ದೆಹಲಿ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಶಾಲಿಮಾರ್ ಭಾಗ್ ಶಾಸಕಿ ರೇಖಾ ಅವರನ್ನು ಮುಂದಿನ ಸಿಂಎ ಆಗಿ ಆಯ್ಕೆ ಮಾಡಲಾಗಿದ್ದು, ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಆಯ್ಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಓಂ ಪ್ರಕಾಶ್ ಧಂಕರ್ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ನೇಮಿಸಲಾಗಿತ್ತು.
ಇದನ್ನು ಓದಿದ್ದೀರಾ? ದೆಹಲಿಯಲ್ಲಿ 27 ವರ್ಷಗಳ ಬಳಿಕ ಅಚ್ಚರಿ ಗೆಲುವು ಕಂಡ ಬಿಜೆಪಿ; ಸಿಎಂ ಗದ್ದುಗೆ ಯಾರಿಗೆ?
ರೇಖಾ ಗುಪ್ತಾ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಬಿಜೆಪಿ ಸುಮಾರು 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ. 14 ರಾಜ್ಯಗಳಲ್ಲಿ ಆಡಳಿತ ಹೊಂದಿರುವ ಬಿಜೆಪಿ ಎಲ್ಲಿಯೂ ಮಹಿಳೆಯರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿಲ್ಲ. ಆದ್ದರಿಂದ ದೆಹಲಿಯಲ್ಲಿ ಮಹಿಳೆಯನ್ನೇ ಸಿಎಂ ಮಾಡಬಹುದು, ಅದರಲ್ಲೂ ಹಿರಿಯ ನಾಯಕಿಯಾದ ರೇಖಾ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಬಹುದು ಎನ್ನಲಾಗಿತ್ತು.
VIDEO | BJP observers Om Prakash Dhankar and Ravi Shankar Prasad congratulate MLA Rekha Gupta (@gupta_rekha), on being appointed as new Chief Minister of Delhi. #DelhiCM #RekhaGupta pic.twitter.com/gjCdMtVc4f
— Press Trust of India (@PTI_News) February 19, 2025
ಫೆಬ್ರವರಿ 5ರಂದು ದೆಹಲಿ ಚುನಾವಣೆ ನಡೆದಿದ್ದು ಫೆಬ್ರವರಿ 8ರಂದು ಫಲಿತಾಂಶ ಹೊರಬಿದ್ದಿದೆ. 70 ಸದಸ್ಯ ಬಲವಿದ್ದು ದೆಹಲಿ ವಿಧಾನಸಭೆಯಲ್ಲಿ ಈ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಅಧಿಕಾರ ಪಡೆದುಕೊಂಡಿತು. ಎಎಪಿ 22 ಸ್ಥಾನ, ಕಾಂಗ್ರೆಸ್ ಒಂದು ಸ್ಥಾನವನ್ನೂ ಪಡೆದುಕೊಂಡಿಲ್ಲ.
