ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಬಗರ್ ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ರೈತರ ಹಿತಾರಕ್ಷಣಾ ಸಮಿತಿ ವತಿಯಿಂದ ನಾಳೆ (ಫೆ.21) ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡ ಹೆಚ್ ಆರ್ ಬಸವರಾಜಪ್ಪ ತಿಳಿಸಿದರು.
ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಭದ್ರಾವತಿ ತಾಲೂಕು ಹಾಗೂ ಶಿವಮೊಗ್ಗ ವಿಧಾನಸಭಾ ವ್ಯಾಪ್ತಿಯಲ್ಲಿ ಬಗರ್ ಹುಕುಂ ಸಾಗುವಳಿ ರೈತರು ಮತ್ತು ಶರಾವತಿ ಮುಳಗಡೆಯಿಂದ ಸ್ಥಳಾಂತರಗೊಂಡ ಸಂತ್ರಸ್ಥ ರೈತರಿಗೆ ಈ ಹಿಂದೆ ಬಗರ್ ಹುಕುಂ ಸಮಿತಿ ಸಾಗುವಳಿ ಮುಂಜೂರಾತಿ ಪತ್ರ ಕೊಟ್ಟಿತ್ತು. ಹಾಗಾಗಿ ಈ ಪ್ರದೇಶದ ರೈತರೆಲ್ಲರೂ ಆ ಭೂಮಿಯಲ್ಲಿ ಕಳೆದ 60-70 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ ಕಂದಾಯ ಇಲಾಖೆಯಿಂದ ಪಹಣಿ ಹಾಗೂ ಮುಟೇಷನ್ ದಾಖಲಾತಿಗಳನ್ನು ಕೊಡುವಾಗ ಬಗರ್ ಹುಕುಂ ಸಮಿತಿಯಲ್ಲಿ ಅರಣ್ಯ ಅಧಿಕಾರಿಗಳ ಒಪ್ಪಿಗೆ ಮೇರೆಗೆ ದಾಖಲಾತಿಗಳನ್ನು ನೀಡಿರುತ್ತಾರೆ. ಆದರೆ, ಹಲವು ವರ್ಷಗಳ ನಂತರ ಈಗ ಆ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಇಲಾಖೆಯ ಅಧಿಕಾರಿಗಳು ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದಾರೆ” ಎಂದು ಆರೋಪಿಸಿದರು.
“ಜೆಸಿಬಿ ಯಂತ್ರಗಳ ಮೂಲಕ ಸಾಗುವಳಿದಾರರ ಜಮೀನುಗಳಲ್ಲಿರುವ ಅಡಿಕೆ ಮರಗಳನ್ನು ಕಿತ್ತೆಸೆದು ದೌರ್ಜನ್ಯ ಎಸಗುತ್ತಿದ್ದಾರೆ. ರೈತರ ಜಮೀನಿನಲ್ಲಿ ಕಾಲುವೆಗಳನ್ನು ನಿರ್ಮಿಸಿ ರೈತರನ್ನು ಒಕ್ಕಲೆಬ್ಬಿಸುವಾಗ ರೈತರು ಅಧಿಕಾರಿಗಳನ್ನು ಪ್ರಶ್ನಿಸಲು ಹೋದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಶ್ರೀಗಂಧದಮರ, ಬೀಟೆ ಮತ್ತು ಸಾಗುವಾನಿ ಇತರೆ ಬೆಲೆ ಬಾಳುವ ಮರಗಳನ್ನು ಕಡಿದು ಕಾಡನ್ನು ನಾಶ ಮಾಡಿದ್ದೀರಿ ಎಂದು ರೈತರ ಮೇಲೆಯೇ ಸುಳ್ಳು ಮೊಕದ್ದಮೆ ಹೂಡುವುದಾಗಿ ಸೂಚನಾ ಪತ್ರಗಳನ್ನು ಕೊಟ್ಟಿರುತ್ತಾರೆ. ಕಂದಾಯ ಇಲಾಖೆಯವರೂ ಸಹ ಇದೇ ರೀತಿ ಸೂಚನಾ ಪತ್ರಗಳನ್ನು ಕೊಟ್ಟಿರುವುದು ದೌರ್ಜನ್ಯವಲ್ಲದೆ ಮತ್ತೇನು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಭದ್ರಾವತಿ | ಹಾಡಹಗಲೇ ಲಾಂಗು ಮಚ್ಚಿನಿಂದ ಹೊಡೆದಾಟದ; ವಿಡಿಯೊ ವೈರಲ್
ಈ ರೀತಿ ದೌರ್ಜನ್ಯ ಎಸಗುತ್ತಿರುವ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತರ ಬೃಹತ್ ಪ್ರತಿಭಟನೆಯನ್ನು ಫೆಬ್ರವರಿ 21ರ ಬೆಳಗ್ಗೆ 10 ಗಂಟೆಗೆ ಭದ್ರಾವತಿ ರಂಗಪ್ಪ ಸರ್ಕಲ್‌ನಿಂದ ತಹಿಶೀಲ್ದಾರರ ಕಚೇರಿ ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಈ ಪ್ರತಿಭಟನೆಗೆ ಬಗರ್ ಹುಕುಂ ಸಾಗುವಳಿ ರೈತರು, ಶರಾವತಿ ಮುಳುಗಡೆ ಸಂತ್ರಸ್ಥರು, ಸ್ಥಳಾತರಗೊಂಡ ರೈತರು, ಅರಣ್ಯ ಹಕ್ಕು ಸಮಿತಿ ರೈತರು, ರಾಜ್ಯ ರೈತ ಸಂಘಟನೆಗಳು ಹಾಗೂ ಹಸಿರು ಸೇನೆ ರೈತ ಮುಖಂಡರುಗಳು, ಎಲ್ಲಾ ಸಹಕಾರಿ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
