ಅತ್ಯುತ್ತಮ ಹಾಗೂ ಪ್ರಬುದ್ಧ ಆಡಳಿತಗಾರ ಎಂದೆನಿಸಿದ ಮರಾಠ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯನ್ನು ತಾಲ್ಲೂಕಿನ ಮರಾಠಿಪಾಳ್ಯ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.
ಗ್ರಾಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆ ನಡೆಸಿ ಊರಿನ ಜನರಿಗೆ ಸಿಹಿ ಹಂಚಿ ನಂತರ ನಾಗಸಂದ್ರ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು. ಶಿವಾಜಿ ಮಹಾರಾಜರ ಆಡಳಿತ ಹಾಗೂ ಜೀವನ ಚರಿತ್ರೆ ಬಗ್ಗೆ ಪ್ರಮುಖರು ಹಂಚಿಕೊಂಡರು.
ಸ್ಥಳೀಯ ಮುಖಂಡ ಶಾಮರಾವ್ ಕಾಳೆ ಮಾತನಾಡಿ 1630 ರಲ್ಲಿ ಜನಿಸಿದ ಶಿವಾಜಿ ಮಹಾರಾಜರು ಉತ್ತಮ ನಾಯಕತ್ವ ಆಡಳಿತ ತಂತ್ರ ಮೂಲಕ ಮರಾಠ ಸಾಮ್ರಾಜ್ಯ ಸ್ಥಾಪಿಸಿದ್ದರು. ಮರಾಠಿ ಹಾಗೂ ಸಂಸ್ಕೃತ ಭಾಷೆಗೆ ಹೆಚ್ಚು ಮಾನ್ಯತೆ ನೀಡಿ ನಮ್ಮ ಸಾಂಸ್ಕೃತಿಕ ರಾಷ್ಟ್ರೀಯತೆ ಬಗ್ಗೆ ಆದ್ಯತೆ ನೀಡಿದ ಬಗೆ ತಿಳಿಯುತ್ತದೆ. ದಾರ್ಶನಿಕ ಆಡಳಿತ ಶೈಲಿಯಲ್ಲಿ ಬ್ರಿಟಿಷರ ಪ್ರಭಾವದ ನಡುವೆ ಹಿಂದೂ ಪದ್ಧತಿ ರಕ್ಷಣೆ ಮಾಡಿದ್ದರು. ಇವರ ಆದರ್ಶವನ್ನು ಪಾಲಿಸಿ ನಮ್ಮ ಪರಂಪರೆ ಉಳಿಸೋಣ ಎಂದು ಕರೆ ನೀಡಿದರು.
ಮುಖಂಡ ರಘು ಕಾಳೆ ಮಾತನಾಡಿ ಕಲಿಕೆಯಿಂದ ಬುದ್ಧಿವಂತಿಕೆ ಬರುತ್ತದೆ ಎಂದು ನಂಬಿದ್ದ ಶಿವಾಜಿ ಅವರು ನಿಜವಾದ ಧೈರ್ಯ ಜ್ಞಾನದಿಂದ ಮಾರ್ಗದರ್ಶನ ಪಡೆಯುತ್ತದೆ. ಮಹಿಳೆಯರಿಗೆ ಎಲ್ಲಾ ಹಕ್ಕುಗಳನ್ನು ನೀಡಿ ಅಂದಿನ ಆಡಳಿತದ ಬಗ್ಗೆ ತಿಳಿಸಿದ್ದರು. ಶತ್ರುಗಳ ವಿರುದ್ಧ ಹೋರಾಟದ ಚತುರತೆ ವಿಶೇಷವಾಗಿತ್ತು. ಸಣ್ಣ ಸೈನ್ಯದಲ್ಲೇ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಶಿವಾಜಿ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಮುನ್ನುಡಿ ಹಾಡಿದ್ದರು ಎಂದು ತಿಳಿಸಿದರು.
ರಂಜಿತ್ ಕಾಳೆ ಮಾತನಾಡಿ ಶಿವಾಜಿ ಮಹಾರಾಜರ ಜನ್ಮ ದಿನ ಪ್ರತಿ ವರ್ಷ ಫೆಬ್ರವರಿ 19 ರಂದು ಎಲ್ಲೆಡೆ ಆಚರಿಸಲಾಗುತ್ತಿದೆ. ಅವರ ತತ್ವ ಆದರ್ಶ ಅಳವಡಿಸಿಕೊಂಡು ಅವರ ಸ್ಮರಣೆಯಿಂದಲೇ ಧೈರ್ಯ ತುಂಬಿಕೊಳ್ಳುವ ಕೆಚ್ಚು ಬರುತ್ತದೆ. ಹಿಂದೂ ಧರ್ಮದ ಉಳಿಸಲು ಕಟ್ಟುನಿಟ್ಟಿನ ಕ್ರಮ ವಹಿಸಿ ಮಾತೃ ಪ್ರೇಮ, ಮಾತೃ ಭಾಷೆ ಬಗ್ಗೆ ವಿಶೇಷ ಗುಣವನ್ನು ಬೆಳೆಸಿಕೊಳ್ಳಲು ಶಿವಾಜಿ ಅವರೇ ಆದರ್ಶಪ್ರಾಯರು. ಇಂದಿನ ಯುವ ಪೀಳಿಗೆ ಶಿವಾಜಿ ಮಹಾರಾಜರ ಜೀವನ ಚರಿತ್ರೆ ತಿಳಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣೋಜಿರಾವ್ ಕಾಳೆ, ಹನುಮಂತರಾವ್ ಕಾಳೆ, ನವೀನ್ ಗಾಯಕವಾಡ, ಹನುಮಂತರಾವ್ ಗಾಯಕವಾಡ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.