಥಳದಿಂದ ಅದೇ ಅರಣ್ಯ ಪ್ರದೇಶದ ಮುಖ್ಯ ರಸ್ತೆಯ ಅಂಚಿಗೆ ಪುನರ್ವಸತಿಗೊಳಿಸಿ ಮೂಲಸೌಕರ್ಯಗಳನ್ನು ಒದಗಿಸಬೇಕು” ಎಂದು ಕೋರಿದ್ದಾರೆ.

ಈ ಕುರಿತಂತೆ ಪರಿಶೀಲಿಸಿ, ಪುನರ್ವಸತಿಗೊಳಿಸಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕೋರಿದೆಯೆಂದು ಕಂದಾಯ ಇಲಾಖೆ ಸಚಿವಾಲಯದಿಂದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಿಗೆ ಹಾಗೂ ಸಂಭಂದಪಟ್ಟ ಇಲಾಖೆಗಳಿಗೆ ಪತ್ರ ಕಳುಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಸರ್ಕಾರಿ ಭೂಮಿ ಒತ್ತುವರಿ ‘ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯ
ನಿಯೋಗದಲ್ಲಿ ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆಯ ಕೊಡಗು ಜಿಲ್ಲಾ ಮುಖಂಡ ಡಿ ಎಸ್ ನಿರ್ವಾಣಪ್ಪ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ, ಆದಿವಾಸಿ ಮುಖಂಡ ಮುತ್ತಣ್ಣ ಹಾಗೂ ಜನಶಕ್ತಿ ಸಂಘಟನೆಯ ರಂಗಾಚಾರ್ ಇದ್ದರು.

ಅರಣ್ಯ ಅಂಚಿನಲ್ಲಿ ಬಧುಕು ತಿರುವ.. ಕಂದಾಯ ಜಮೀನು ಗಳಲ್ಲರುವ.. ರೈತರು ಅರಣ್ಯ ಇಲಾಖೆ ಯವರಿಂದ ಅನುಭವಿಸು ತಿರುವ. ತೊಂದ್ರೆ ಗಳನ್ನು. ಭಗೆಹರಿಸಲು. ತಮ್ನ ಪ್ರಯತ್ನ ಮುಂದು ವರೆಯಲಿ..