ಬೆಂಗಳೂರು ನಗರದಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಜೀವನದ ಗುಣಮಟ್ಟಕ್ಕಾಗಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024(ಜಿಬಿಜಿಬಿ ಮಸೂದೆ 2024)ಯ ಪ್ರಮುಖ ತಿದ್ದುಪಡಿ ಸಲ್ಲಿಕೆ ಕುರಿತು ಬೆಂಗಳೂರು ನವನಿರ್ಮಾಣ ಪಕ್ಷದ ಕಾರ್ಯಕರ್ತರು ಜಂಟಿ ಸದನ ಸಮಿತಿ ಅಧ್ಯಕ್ಷ, ಶಾಸಕ ಅರ್ಷದ್ ರಿಜ್ವಾನ್ ಜತೆಗೆ ಮಾತುಕತೆ ನಡೆಸಿದರು.
“ಮೇಯರ್, ಚುನಾಯಿತ ಮಂಡಳಿಗಳು ಮತ್ತು ಸಾಂವಿಧಾನಿಕ ಆದೇಶದ ಬಗ್ಗೆ ರಾಹುಲ್ ಗಾಂಧಿ ನೀಡಿದ ಸಾರ್ವಜನಿಕ ಭರವಸೆಯನ್ನು ಈಡೇರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ನವನಿರ್ಮಾಣ ಪಕ್ಷ(ಬಿಎನ್‌ಪಿ) ವಾಗ್ದಾಳಿ ನಡೆಸಿದ್ದು, ಜಂಟಿ ಸದನ ಸಮಿತಿ ಅಧ್ಯಕ್ಷ, ಶಾಸಕ ಅರ್ಷದ್ ರಿಜ್ವಾನ್‌ರೊಂದಿಗೆ ಮಾತುಕತೆ ನಡೆಸಿದೆ.
“ನಮ್ಮ ನಗರಗಳಲ್ಲಿನ ಜೀವನದ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಿರುವ ಐದು ವರ್ಷಗಳ ಅವಧಿಗೆ ನೇರವಾಗಿ ಚುನಾಯಿತರಾದ ಮೇಯರ್‌ಗಳು ಮತ್ತು ಚುನಾಯಿತ ಮಂಡಳಿಗಳನ್ನು ಜಾರಿಗೆ ತರುವುದಾಗಿ ತಮ್ಮ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯನ್ನು ಎತ್ತಿಹಿಡಿಯಲು ರಾಜ್ಯ ಕಾಂಗ್ರೆಸ್ ವಿಫಲವಾಗಿದೆ” ಎಂದು ಬಿಎನ್‌ಪಿ ಟೀಕಿಸಿದೆ.
ಬಿಎನ್‌ಪಿ ಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಮಾತನಾಡಿ, “ಈ ಮಸೂದೆಯು ಪರಿಣಾಮಕಾರಿ, ಉತ್ತರದಾಯಿತ್ವ ಮತ್ತು ಸ್ವಾಯತ್ತ ನಗರಾಡಳಿತದ ದೃಷ್ಟಿಕೋನವನ್ನು ಹೊಂದಿರಬೇಕು, ಅದು ರಾಜ್ಯ ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿರಬೇಕು, ಇದು ಬೆಂಗಳೂರಿನ ನಿವಾಸಿಗಳಿಗೆ ವಾಸಯೋಗ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ನಗರ ಆಡಳಿತಗಳ ಸಬಲೀಕರಣ ಮತ್ತು ಸ್ವಾಯತ್ತತೆ ಸಾಂವಿಧಾನಿಕವಾಗಿ ಕಡ್ಡಾಯವಾಗಿದೆ. ಆದ್ದರಿಂದ ನಾವು ಸಾಂವಿಧಾನಿಕ ಹಕ್ಕುಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಈ ಅಧಿಕಾರ ವಿಕೇಂದ್ರೀಕರಣವನ್ನು ಪ್ರಾರಂಭಿಸಬೇಕು” ಎಂದು ಹೇಳಿದರು.
“ಐದು ವರ್ಷಗಳ ಅವಧಿಗೆ ನೇರವಾಗಿ ಮೇಯರ್ ಆಗಿ ಆಯ್ಕೆಯಾಗುವ ಮತ್ತು ಚುನಾಯಿತ ಕೌನ್ಸಿಲ್ ಮತ್ತು ತಂಡಗಳು ಮೇಯರ್ ಹಾಗೂ ಕೌನ್ಸಿಲ್‌ಗೆ ಉತ್ತರದಾಯಿಯಾಗಿರಬೇಕು ಎಂಬ ರಾಹುಲ್ ಗಾಂಧಿ ಅವರ ಸಾರ್ವಜನಿಕ ಭರವಸೆಯನ್ನು ರಾಜ್ಯ ಕಾಂಗ್ರೆಸ್ ಉಳಿಸಿಕೊಳ್ಳಬೇಕು” ಎಂದಿರುವ ಅವರು 2019ರ ಏಪ್ರಿಲ್ 1ರಂದು ರಾಹುಲ್ ಗಾಂಧಿ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿದ್ದು, ‘ನಿಜವಾದ ಸ್ಮಾರ್ಟ್ ಸಿಟಿಗಳನ್ನು ಬಲವಾದ ನಾಯಕತ್ವದಿಂದ ರಚಿಸಲಾಗುತ್ತದೆ. ನಗರ ಜೀವನವನ್ನು ಉನ್ನತೀಕರಿಸಲು, ನಾವು 5 ವರ್ಷಗಳ ಅವಧಿಗೆ ಚುನಾಯಿತರಾದ ಮೇಯರ್‌ಗಳು ಮತ್ತು ಚುನಾಯಿತ ಕೌನ್ಸಿಲ್‌ಗಳನ್ನು ಸಂಪರ್ಕಿಸುತ್ತೇವೆ. ಮೇಯರ್ ಮತ್ತು ಕೌನ್ಸಿಲ್‌ಗೆ ಉತ್ತರದಾಯಿಯಾಗಿರುವ ತಜ್ಞರು ಮತ್ತು ತಜ್ಞರ ಬಹುಶಿಸ್ತೀಯ ತಂಡಗಳಿಂದ ಆಡಳಿತ ನಡೆಸಲಾಗುತ್ತದೆʼ ಎಂಬ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಭರವಸೆ ನೀಡಿ ಆರು ವರ್ಷಗಳು ಕಳೆದಿವೆ. ಯಾವುದೇ ಪ್ರಗತಿಯಾಗಿಲ್ಲ. ಬ್ರ್ಯಾಂಡ್ ಬೆಂಗಳೂರು ಸಮಿತಿ ಕೂಡ ಈ ನಿಲುವಿಗೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಈಗಲೇ ಕ್ರಮ ಕಾರ್ಯಪ್ರವೃತ್ತರಾಗಬೇಕು” ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ನವನಿರ್ಮಾಣ ಪಕ್ಷದ(ಬಿಎನ್‌ಪಿ) ಮಹದೇವಪುರ ವಲಯ ಅಧ್ಯಕ್ಷ ವಿಷ್ಣು ರೆಡ್ಡಿ ಮಾತನಾಡಿ, “ಬೆಂಗಳೂರಿನಲ್ಲಿ ಪರಿಣಾಮಕಾರಿ, ಉತ್ತರದಾಯಿತ್ವ ಮತ್ತು ಫಲಿತಾಂಶ ಆಧಾರಿತ ನಗರ ಆಡಳಿತವನ್ನು ಉತ್ತೇಜಿಸಲು ಜಿಬಿಜಿಬಿ ಮಸೂದೆ-2024ನ್ನು ನವೀಕರಿಸಲಾಗುವುದೆಂದು ನಾವು ಭಾವಿಸುತ್ತೇವೆ. ಜಿಬಿಜಿಬಿ ಮಸೂದೆಗೆ ಸಂಬಂಧಿಸಿದ ಪಾಲುದಾರರಾಗಿ, ಪುರಸಭೆಯ ಆಡಳಿತವನ್ನು ವಿಕೇಂದ್ರೀಕರಿಸುವ ಬದಲಾವಣೆಗಳನ್ನು ನಾವು ಎದುರು ನೋಡುತ್ತಿದ್ದೇವೆ. ಮಸೂದೆಯಲ್ಲಿ ಉದ್ದೇಶಿಸಿರುವಂತೆ ಸೇವೆಗಳನ್ನು ಒದಗಿಸುವ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳಿಗೆ ವಿಶೇಷವಾಗಿ ಮಸೂದೆಯಲ್ಲಿ ನಿಬಂಧನೆಗಳಿವೆ. ಆದರೆ ಈವರೆಗೆ ಅವುಗಳ ಅನುಷ್ಠಾನವಾಗಿಲ್ಲ. ಕೊರತೆಯಿರುವ ಕ್ಷೇತ್ರಗಳಲ್ಲಿ ರಾಜಕೀಯ ಹೊಣೆಗಾರಿಕೆ ಸ್ಥಾಪಿಸುವುದು ನಿರ್ಣಾಯಕವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಬೆಂಗಳೂರಿಗೆ ಪರಿಣಾಮಕಾರಿ ನಗರ ಆಡಳಿತವನ್ನು ಸಾಧಿಸಲು ಸಹಾಯ ಮಾಡಲು ಮತ್ತು ಜಿಬಿಜಿಬಿ 2024ನ್ನು ಪರಿಣಾಮಕಾರಿ, ಜನಸ್ನೇಹಿ ಮತ್ತು ಸ್ಪಂದಿಸುವಂತೆ ಮಾಡಲು ಮೇಯರ್‌ಗಳ ಸಬಲೀಕರಣ ಮತ್ತು 5 ವರ್ಷಗಳ ಅವಧಿ ನೀಡಬೇಕು. ವಾರ್ಡ್ ಸಮಿತಿ ಸಿದ್ಧಪಡಿಸಿದಂತೆ ಪ್ರತಿ ವರ್ಷದ ಆರಂಭದಲ್ಲಿ ವಾರ್ಡ್ ಬಜೆಟ್ ಮತ್ತು ವಾರ್ಡ್ ಅಭಿವೃದ್ಧಿ ಯೋಜನೆಯನ್ನು ಪ್ರಸ್ತುತಪಡಿಸಲು ಕಾರ್ಪೊರೇಟರ್‌ಗಳಿಗೆ ಅಧಿಕಾರ ನೀಡಬೇಕು. ಮತದಾರರನ್ನು ಒಳಗೊಂಡ ಏರಿಯಾ ಸಭೆಗಳು, ವಾರ್ಡ್‌ನ ಆಯಾ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಪ್ರಸ್ತಾವನೆಗಳನ್ನು ರಚಿಸುವ ಅಧಿಕಾರ ಹೊಂದಿರಬೇಕು” ಎಂದು ಆಗ್ರಹಿಸಿದರು.
“18 ಕಾರ್ಯಗಳಲ್ಲಿ, ಪುರಸಭೆಗಳು ಕೆಲವು ಕಾರ್ಯಗಳ ಮೇಲೆ ಮಾತ್ರ ಸಂಪೂರ್ಣ ಅಧಿಕಾರ ಹೊಂದಿವೆ ಮತ್ತು ಉಳಿದವುಗಳಿಗೆ ಕೇವಲ ಅನುಷ್ಠಾನ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದ ಸ್ಥಳೀಯ ಆಡಳಿತಗಳ ಅಧಿಕಾರಗಳನ್ನು ರಕ್ಷಿಸುವ ಕ್ರಮಗಳನ್ನು ಮಸೂದೆ ಒಳಗೊಂಡಿರಬೇಕು” ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಜನಸ್ನೇಹಿ ಕೇಂದ್ರಗಳ ಸೇವಾ ಶುಲ್ಕ ಇಳಿಸುವಂತೆ ಡಿವೈಎಫ್‌ಐ ಮನವಿ
ಬಿಎನ್‌ಪಿ ವಿಶೇಷವಾಗಿ ಬೆಂಗಳೂರು ಮತ್ತು ಬಿಬಿಎಂಪಿಯ ಮೇಲೆ ಗಮನ ಕೇಂದ್ರೀಕರಿಸುವ ಒಂದು ವಿಶಿಷ್ಟ ರಾಜಕೀಯ ಪಕ್ಷವಾಗಿದೆ. ಘನತ್ಯಾಜ್ಯ ನಿರ್ವಹಣೆ, ಜಲ ಸಂರಕ್ಷಣೆ, ತ್ಯಾಜ್ಯನೀರಿನ ನಿರ್ವಹಣೆ, ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ದಣಿವರಿಯದೆ ಶ್ರಮಿಸುತ್ತಿರುವ ಬೆಂಗಳೂರಿನ ಉತ್ಸಾಹಿ ಮತ್ತು ಸಕ್ರಿಯ ನಾಗರಿಕರಿಂದ ಪಕ್ಷವನ್ನು ರಚಿಸಲಾಗಿದೆ. ಉತ್ತಮ ತಳಮಟ್ಟದ ಆಡಳಿತ, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ನೀಡುವ ಬಿಎನ್‌ಪಿ ಬೆಂಗಳೂರಿನ ಜನರನ್ನು ಪ್ರತಿನಿಧಿಸುತ್ತದೆ. ಬೆಂಗಳೂರನ್ನು ಮಾದರಿ ನಗರವನ್ನಾಗಿ ಪರಿವರ್ತಿಸುವ ನಾಡಪ್ರಭು ಕೆಂಪೇಗೌಡರ ಕನಸನ್ನು ನನಸು ಮಾಡುವ ಗುರಿಯನ್ನು ಬಿಎನ್‌ಪಿ ಹೊಂದಿದೆ.