ಮೊದಲ ಬಾರಿಗೆ ಶಾಸಕಿಯಾಗಿ ದೆಹಲಿ ಮುಖ್ಯಮಂತ್ರಿ ಹುದ್ದೆಗೇರಿದ ರೇಖಾ ಗುಪ್ತಾ; ಯಾರಿವರು?

Date:

Advertisements
ಬಿಜೆಪಿಯಿಂದ ಮೂರು ಬಾರಿ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ರೇಖಾ, ಶಾಲಿಮಾರ್ ಬಾಗ್‌ನ ಚೊಚ್ಚಲ ಶಾಸಕಿಯಾಗಿ ಗೆದ್ದು, ಈಗ ದೆಹಲಿಯ ಮುಖ್ಯಮಂತ್ರಿಯಾಗಿದ್ದಾರೆ. ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ...

ದೆಹಲಿಯ ಶಾಲಿಮಾರ್ ಬಾಗ್‌ನ ಚೊಚ್ಚಲ ಶಾಸಕಿ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್‌ ಆಯ್ಕೆ ಮಾಡಿದೆ. ರೇಖಾ ಗುಪ್ತಾ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ, ಕೇಂದ್ರಾಡಳಿತ ಪ್ರದೇಶವನ್ನು ಮುನ್ನಡೆಸಲಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳ ಪೈಕಿ 48 ಸ್ಥಾನಗಳನ್ನು ಗೆದ್ದು, ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ. ಬುಧವಾರ ಸಭೆ ಬಿಜೆಪಿಯು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಮುಖ್ಯಮಂತ್ರಿಯಾಗಿ ಐವತ್ತರ ಹರೆಯದ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದ, ಬಿಜೆಪಿಯಿಂದ ಮೂರು ಬಾರಿ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ರೇಖಾ ಅವರದು ಅಚ್ಚರಿಯ ಆಯ್ಕೆ ಎಂದು ಭಾವಿಸಲಾಗಿದ್ದರೂ, ಅವರೇ ಸಿಎಂ ಎಂಬ ಬಗ್ಗೆ ಕಳೆದ ಎರಡು ವಾರಗಳಿಂದ ಭಾರೀ ಚರ್ಚೆ ನಡೆಯುತ್ತಿತ್ತು. ಇದೀಗ, ಅವರು ರಾಮ್‌ಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬುಧವಾರ ರಾತ್ರಿ ತಮ್ಮ ಆಯ್ಕೆಯ ಬಗ್ಗೆ ಮಾತನಾಡಿದ ರೇಖಾ, ತಮಗೆ ಉನ್ನತ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಪಕ್ಷದ ಉನ್ನತ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ದೆಹಲಿಯ ಪ್ರತಿಯೊಬ್ಬ ನಾಗರಿಕರ ಕಲ್ಯಾಣ, ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತೇನೆ. ದೆಹಲಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಲು ಸಂಪೂರ್ಣವಾಗಿ ಬದ್ಧಳಾಗಿದ್ದೇನೆ” ಎಂದು ಹೇಳಿದ್ದಾರೆ.

Advertisements

ಅಂದಹಾಗೆ, ರೇಖಾ ಗುಪ್ತಾ ಮೂಲತಃ ದೆಹಲಿಯವರಲ್ಲ. ಅವರು ದೆಹಲಿ ಪಕ್ಕದ ಹರಿಯಾಣ ರಾಜ್ಯದವರು. ಅವರು ಹುಟ್ಟಿದ್ದು ಹರಿಯಾಣದ ಜಿಂದ್‌ ಜಿಲ್ಲೆಯ ಜುಲಾನಾ ಪಟ್ಟಣದಲ್ಲಿ. ಅವರ ತಂದೆ ಜೈ ಭಗವಾನ್ ಅವರು ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕರಾಗಿದ್ದರು. ಅವರು 1972-73ರಲ್ಲಿ ಕರ್ತವ್ಯದ ಮೇಲೆ ದೆಹಲಿಗೆ ಬಂದು ನೆಲೆಸಿದರು. ಅಂದಿನಿಂದ, ರೇಖಾ ಅವರಿಗೆ ದೆಹಲಿಯೇ ತವರೂರು ಆಯಿತು.

ದೆಹಲಿಯ ತ್ರಿನಗರದಲ್ಲಿ ಶಾಲಾ ಶಿಕ್ಷಣ ಪಡೆದ ರೇಖಾ ಗುಪ್ತಾ, ದೌಲತ್ರಾಮ್ ಕಾಲೇಜಿನಲ್ಲಿ ಬಿ.ಕಾಮ್‌ ಪದವಿ ಪಡೆದರು. ಎಲ್‌ಎಲ್‌ಬಿ ಪದವಿಯನ್ನೂ ಮುಗಿಸಿದರು. 1998ರಲ್ಲಿ ಉದ್ಯಮಿ ಮನೀಶ್‌ ಅವರನ್ನು ವಿವಾಹವಾದರು. ಮನೀಶ್‌ ಅವರೂ ಕೂಡ ಹರಿಯಾಣದ ಭಿವಾನಿ ಜಿಲ್ಲೆಯ ಬೋಂಡ್‌ ಪಟ್ಟಣದವರು. ಈ ದಂಪತಿಗಳು ಹಲವು ವರ್ಷಗಳಿಂದ ದೆಹಲಿಯ ಶಾಲಿಮಾರ್ ಬಾಗ್‌ನ ಎಪಿ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದಾರೆ.

ರೇಖಾ ಅವರು ಕಾಲೇಜು ಶಿಕ್ಷಣ ಪಡೆಯುವಾಗಲೇ ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ನಂತರ, ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದರು. 1996ರಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ರಾಜಕೀಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇದನ್ನು ಓದಿದ್ದೀರಾ?: ಅಮೆರಿಕದಿಂದ ಕೈಕೋಳ ತೊಟ್ಟು ಬಂದ ಭಾರತೀಯರು ಬಿಚ್ಚಿಟ್ಟ ಮೂರು ಸಂಗತಿಗಳಿವು!

ಆರ್‌ಎಸ್‌ಎಸ್‌ ಹಿನ್ನೆಲೆಯ ಕಾರಣಕ್ಕಾಗಿ ಅವರಿಗೆ ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವೂ ದೊರೆಯಿತು. ಮೂರು ಬಾರಿ ಪಾಲಿಕೆಯ ಸದಸ್ಯೆಯಾಗಿ ಬಿಜೆಪಿಯಿಂದ ಚುನಾಯಿತರಾಗಿದ್ದರು. 2022ರಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಾಗ, ರೇಖಾ ಗುಪ್ತಾ ಅವರನ್ನು ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದರೆ, ಎಎಪಿ ಬಹುಮತ ಪಡೆದು, ಆಡಳಿತ ರಚಿಸಿದ್ದರಿಂದ, ರೇಖಾ ಗುಪ್ತಾ ಅವರಿಗೆ ಮೇಯರ್ ಹುದ್ದೆ ಕೈತಪ್ಪಿತ್ತು. ಅವರು ಪಾಲಿಕೆ ಸದಸ್ಯೆಯಾಗಿದ್ದಾಗ, ಸಭೆಯೊಂದರಲ್ಲಿ ಸ್ಟೇಜ್ ಮೇಲೆ ನುಗ್ಗಿ, ವೇದಿಕೆಯ ಮೈಕ್‌-ಡಯಾಸ್‌ಗಳನ್ನು ಧ್ವಂಸಗೊಳಿಸಿ ಸುದ್ದಿಯಾಗಿದ್ದರು.

ಇತ್ತೀಚೆಗೆ ನಡೆದ 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಪಡೆದ ರೇಖಾ ಗುಪ್ತಾ ಅವರು ಶಾಲಿಮಾರ್ ಬಾಗ್‌ ಕ್ಷೇತ್ರದಲ್ಲಿ ಸ್ಪರ್ಧಿಸಿ, ತಮ್ಮ ಎದುರಾಳಿ, ಮೂರು ಬಾರಿಯ ಎಎಪಿ ಶಾಸಕಿ ಬಂದಾನ ಕುಮಾರಿ ಅವರನ್ನು 29,595 ಮತಗಳ ಅಂತರದಿಂದ ಸೋಲಿಸಿದರು. ವಿಧಾನಸಭಾ ಚುನಾವಣೆಯ ಮೊದಲ ಸ್ಪರ್ಧೆಯಲ್ಲೇ ಗೆಲುವು ಸಾಧಿಸಿದರು.

ಇದೀಗ, ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗಿದ್ದಾರೆ. ದೆಹಲಿ ರಾಜಕೀಯದಲ್ಲಿ ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಆತಿಶಿ ನಂತರ ರೇಖಾ ಅವರು ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ.

ಇದನ್ನು ಓದಿದ್ದೀರಾ?: ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಸ್ವೀಕಾರ: ಯಾರು ಈ ಜ್ಞಾನೇಶ್ ಕುಮಾರ್?

ಮಾತ್ರವಲ್ಲದೆ, ಮೂಲತಃ ಹರಿಯಾಣ ರಾಜ್ಯದವರಾಗಿ, ದೆಹಲಿಯ ಮುಖ್ಯಮಂತ್ರಿ ಹುದ್ದೆ ಪಡೆದವರಲ್ಲಿ ಮೂರನೆಯವರಾಗಿದ್ದಾರೆ. ಈ ಹಿಂದೆ, ಹರಿಯಾಣದ ಅಂಬಾಲ ಜಿಲ್ಲೆಯವರಾದ ಸುಷ್ಮಾ ಸ್ವರಾಜ್, 1998ರಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದರು. ಆ ನಂತರ, ಹರಿಯಾಣದ ಭಿವಾನಿ ಜಿಲ್ಲೆಯ ಮಂಡಿ ಪಟ್ಟಣದವರಾದ ಅರವಿಂದ್‌ ಕೇಜ್ರಿವಾಲ್ 2013ರಿಂದ 2024ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದರು. ಇದೀಗ, ಹರಿಯಾಣದವರೇ ಆದ ರೇಖಾ ಅವರು ಮುಖ್ಯಮಂತ್ರಿಯಾಗಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X