ಈ ದಿನ ಸಂಪಾದಕೀಯ | ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವಿಳಂಬ, ನಜೀರ್ ಸಾಬ್‌ರಿಗೆ ಬಗೆದ ದ್ರೋಹವಲ್ಲವೇ?

Date:

Advertisements
ರಾಷ್ಟ್ರಕ್ಕೆ ಮಾದರಿಯಾದ, ನಾಡಿಗೆ ಕೀರ್ತಿತಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನೇ ಗೆದ್ದಲು ಹಿಡಿಯುವಂತೆ, ಸ್ಥಳೀಯ ಸಂಸ್ಥೆಗಳಿಗೆ ನಾಲ್ಕು ವರ್ಷವಾದರೂ ಚುನಾವಣೆ ನಡೆಸದಂತೆ ವಿಳಂಬ ಮಾಡುತ್ತಿರುವುದು, ನಜೀರ್ ಸಾಬ್‌ರಿಗೆ ಬಗೆದ ದ್ರೋಹವಲ್ಲವೇ?

‘ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ನಾವು ಸಿದ್ಧರಾಗಿದ್ದು, ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಚುನಾವಣೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗಾರರಿಗೆ ತಿಳಿಸಿದ ಬೆನ್ನಿಗೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಸಜ್ಜಾಗಬೇಕು’ ಎಂದು ಕರೆ ಕೊಟ್ಟಿದ್ದಾರೆ.

ಅಂದರೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೊನೆಗೂ ಚುನಾವಣೆ ನಡೆಸಲು ಮನಸ್ಸು ಮಾಡಿದೆ. ಅಸಲಿಗೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರದ ಅವಧಿ 2021ರ ಏಪ್ರಿಲ್–ಮೇ ತಿಂಗಳಲ್ಲಿಯೇ ಮುಕ್ತಾಯವಾಗಿತ್ತು. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಆನಂತರ ಬಂದ ಕಾಂಗ್ರೆಸ್ ಸರ್ಕಾರ ತಲಾ ಎರಡು ವರ್ಷಗಳ ಕಾಲ ಮುಂದೂಡಿದವು.

ಹಾಗೆ ಮುಂದೂಡಲು, ಬಿಜೆಪಿ – ಕಾಂಗ್ರೆಸ್ ಸರ್ಕಾರಗಳು ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಯಲ್ಲಿನ ತಾಂತ್ರಿಕ ಅಂಶಗಳನ್ನು ನೆಪವಾಗಿಸಿಕೊಂಡಿದ್ದವು. ಸಾಲದು ಎಂದು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರ ದತ್ತಾಂಶಗಳ ಆಧಾರದಲ್ಲಿ ಗುರುತಿಸಿ, ಅದರ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಗುರಾಣಿಯಂತೆ ಬಳಸಿಕೊಂಡಿದ್ದವು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದ್ದು, ಚುನಾವಣೆ ಮತ್ತಷ್ಟು ವಿಳಂಬವಾಗಲು ಕಾರಣವಾಗಿತ್ತು. ಇದನ್ನು ಎಲ್ಲ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರಗಳೂ ಅನುಸರಿಸಿಕೊಂಡು ಬಂದಿದ್ದವು.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸೊಕ್ಕು-ಸರ್ವಾಧಿಕಾರ-ಮೆದು ಹಿಂದುತ್ವದ ದಾರಿಯನ್ನು ತೊರೆಯುವರೇ ಕೇಜ್ರೀವಾಲ್?

ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿ ಅಧಿಕಾರ ರಾಜ್ಯ ಚುನಾವಣಾ ಆಯೋಗದ ಬಳಿ ಇಲ್ಲ. ರಾಜ್ಯ ಸರ್ಕಾರ ಈ ಎರಡೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಹೊರತು ಆಯೋಗ ಚುನಾವಣಾ ಪ್ರಕ್ರಿಯೆ ಆರಂಭಿಸುವಂತಿಲ್ಲ. ಆಯೋಗದ ಈ ಇಕ್ಕಟ್ಟನ್ನೇ ಅವಕಾಶವನ್ನಾಗಿ ಬಳಸಿಕೊಂಡ ಆಡಳಿತಾರೂಢ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ.

ಜೊತೆಗೆ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದಿರುವುದರ ಹಿಂದೆ ಸಚಿವರ, ಶಾಸಕರ ಸ್ವಾರ್ಥವೂ ಅಡಗಿದೆ. ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರು ಚುನಾಯಿತರಾದರೆ, ತಮ್ಮ ಅಧಿಕಾರ ಮತ್ತು ಅನುದಾನ ಕಡಿತಗೊಳ್ಳಬಹುದೆಂಬ ಆತಂಕ ಅಧಿಕಾರಸ್ಥರಲ್ಲಿದೆ. ಹೀಗಾಗಿ, ಜನಪ್ರತಿನಿಧಿಗಳಾರೂ ವಿಳಂಬದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುವುದಿಲ್ಲ. ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದರ ಹಿಂದೆ ಸಚಿವರನ್ನು, ಶಾಸಕರನ್ನು ಸಂತೃಪ್ತಿಪಡಿಸುವ ಉದ್ದೇಶವಿರುವುದು ರಹಸ್ಯವೇನೂ ಅಲ್ಲ.

ಪ್ರಜಾಪ್ರಭುತ್ವದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಅಡಿಪಾಯದಂತಿರುವುದು ಸ್ಥಳೀಯ ಸಂಸ್ಥೆ. ಅದು ಗಟ್ಟಿಗೊಂಡಷ್ಟೂ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಸಮುದಾಯದ ಸಹಭಾಗಿತ್ವ ಹೆಚ್ಚಿದಷ್ಟೂ ಆಡಳಿತ ಜನಸಾಮಾನ್ಯರಿಗೆ ಹತ್ತಿರವಾಗುತ್ತದೆ. ಆದರೆ, ಆಡಳಿತ ವ್ಯವಸ್ಥೆಯ ಮೊದಲ ಮೆಟ್ಟಿಲಿನಂತಿರುವ ಸ್ಥಳೀಯ ಸಂಸ್ಥೆಗಳ ಕಲ್ಲುಗಳನ್ನು ಕೀಳುವ ‘ಘನಂದಾರಿ’ ಕೆಲಸ ಇತ್ತೀಚಿನ ವರ್ಷಗಳಲ್ಲಿ ಚುನಾಯಿತ ಸರ್ಕಾರಗಳಿಂದಲೇ ನಡೆಯುತ್ತಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ‌ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಫೆ.17ರಂದು ನಡೆದು, ‘ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ವೇಳಾಪಟ್ಟಿ ಪ್ರಕಟಿಸಲಾಗುವುದು’ ಎಂದು ಚುನಾವಣಾ ಆಯೋಗ ತಿಳಿಸಿದೆ. ಸರ್ಕಾರದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ‘ಮೇ ತಿಂಗಳೊಳಗೆ ಮೀಸಲಾತಿ ನೀಡುವುದಾಗಿ ಸ್ಪಷ್ಟಪಡಿಸಿ, ಮೇ ಅಂತ್ಯದೊಳಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕೊಡಲಾಗುವುದು. ಜೂನ್ ಅಥವಾ ಜುಲೈ ತಿಂಗಳಲ್ಲಿ ಚುನಾವಣೆ ಆಯೋಗ, ಚುನಾವಣೆಗಳನ್ನು ನಡೆಸಬಹುದು’ ಎಂದಿದ್ದಾರೆ.

ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿರುವಂತೆಯೇ ಮೀಸಲು ಪಟ್ಟಿಯನ್ನು ಸಲ್ಲಿಕೆ ಮಾಡಿದ್ದೇ ಆದಲ್ಲಿ, ಹೆಚ್ಚೂಕಡಿಮೆ ಆಗಸ್ಟ್‌ನೊಳಗೆ ಜಿಪಂ ಹಾಗೂ ತಾಪಂಗಳಿಗೆ ಚುನಾವಣೆ ನಡೆಯಬಹುದು. ಸರ್ಕಾರ ಏನಾದರೂ ವಿಳಂಬ ಮಾಡಿದರೆ, ಆ ಪ್ರಕ್ರಿಯೆ ಮತ್ತಷ್ಟು ಮುಂದಕ್ಕೆ ಹೋಗಬಹುದು. ಆ ರೀತಿಯಾದರೆ, ಅಧಿಕಾರ ವಿಕೇಂದ್ರೀಕರಿಸುವ ಪಂಚಾಯತ್ ರಾಜ್ ಆಶಯಕ್ಕೆ ಭಂಗ ಬರುವುದು ನಿಶ್ಚಿತ.

1980ರ ದಶಕದ ರಾಜಕಾರಣಕ್ಕೆ ಅಧಿಕಾರ ವಿಕೇಂದ್ರಿಕರಣದ ದೀಕ್ಷೆಯನ್ನಿತ್ತು, ಜನತೆಗೇ ಅಧಿಕಾರ ಎಂಬ ಗಾಂಧೀಜಿಯ ಆದರ್ಶವನ್ನು ಪ್ರತ್ಯಕ್ಷವಾಗಿ ಅನುಷ್ಠಾನಗೊಳಿಸಿ, ಇಡೀ ರಾಷ್ಟ್ರದ ಪ್ರಜಾತಂತ್ರ ಪ್ರೇಮಿಗಳ ಮೆಚ್ಚುಗೆಗೆ, ಗೌರವಕ್ಕೆ ಪಾತ್ರರಾಗಿದ್ದು ಕರ್ನಾಟಕದ ನೀರ್ ಸಾಬ್ ಎಂದೇ ಖ್ಯಾತರಾದ ಅಬ್ದುಲ್ ನಜೀರ್ ಸಾಬ್. 1983 ಜನವರಿಯಿಂದ 1988 ಅಕ್ಟೋಬರ್‌ವರೆಗೆ ಅಂದರೆ ಸತತವಾಗಿ ಐದೂವರೆ ವರ್ಷಕಾಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾಗಿದ್ದ ನಜೀರ್ ಸಾಬ್, ಆಡಳಿತದಲ್ಲಿ ಜನರ ನೇರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ರೂಪಿಸಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!

ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಪಂಚಾಯತ್ ರಾಜ್ ವ್ಯವಸ್ಥೆಯಿಂದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಪ್ರಭಾವಿತರಾಗಿದ್ದರು. 1989ರಲ್ಲಿ ಸ್ವತಃ ರಾಜೀವ್ ಗಾಂಧಿಯವರೇ ಸಂಸತ್ತಿನಲ್ಲಿ ಸಂವಿಧಾನದ 64ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರು. ಆದರೆ ಅದು ಪಾಸಾಗಲಿಲ್ಲ. ಮುಂದೆ ರಾಜೀವ್ ಗಾಂಧಿಯ ನಿಧನಾನಂತರ ಅಧಿಕಾರಕ್ಕೆ ಬಂದ ಪಿ.ವಿ. ನರಸಿಂಹರಾವ್ ಪ್ರಧಾನಮಂತ್ರಿಗಿರಿಯಲ್ಲಿ ಪಾಸಾದ ಸಂವಿಧಾನದ 73ನೇ ಹಾಗೂ 74ನೇ ತಿದ್ದುಪಡಿ ಕಾಯ್ದೆಗಳೇ ಕನ್ನಡಮ್ಮನ ಹೆಮ್ಮೆಯ ಪುತ್ರ ನಜೀರ್ ಸಾಬ್‌ರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ- ರಾಜಕೀಯ ಸಾಧನೆಗೆ ದಕ್ಕಿದ ರಾಷ್ಟ್ರೀಯ ಪುರಸ್ಕಾರದಂತಿದ್ದವು.   

ರಾಷ್ಟ್ರಕ್ಕೆ ಮಾದರಿಯಾದ, ನಾಡಿಗೆ ಕೀರ್ತಿತಂದ ಇಂತಹ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನೇ ಗೆದ್ದಲು ಹಿಡಿಯುವಂತೆ, ನಾಲ್ಕು ವರ್ಷವಾದರೂ ಚುನಾವಣೆ ನಡೆಸದಂತೆ ವಿಳಂಬ ಧೋರಣೆ ತಳೆಯುತ್ತಿರುವುದು, ನಜೀರ್ ಸಾಬ್‌ರಿಗೆ ಬಗೆದ ದ್ರೋಹದಂತೆ ಕಂಡರೆ ಅಚ್ಚರಿ ಇಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X