ಬಳ್ಳಾರಿಯ ಕೇಂದ್ರ ಸಂವಹನ ಇಲಾಖೆಯಿಂದ ಫೆಬ್ರವರಿ 19ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಛಾಯಾಚಿತ್ರ ಪ್ರದರ್ಶನ ಹಾಗೂ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರಸಭೆ ಅಧ್ಯಕ್ಷ ಮೌಲಾಸಾಬ್ ದಾದೇಸಾಬ್ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ ನೆರವೇರಿಸಿ, “ಗ್ರಾಮೀಣ ಭಾಗಗಳ ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ತಲುಪಬೇಕು. ಇಂತಹ ಛಾಯಾಚಿತ್ರ ಪ್ರದರ್ಶನಗಳು ಮಾಹಿತಿಪೂರ್ಣವಾಗಿವೆ” ಎಂದು ತಿಳಿಸಿದರು.

ಎಸ್‌ಬಿಐ ಬ್ಯಾಂಕ್‌ನ ಆರ್ಥಿಕ ಸಲಹೆಗಾರ ಆಂಜನೇಯ ಮಾತನಾಡಿ, “ಕೇಂದ್ರ ಸರ್ಕಾರದ ಪಿಂಚಣಿ ಹಾಗೂ ವಿಮಾ ಯೋಜನೆಗಳು ತಳಮಟ್ಟದ ಜನರಿಗೆ ಆರ್ಥಿಕ ಭದ್ರತೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಟಲ್ ಪಿಂಚಣಿ ಯೋಜನೆ ವಯಸ್ಕರಿಗೆ ಹಣಕಾಸು ಭದ್ರತೆ ಒದಗಿಸುತ್ತದೆ. ಜನರ ಸುರಕ್ಷೆಯ ಹಿತಕ್ಕಾಗಿ ಕೇಂದ್ರ ಸರ್ಕಾರ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಪರಿಚಯಿಸಿದೆ. ಅಟಲ್ ಪಿಂಚಣಿ ಯೋಜನೆಯಡಿ ವೃದ್ಧರು ಆರ್ಥಿಕ ಭದ್ರತೆ ಪಡೆಯಬಹುದಾಗಿದೆ” ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರೇಶ್ ಮಾತನಾಡಿ, “ಮಹಿಳೆಯರು ಮತ್ತು ಮಕ್ಕಳ ಹಿತಕ್ಕಾಗಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಯೋಜನೆಗಳ ಮಾಹಿತಿಯನ್ನು ಛಾಯಾಚಿತ್ರ ಪ್ರದರ್ಶನದಲ್ಲಿ ನೀಡಲಾಗಿದ್ದು, ಗ್ರಾಮೀಣ ಹಾಗೂ ನಗರ ಭಾಗಗಳ ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜಿಬಿಜಿಬಿ ಮಸೂದೆ 2024 ಕುರಿತು ಶಾಸಕ ಅರ್ಷದ್ ರಿಜ್ವಾನ್ ಜತೆಗೆ ಬಿಎನ್‌ಪಿ ಮಾತುಕತೆ
ಆಯುಷ್ಮಾನ್ ಭಾರತ ಹಾಗೂ ಕ್ಷಯ ಮುಕ್ತ ಭಾರತ ಕುರಿತು ಆರೋಗ್ಯ ಇಲಾಖೆಯ ಆಶಾ ಬೇಗಂ ಮಾತನಾಡಿದರು. ಉಪ ತಹಶೀಲ್ದಾರ್ ರವಿ ಕುಮಾರ್, ಶಿಕ್ಷಣ ಇಲಾಖೆಯ ಉಮಾದೇವಿ ಪಾಟೀಲ್, ಡಿ ಆಂಜನೇಯ ಸ್ವಾಮಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನ, ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಅಕ್ಷತಾ ಸಿ ಹೆಚ್, ಇಲಾಖೆಯ ಸಿಬ್ಬಂದಿ ರಾಮಕೃಷ್ಣಪ್ಪ ಹಾಗೂ ಲಕ್ಷ್ಮೀಕಾಂತ ಇದ್ದರು.
ಜಾಗೃತಿ ಕಾರ್ಯಕ್ರಮದ ಛಾಯಾಚಿತ್ರ ಪ್ರದರ್ಶನ ಫೆಬ್ರವರಿ 20ರಂದೂ ಕೂಡಾ ಮುಂದುವರೆದಿದೆ.