ದೇಶಕ್ಕೊಬ್ಬ ಪ್ರಭಾವೀ ಲೋಕಪಾಲ ಬೇಕೆಂಬ ಆಂದೋಲನದ ನಡುವಿನಿಂದ ಹುಟ್ಟಿ ಬಂದ ಪಕ್ಷ ತನ್ನದೇ ಆಂತರಿಕ ಲೋಕಪಾಲ ಅಡ್ಮಿರಲ್ ರಾಮದಾಸ್ ಅವರನ್ನು ಅವಹೇಳನಕ್ಕೆ ಗುರಿ ಮಾಡಿ ಕಿತ್ತೆಸೆದ ದುರಂತ ಬೆಳವಣಿಗೆ ಜರುಗಿತ್ತು. ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಬಾಯಿ ತೆರೆದ ಭಿನ್ನಮತೀಯರನ್ನು ಬಾಡಿಗೆ ಬೌನ್ಸರುಗಳ ಕೈಯಲ್ಲಿ ಹೊರಕ್ಕೆ ದಬ್ಬಿಸಿದ್ದರು ಕೇಜ್ರೀವಾಲ್
2015ರಲ್ಲಿ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮೀ ಪಾರ್ಟಿಯು 70ರ ಪೈಕಿ 67 ಸೀಟುಗಳನ್ನು ಗೆದ್ದಾಗ ‘ಈ ಬೃಹತ್ ಗೆಲುವು ಭಯ ಬೀಳಿಸಿದೆ’ ಎಂದು ಅರವಿಂದ ಕೇಜ್ರೀವಾಲ್ ಉದ್ಗರಿಸಿದ್ದರು. ‘ನಾವು ದುರಹಂಕಾರಿಗಳಾಗ ಕೂಡದು’ ಎಂದು ಪಕ್ಷದ ಕಾರ್ಯಕರ್ತರನ್ನು ಎಚ್ಚರಿಸಿದ್ದರು. 2020ರ ವಿಧಾನಸಭಾ ಚುನಾವಣೆಗಳಲ್ಲಿ ಕೇಜ್ರೀವಾಲ್ ಪಕ್ಷದ ಗೆಲುವು 67 ಸೀಟುಗಳಿಂದ 62ಕ್ಕೆ ಇಳಿದಿತ್ತು. ಆದರೂ ಆಮ್ ಆದ್ಮೀ ಪಾರ್ಟಿಯ ದಿಗ್ವಿಜಯಕ್ಕೆ ಅಡೆತಡೆಗಳೇ ಇರಲಿಲ್ಲ.
ಆದರೆ ಕೇಜ್ರೀವಾಲ್ ಮತ್ತು ಅವರ ಪಕ್ಷದ ಸೊಕ್ಕು ಉಕ್ಕುತ್ತಲೇ ನಡೆಯಿತು. 2013ರ ಚುನಾವಣೆಯಲ್ಲಿ ಮೊದಲ ಸಲ ಸ್ಪರ್ಧಿಸಿದಾಗ ಆಮ್ ಆದ್ಮೀ ಪಾರ್ಟಿ ಆಗ ತಾನೇ ಕಣ್ಣು ಬಿಟ್ಟಿತ್ತು. ಆದರೂ 70 ಸೀಟುಗಳಲ್ಲಿ 28 ಸೀಟುಗಳ ಗೆದ್ದಿತ್ತು. ಸರಳ ಬಹುಮತಕ್ಕೆ 36 ಸೀಟುಗಳು ಬೇಕಿತ್ತು. ತಾವು ಸೋಲಿಸಿದ ಕಾಂಗ್ರೆಸ್ಸಿನ ಬಾಹ್ಯ ಬೆಂಬಲವನ್ನೇ ಪಡೆದು ಸರ್ಕಾರ ರಚಿಸಿದ್ದರು ಕೇಜ್ರೀವಾಲ್.
ಪೊಲೀಸ್ ವ್ಯವಸ್ಥೆ ಮತ್ತು ಪಿಡಬ್ಲ್ಯೂಡಿ ಇಲಾಖೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಾರಣ ದೇಶದ ರಾಜಧಾನಿ ದೆಹಲಿಯನ್ನು ‘ಅರ್ಧರಾಜ್ಯ’ ಎಂದು ಕರೆಯುವುದುಂಟು. 1991ರಲ್ಲಿ ಪುನಃ ವಿಧಾನಸಭೆಯನ್ನು ಪಡೆದ ದೆಹಲಿಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದವರು ಕಾಂಗ್ರೆಸ್ಸಿನ ಶೀಲಾ ದೀಕ್ಷಿತ್. ಮೂರು ಸಲ ಗೆದ್ದು ಮುಖ್ಯಮಂತ್ರಿಯಾಗಿ ದೆಹಲಿಯ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿದ್ದ ಶೀಲಾ ನಾಲ್ಕನೆಯ ಸಲ ಕೇಜ್ರೀವಾಲ್ ಎದುರಿಗೆ ಸೋತಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿಯ ಬೆಂಬಲದಿಂದ ತಲೆ ಎತ್ತಿದ್ದ ‘ಇಂಡಿಯಾ ಅಗೇನಸ್ಟ್ ಕರಪ್ಷನ್’ (ಭ್ರಷ್ಟಾಚಾರ ವಿರೋಧಿ ಭಾರತ) ಸಂಘಟನೆಯನ್ನು ಅರವಿಂದ ಕೇಜ್ರೀವಾಲ್ ಅವರು ಅಣ್ಣಾ ಹಜಾರೆ- ಬಾಬಾ ರಾಮದೇವ್ ಅವರ ಮುಂದಾಳತ್ವದಲ್ಲಿ ಮುನ್ನಡೆಸಿದ್ದರು. ಈ ಆಂದೋಲನವನ್ನು ಪಕ್ಷವಾಗಿಸುವ ಪ್ರಕ್ರಿಯೆಯಲ್ಲಿ ಅರವಿಂದ್ ಜೊತೆಗೆ ಹೆಗೆಲೆಣೆಯಾದವರು ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್. ಕಾಂಗ್ರೆಸ್-ಬಿಜೆಪಿಯನ್ನು ದೂರವಿರಿಸಿದ ಸ್ವಚ್ಛ ರಾಜಕಾರಣವನ್ನು ಆಮ್ ಆದ್ಮೀ ಪಾರ್ಟಿ ನಡೆಸುತ್ತದೆಂದು ನಂಬಿದ್ದವರು.
ಭ್ರಷ್ಟ ಮತ್ತು ಎರಡು ನಾಲಗೆಯ ರಾಜಕಾರಣದ ನಡುವಿನಿಂದ ಹೊಚ್ಚ ಹೊಸ ಗಾಳಿಯಂತೆ ಬೀಸಿ ಬಂದಿದ್ದ ಪಕ್ಷ ಆಮ್ ಆದ್ಮೀ ಪಾರ್ಟಿ. ಜನತೆ ಮತ್ತು ಸಮೂಹ ಮಾಧ್ಯಮಗಳು ಈ ಪಾರ್ಟಿಯನ್ನು ತೆರೆದ ಬಾಹುಗಳಿಂದಲೇ ಆಲಿಂಗಿಸಿದ್ದರು.
ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಹೊಸ ಮಾಧ್ಯಮಗಳನ್ನು ಕೇಜ್ರೀವಾಲರಷ್ಟು ಜಾಣತನದಿಂದ, ಪೂರ್ವಸಜ್ಡಿತ ತಂತ್ರಗಾರಿಕೆಯಿಂದ ಬಳಸಿಕೊಂಡವರು ದೇಶದ ಸ್ವಾತಂತ್ರ್ಯೋತ್ತರ ರಾಜಕೀಯ ಇತಿಹಾಸದಲ್ಲಿ ಮತ್ತೊಬ್ಬರು ಕಂಡು ಬರುವುದಿಲ್ಲ. ಈ ಮಾತು ಅಣ್ಣಾ ಹಜಾರೆ ಎಂಬ ಉತ್ಸವ ಮೂರ್ತಿಯನ್ನು ಮುಂದಿಟ್ಟುಕೊಂಡು ನಡೆಸಿದ ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು ಆನಂತರ ರಾಜಕಾರಣಕ್ಕೆ ಇಳಿದು ಆಮ್ ಆದ್ಮೀ ಪಾರ್ಟಿಯನ್ನು ಗೆಲ್ಲಿಸಿಕೊಂಡ ಎರಡೂ ಕ್ರಿಯೆಗಳಿಗೆ ಅನ್ವಯಿಸುತ್ತದೆ.
ಆದರೆ ಕೇಜ್ರೀವಾಲ್ ಮನಸ್ಥಿತಿಯ ಆಳದ ಕತ್ತಲ ಮೂಲೆಯಲ್ಲೊಬ್ಬ ಸರ್ವಾಧಿಕಾರಿ ಮೊದಲೇ ಅಡಗಿ ಕುಳಿತಿದ್ದ ಸುಳಿವು ಬಹತೇಕ ಹೊರಗೆ ಕಾಣಿಸಿಕೊಳ್ಳಲೇ ಇಲ್ಲ. ಅಧಿಕಾರದ ಗದ್ದುಗೆ ಏರಿದ ಮರುನಿಮಿಷವೇ ಈ ಸರ್ವಾಧಿಕಾರಿ ಆಕಳಿಸಿ ಮೈ ಮುರಿದೆದ್ದ. ಪಕ್ಷದ ಒಳಗೆ ಹೊರಗೆ ತನಗೆ ಇದಿರಾಗಿ ನಿಂತವರನ್ನು ನಿರ್ದಯವಾಗಿ ತುಳಿಯತೊಡಗಿದ್ದ. ತನ್ನತ್ತ ಕನ್ನಡಿ ಹಿಡಿವವರ ಮೇಲೆ ಕೆಂಗಣ್ಣು ಬೀರಿದ್ದ. ಅಡಗಿ ಕುಳಿತಿದ್ದವನ ಈ ವಿಕಾರ ವಿಕೃತಿಗಳಿಗೆ ಆಮ್ ಆದ್ಮೀ ಪಾರ್ಟಿಯ ಹಿತೈಷಿಗಳು-ಬೆಂಬಲಿಗ ಬಳಗ ಬೆಚ್ಚಿ ಬಿದ್ದಿದೆ. ಭ್ರಮನಿರಸನಕ್ಕೆ ಜಾರಿತ್ತು.
ದೇಶಕ್ಕೊಬ್ಬ ಪ್ರಭಾವೀ ಲೋಕಪಾಲ ಬೇಕೆಂಬ ಆಂದೋಲನದ ನಡುವಿನಿಂದ ಹುಟ್ಟಿ ಬಂದ ಪಕ್ಷ ತನ್ನದೇ ಆಂತರಿಕ ಲೋಕಪಾಲ ಅಡ್ಮಿರಲ್ ರಾಮದಾಸ್ ಅವರನ್ನು ಅವಹೇಳನಕ್ಕೆ ಗುರಿ ಮಾಡಿ ಕಿತ್ತೆಸೆದ ದುರಂತ ಬೆಳವಣಿಗೆ ಜರುಗಿತ್ತು. ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಬಾಯಿ ತೆರೆದ ಭಿನ್ನಮತೀಯರನ್ನು ಬಾಡಿಗೆ ಬೌನ್ಸರುಗಳ ಕೈಯಲ್ಲಿ ಹೊರಕ್ಕೆ ದಬ್ಬಿಸಿದ್ದರು ಕೇಜ್ರೀವಾಲ್.
ಪಕ್ಷದ ಆತ್ಮಸಾಕ್ಷಿಗಳಂತಿದ್ದ ಪ್ರಶಾಂತ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಹೀನಾಯವಾಗಿ ಹೊರ ಹಾಕಿದ್ದು ಯಾಕೆಂದು ಅರವಿಂದ ಕೇಜ್ರೀವಾಲ್ ಇನ್ನೂ ಸಮಜಾಯಿಷಿ ನೀಡಿಲ್ಲ. ಮೇಧಾ ಪಾಟ್ಕರ್ ಅವರಂತಹ ಜನಪರ ಚೈತನ್ಯವೇ ಈ ನಡೆಗೆ ಬೇಸತ್ತು ಪಕ್ಷದಿಂದ ಹೊರ ನಡೆದಿದ್ದರು. ಆಮ್ ಆದ್ಮೀ ಪಾರ್ಟಿಯ ಪ್ರಶ್ನಾತೀತ ನಾಯಕನಾಗಿ ಬೆಳೆದು ನಿಂತು ಬಿಳಲುಗಳನ್ನು ಇಳಿಸಿದ್ದರು ಕೇಜ್ರೀವಾಲ್. ಆಂತರಿಕ ಜನತಂತ್ರ ಬಡವಾಗುತ್ತ ನಡೆಯಿತು. ಗೋಪಾಲಕೃಷ್ಣ ಗಾಂಧೀ ಅವರು ಹೇಳಿದಂತೆ ಕೇಜ್ರೀವಾಲರಿಗೆ ಗೇಟ್ ಕೀಪರುಗಳೇನೋ ಇದ್ದಾರೆ. ಆದರೆ ಕಾನ್ಷಸ್ ಕೀಪರುಗಳೂ (ಸಾಕ್ಷಿಪ್ರಜ್ಞೆಯ ಸಂಗಾತಿಗಳು) ಅವರಿಗೆ ಬೇಕೇ ಬೇಕಿದ್ದರು. ‘ಮೋದಿ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಮೋದಿ’, ‘ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಎಂಬ ಭಟ್ಟಂಗಿ ಬೊಗಳೆ ಜನಪರ ರಾಜಕಾರಣಕ್ಕೆ ಒಗ್ಗುವುದಿಲ್ಲ. ಈ ಮಾತು ಕೇಜ್ರೀವಾಲರು ಮತ್ತು ಆಮ್ ಆದ್ಮೀ ಪಾರ್ಟಿಗೂ ಅನ್ವಯಿಸಿತ್ತು. ಯಾಕೆಂದರೆ ಆಮ್ ಆದ್ಮೀ ಪಾರ್ಟಿ ಇಂತಹ ಭಟ್ಟಂಗಿತನದ ನಿರಾಕರಣೆಯಲ್ಲೇ ಹುಟ್ಟಿದ್ದ ಪಕ್ಷ.
ಒಬ್ಬ ವ್ಯಕ್ತಿ ಏಕಕಾಲಕ್ಕೆ ಮಾನಹಾನಿ ಕಾಯಿದೆಯ ಪರವಾಗಿಯೂ ಮತ್ತು ವಿರುದ್ಧವಾಗಿಯೂ ಇರುವುದು ಸಾಧ್ಯವಿಲ್ಲ. ಕೇಜ್ರೀವಾಲ್ ಮಾನಹಾನಿ ಕಾಯಿದೆಯ ವಿರುದ್ಧ ಸುಪ್ರೀಮ್ ಕೋರ್ಟಿಗೆ ಬರುತ್ತಾರೆ. ಅದೇ ಉಸಿರಲ್ಲಿ ಮೀಡಿಯಾ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲು ಸುತ್ತೋಲೆ ಹೊರಡಿಸುತ್ತಾರೆ. ಇಂತಹ ಇಬ್ಬಗೆಯ ನಡೆ ಹೇಗೆ ಸಾಧ್ಯ ಎಂದು ಸುಪ್ರೀಮ್ ಕೋರ್ಟು ಕೇಜ್ರೀವಾಲರ ಮಣಿಕಟ್ಟಿನ ಮೇಲೆ ಬಾರಿಸಿತ್ತು.
ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತ ಕೇಜ್ರೀವಾಲ್, ಕಾಂಗ್ರೆಸ್ ಪಕ್ಷದ ಮೈತ್ರಿಯನ್ನು ಧಿಕ್ಕರಿಸಿದ್ದರು. ಕಾಂಗ್ರೆಸ್ ಕೇಳಿದ್ದ ಕೆಲವು ಸೀಟುಗಳನ್ನು ಬಿಟ್ಟುಕೊಡಲು ನಿರಾಕರಿಸಿದ್ದರು. ಈ ನಡೆಯು ಆಮ್ ಆದ್ಮೀ ಪಾರ್ಟಿಯ ಸೋಲಿನ ಅಂತರವನ್ನು ಹೆಚ್ಚಿಸಿತು. ಇಂಡಿಯಾ ಮೈತ್ರಿಕೂಟವನ್ನೂ ದುರ್ಬಲಗೊಳಿಸಿತು. ತನ್ನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸರ್ಕಾರವನ್ನು ಅತ್ಯಂತ ಭ್ರಷ್ಟ ಎಂದು ಜರೆದು, ಅವರನ್ನು ಸೋಲಿಸಿದ್ದ ಕೇಜ್ರೀವಾಲ್ ಆನಂತರವೂ ಶೀಲಾ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದರು ಎಂಬ ಗಾಯವನ್ನು ನೆಕ್ಕಿಕೊಳ್ಳುತ್ತಲೇ ಬಂದಿತ್ತು ಕಾಂಗ್ರೆಸ್. ಈ ಚುನಾವಣೆಯಲ್ಲಿ ಮೈತ್ರಿಗೆ ಒಪ್ಪದ ಕೇಜ್ರೀವಾಲ್ ಪಕ್ಷದ ಮೇಲೆ ಪ್ರತೀಕಾರವನ್ನು ತೀರಿಸಿಕೊಂಡಿತು. ಅದೇ ಶೀಲಾ ದೀಕ್ಷಿತ್ ಅವರ ಮಗ ಸಂದೀಪ್ ದೀಕ್ಷಿತ್ ಅವರನ್ನು ಕೇಜ್ರೀವಾಲ್ ವಿರುದ್ಧ ಹೂಡಿತ್ತು. ಇದೇ ನವದೆಹಲಿ ಕ್ಷೇತ್ರದಿಂದ ದೆಹಲಿಯ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಾಹೇಬ್ ಸಿಂಗ್ ವರ್ಮಾ (ಬಿಜೆಪಿ) ಅವರ ಮಗ ಪ್ರವೇಶ್ ವರ್ಮಾ ಅವರು ಗೆದ್ದಿದ್ದರು. ಆದರೆ ಕೇಜ್ರೀವಾಲ್ ಸೋಲಿನ ಅಂತರ ಮತ್ತು ಕಾಂಗ್ರೆಸ್ ಹುರಿಯಾಳು ಸಂದೀಪ್ ದೀಕ್ಷಿತ್ ಪಡೆದಿದ್ದ ಮತಗಳ ಸಂಖ್ಯೆಯನ್ನು ಒಟ್ಟಗೂಡಿಸಿ ನೋಡಿದರೆ, ಕೇಜ್ರೀವಾಲರನ್ನು ಸೋಲಿಸಿದ್ದು ಶೀಲಾದೀಕ್ಷಿತ್ ಅವರ ಮಗ ಸಂದೀಪ್ ದೀಕ್ಷಿತ್ ಎಂಬ ಲೆಕ್ಕಾಚಾರ ಒಡಮೂಡುತ್ತದೆ. ತಾಯಿಯ ಸೋಲಿನ ಪ್ರತೀಕಾರವನ್ನು ಮಗ ತೀರಿಸಿಕೊಂಡಿದ್ದ. ಕೇಜ್ರೀವಾಲ್ ವಿರುದ್ಧ ಪ್ರವೇಶ್ ವರ್ಮ ಗೆಲುವಿನ ಅಂತರ 4,089 ಮತಗಳಾಗಿತ್ತು. ಸಂದೀಪ್ ದೀಕ್ಷಿತ್ ಪಡೆದಿದ್ದ ಮತಗಳ ಸಂಖ್ಯೆ 4,598 ಆಗಿತ್ತು!
2015 ಮತ್ತು 2020ರ ಚುನಾವಣೆಗಳನ್ನು ಭರ್ಜರಿಯಾಗಿ ಗೆದ್ದಿದ್ದ ಕೇಜ್ರೀವಾಲ್ ಅಧಿಕಾರಶಾಹಿಯೊಂದಿಗೆ ಕದನಕ್ಕೆ ಇಳಿದಿದ್ದರು. ಬಿಜೆಪಿಯ ಹಿಂದುತ್ವವನ್ನು ಅನುಸರಿಸಿದ್ದರು. ಮೋದಿಯವರ ಸರ್ವಾಧಿಕಾರದ ಮಾದರಿಯನ್ನು ಅನುಸರಿಸಿದ್ದರು. ತಮ್ಮ ಪಕ್ಷ ಮಾತ್ರವಲ್ಲದೆ ಖುದ್ದ ತಾವೂ ಸೋತಿರುವ ಕೇಜ್ರೀವಾಲ್ ಅವರಿಗೆ ಆಲೋಚಿಸಲು, ಸಾಗಿ ಬಂದಿರುವ ದಾರಿಯನ್ನೊಮ್ಮೆ ಹೊರಳಿ ನೋಡಲು, ಮಾಡಿರುವ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಸಾಕಷ್ಟು ಕಾಲಾವಕಾಶವಿದೆ, ಆದರೆ ತಮ್ಮೊಳಗಿನ ಸರ್ವಾಧಿಕಾರಿಯನ್ನು ಅಂಕೆಯಲ್ಲಿಡುವರೇ ಕೇಜ್ರೀವಾಲ್, ದುರಹಂಕಾರವನ್ನು ತೊರೆಯುವರೇ ಎಂಬುದು ‘ಆಪ್’ ಮುಂದಿರುವ ಬಹುದೊಡ್ಡ ಪ್ರಶ್ನೆ.
