ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸೋಮವಾರ ಪೇಟೆ ಉಪ ವಿಭಾಗದ ಪೊಲೀಸರು ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ. ಹೆರೂರು ಗ್ರಾಮದ ಹೇಮಂತ್ (23), ರಮೇಶ್ (34) ಬಂಧಿತ ಆರೋಪಿಗಳು.
ಕೊಡಗು ಜಿಲ್ಲೆಯಾದ್ಯಂತ ಗಾಂಜಾ ಹಾವಳಿ ಹೆಚ್ಚಿದ್ದು, ಎಗ್ಗಿಲ್ಲದೆ ಗಾಂಜಾ ಮಾರಾಟ ಮಾಡುವ ಜಾಲ ವಿಸ್ತರವಾಗಿದೆ. ಇಲಾಖೆಯು ಹಲವೆಡೆ ಆರೋಪಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟುವ ಕೆಲಸ ಮಾಡುತ್ತಿದೆ. ತೆರೆಮರೆಯಲ್ಲಿ ಜೀವಂತವಾಗಿರುವ ಗಾಂಜಾ ಮಾರಾಟ ಹಾಗೂ ಖರೀದಿ ಜಾಲವನ್ನು ಪೂರ್ತಿಯಾಗಿ ಕಿತ್ತೊಗೆಯಲು ಇಲಾಖೆ ಬದ್ಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಫೆ.18ರಂದು ಸುಂಟಿಕೊಪ್ಪ-ಮಾದಾಪುರ ರಸ್ತೆಯಲ್ಲಿರುವ ಸ್ಮಶಾನದ ಹತ್ತಿರ ನಿಷೇದಿತ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ ಸೋಮವಾರ ಪೇಟೆ ಉಪ ವಿಭಾಗದ ಡಿವೈಎಸ್‌ಪಿ ಡಿ ವಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕೆ ರಾಜೇಶ್, ಸಬ್ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಚಾರಣೆ ನಡೆಸಿ ಗಾಂಜಾ ಸಮೇತ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ‘ಗೋಣಿಗದ್ದೆ ಹಾಡಿ’ ವರದಿಗೆ ಕಂದಾಯ ಸಚಿವರ ಸ್ಪಂದನೆ; ಅರಣ್ಯ ಸಚಿವರ ಜತೆಗೆ ಚರ್ಚಿಸುವ ಭರವಸೆ
ಜಿಲ್ಲೆಯಾದ್ಯಂತ ನಿಷೇಧಿತ ಗಾಂಜಾ, ಮಾದಕ ವಸ್ತುಗಳ ಮಾರಾಟ ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದ್ದು, ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ತವಾಗಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
