ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆಯುವ ರನ್ನ ವೈಭವಕ್ಕೆ ಮುಧೋಳ ಹೆಸರನ್ನು ಕವಿ ಚಕ್ರವರ್ತಿ ರನ್ನ ಮುಧೋಳ ಎಂದು ಮರುನಾಮಕರಣ ಮಾಡಲು ರನ್ನ ವೈಭವದ ಕಾರ್ಯಕ್ರಮದಲ್ಲಿ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪ್ರಗತಿಪರ ಯುವರೈತ ಮುಖಂಡ ಡಾ. ಯಲ್ಲಪ್ಪ ಹೆಗಡೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟಣೆ ನೀಡಿರುವ ಅವರು, “ಕವಿ ಚಕ್ರವರ್ತಿ ರನ್ನನ ಜನ್ಮಭೂಮಿಯಾದ ಮುಧೋಳದಲ್ಲಿ ಫೆಬ್ರವರಿ 22ರಿಂದ 24ರವರೆಗೆ ರನ್ನ ವೈಭವ ಅದ್ದೂರಿಯಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ರನ್ನನ ಇತಿಹಾಸ, ಸಾಹಿತ್ಯ ಮತ್ತು ಕಾವ್ಯಗಳ ಪ್ರಸಾರವನ್ನು ನಾಡಿನ ಜನರಿಗೆ ಮುಟ್ಟಿಸುವ ಕಾರ್ಯ ನಡೆಯುತ್ತದೆ” ಎಂದರು.

“ಕವಿ ಚಕ್ರವರ್ತಿ ರನ್ನನ ಹೆಸರನ್ನು ಶಾಶ್ವತವಾಗಿ ನೆನಪು ಮಾಡಿಕೊಳ್ಳಲು ಮತ್ತು ತಾಲೂಕಿನ ಜನರನ್ನು ರಾಜ್ಯದಲ್ಲಿ ಗುರುತಿಸಲು ಮುಧೋಳ ಹೆಸರನ್ನು ಕವಿ ಚಕ್ರವರ್ತಿ ರನ್ನ ಮುಧೋಳ ಎಂದು ನಾಮಕರಣ ಮಾಡಲು ನಾವೆಲ್ಲರೂ ಆಗ್ರಹಿಸಲು ಕಾರಣಗಳಿವೆ. ಅವುಗಳೆಂದರೆ ನಮ್ಮ ಮುಧೋಳ ನಗರವನ್ನು ಹೊರತುಪಡಿಸಿ ರಾಜ್ಯದಲ್ಲಿ 3 ಕಡೆ ಮುಧೋಳ ಎಂಬ ಹೆಸರು ಹೊಂದಿರುವ ಹಳ್ಳಿಗಳಿವೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುಧೋಳ ಹಾಗೂ ಬೀದರ್ ಜಿಲ್ಲೆಯ ಆರೋಡ ತಾಲೂಕಿನ ಮುಧೋಳ ಬಿ ಎಂಬ ಊರುಗಳಿವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಜನಸ್ನೇಹಿ ಕೇಂದ್ರಗಳ ಸೇವಾ ಶುಲ್ಕ ಇಳಿಸುವಂತೆ ಡಿವೈಎಫ್‌ಐ ಮನವಿ
“ಮುಧೋಳ ಎಂಬ ಊರುಗಳು ಮೂರ್ನಾಲ್ಕು ಕಡೆ ಇರುವುದರಿಂದ ನಮ್ಮ ಮುಧೋಳ ನಗರವನ್ನು ʼರನ್ನ ಮುಧೋಳʼ ಎಂಬ ಹೆಸರಿನಲ್ಲಿ ಮರುನಾಮಕಾರಣ ಮಾಡಬೇಕು. ಹೀಗೆ ಗುರುತಿಸುವುದರಿಂದ ನಮ್ಮ ನಾಡಿನಲ್ಲಿ ನಮಗೆ ಒಂದು ಹೆಮ್ಮೆಯ ಸಂಕೇತವಾಗುತ್ತದೆ. ಹಾಗಾಗಿ ಮುಧೋಳದ ಹೆಸರನ್ನು ಕವಿ ಚಕ್ರವರ್ತಿ ʼರನ್ನ ಮುಧೋಳʼವೆಂದು ನಾಮಕರಣ ಮಾಡುವಂತೆ ಎಲ್ಲ ನಾಗರಿಕ ಬಂಧುಗಳು ಹಕ್ಕೊತ್ತಾಯ ಮಾಡಬೇಕು” ಎಂದು ಮನವಿ ಮಾಡಿದರು.
