ಮಂಗಳೂರು | ಬಾಲನ್ಯಾಯ ಮಂಡಳಿಯ ಸದಸ್ಯರ ಹುದ್ದೆಗೆ ‌ಬಿಜೆಪಿ ವಕೀಲೆ ನೇಮಕ; ಮಾನದಂಡ ಮರೆಯಿತೇ ಕಾಂಗ್ರೆಸ್?

Date:

Advertisements

ಬಾಲನ್ಯಾಯ ಮಂಡಳಿಯ ಸದಸ್ಯರ ಹುದ್ದೆಯು ನ್ಯಾಯಾಧೀಶರ ಹುದ್ದೆಗೆ ಸಮಾನವಾದ ಹುದ್ದೆ. ಇಂತಹ ಶ್ರೇಷ್ಠ ಹುದ್ದೆಗೆ ಮಂಗಳೂರಿನ ವಕೀಲೆ ಸುಮನಾ ಶರಣ ಎಂಬಾಕೆಯನ್ನು ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಾಲನ್ಯಾಯ ಮಂಡಳಿಯ ಸದಸ್ಯೆಯಾಗಿ ಆಯ್ಕೆಯಾಗಿರುವ ಮಂಗಳೂರಿನ ವಕೀಲೆ ಸುಮನಾ ಶರಣ ಬೀದಿಯಲ್ಲಿ ನಿಂತು ಒಂದು ರಾಜಕೀಯ ಪಕ್ಷದ ಪರವಾಗಿ ಬೊಬ್ಬೆ ಹೊಡೆಯುತ್ತಿರುತ್ತಾರೆ. ಇಂತಹವರು ನ್ಯಾಯಾಧೀಶರಿಗೆ ಸಮನಾದ ಸ್ಥಾನದಲ್ಲಿ ಕೂತರೆ ಮಕ್ಕಳ ಭವಿಷ್ಯದ ಗತಿಯೇನು?

ಕಳೆದ ಡಿಸೆಂಬರ್ 31ರಂದು ಇವರನ್ನು ಜೆಜೆಬಿ ಸದಸ್ಯರಾಗಿ ನೇಮಕ ಮಾಡಲಾಯಿತು. ಇದಾದ ಕೆಲವು ವಾರಗಳ ಬಳಿಕ ಅಂದರೆ ಜನವರಿ 17ರಂದು ಕೃಷಿ ಸಹಕಾರಿ ಸಂಘದ ನಿರ್ದೇಶಕ ಹುದ್ದೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಮಾತ್ರವಲ್ಲ ಅಧ್ಯಕ್ಷೆಯಾಗಿಯೂ ಆಯ್ಕೆಯಾದರು.

Advertisements

ಬಾಲನ್ಯಾಯ ಮಂಡಳಿಯ ಸದಸ್ಯರಾಗಿರುವವರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು, ಯಾವುದೇ ಪೂರ್ಣಾವಧಿ ಹುದ್ದೆಯನ್ನು ಹೊಂದಿರಬಾರದು. ಆದರೆ ಸುಮನಾ ಶರಣ್ ಚುನಾವಣೆಗೆ ಸ್ಪರ್ಧಿಸಿದ ಕೆಲವು ವಿಡಿಯೊ, ಫೋಟೋಗಳು, ಪೋಸ್ಟರ್ಗಳಿವೆ. ಹೀಗಿರುವಾಗ ಸುಮನಾ ಶರಣ್‌ಗೆ ಈ ನಿಯಮ ಹೇಗೆ ಅನ್ವಯಿಸುತ್ತದೆ ಎಂಬುದು ತಿಳಿಯದಾಗಿದೆ.

ಬಾಲನ್ಯಾಯ ಮಂಡಳಿಯ ಸದಸ್ಯ ಸ್ಥಾನಕ್ಕೆ ವಕೀಲೆ ಸುಮನಾ ಶರಣ್ ನೇಮಕವಾಗಿರುವ ಕುರಿತು ಸಿಪಿಐಎಂ ಮುಖಂಡ ಮುನೀರ್‌ ಕಾಟಿಪಳ್ಳ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಹಾಗೂ ಬಿಜೆಪಿ ರಾಜಕೀಯದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಕಾಂಗ್ರೆಸ್‌ ನಾಯಕತ್ವ ಹಾಗೂ ಸರ್ಕಾರದ ಹಂತದಲ್ಲಿ ಅಧಿಕಾರವನ್ನು ಹೊಂದಿರುವ ಎಲ್ಲರೂ ಬಿಜೆಪಿಯ ಜತೆಗಿನ ಹೊಂದಾಣಿಕೆಯಲ್ಲಿದ್ದಾರೆ. ಕಾಂಗ್ರೆಸ್‌ ನಾಯಕರು ಆಯೋಜಿಸುವ ಹುಲಿ ಕುಣಿತ, ಬಿಜೆಪಿ ನಾಯಕರು ಆಯೋಜಿಸುವ ಹುಲಿಕುಣಿತ, ಕಂಬಳದಂತಹ ಕಾರ್ಯಕ್ರಮಗಳಲ್ಲಿ ಹೊಂದಾಣಿಕೆಯ ರಾಜಕೀಯ ಎದ್ದುಕಾಣುತ್ತಿದೆ. ಇವರ ಅಪವಿತ್ರ ಮೈತ್ರಿಯ ಪ್ರತಿಬಿಂಬವೇ ಬಾಲನ್ಯಾಯ ಮಂಡಳಿಯ ಸದಸ್ಯರಾಗಿ ಸುಮನಾ ಶರಣ ಎಂಬ ವಕೀಲೆಯನ್ನು ನೇಮಕ ಮಾಡಿರುವುದು. ಇದರಲ್ಲಿ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಸಹಜ ಪ್ರವೃತ್ತಿಯ ಪ್ರತಿಫಲನ” ಎಂದು ಆರೋಪಿಸಿದರು.

ಸುಮನಾ ಶರಣ್‌ ನೇಮಕ

“ಕಾಂಗ್ರೆಸ್‌ನ ರಾಜ್ಯ ನಾಯಕತ್ವಕ್ಕೆ, ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಏನಾದರು ಇದ್ದರೆ, ಸರಿಯಾದ ಕ್ರಮಕ್ಕೆ ಮುಂದಾಗಬೇಕು. ಇಲ್ಲಿ ಎಲ್ಲ ಬೆಳವಣಿಗೆಗಳೂ ಕೂಡಾ ಸಂಘಪರಿವಾರ ಹಾಗೂ ಆರ್‌ಎಸ್‌ಎಸ್‌ಗೆ ಬೇಕಾದಂತೆ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್‌ ಎರಡೂ ಕೂಡಾ ಸಂಘ ನಿಕೇತನದ ನಿರ್ದೇಶನದ ಪ್ರಕಾರವೇ ಕಾರ್ಯ ನಿರ್ವಹಿಸುತ್ತಿವೆ” ಎಂದರು.

ಬಾಲನ್ಯಾಯ ಮಂಡಳಿಗೆ ಆಯ್ಕೆಯಾಗುವಂತಹವರು, ನಿಷ್ಪಕ್ಷಪಾತೀಯವಾಗಿ ಇರಬೇಕು ಯಾವುದೇ ಪಕ್ಷ ಅಥವಾ ಹುದ್ದೆಗಳಲ್ಲಿ ಗುರುತಿಸಿಕೊಂಡಿರಬಾರದು. ಈಗಾಗಲೇ ಇವರು ಸಹಕಾರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು, ಅಧಿಕಾರವನ್ನೂ ವಹಿಸಿಕೊಂಡಿದ್ದಾರೆ. ಈ ಒಂದು ಹುದ್ದೆಗೆ ಪ್ರತ್ಯಕ್ಷವಾಗಿ ಕಾಂಗ್ರೆಸ್‌ನಿಂದ ಗುರುತಿಸಿಕೊಂಡಿರುವಂತ ಅಭ್ಯರ್ಥಿಗಳನ್ನೂ ನೇಮಿಸುವಂತಿಲ್ಲ. ಹೀಗಿರುವಾಗ ಕೋಮುವಾದಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವಂತಹವರನ್ನು ನೇಮಕ ಮಾಡಿದೆ. ಇಂತಹ ಶ್ರೇಷ್ಠ ಹುದ್ದೆಗೆ ಎಂಥವರನ್ನು ನೇಮಕ ಮಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಕಾಂಗ್ರೆಸ್‌ಗೆ ಇಲ್ಲವಾಗಿದೆ. ಅಂದರೆ ಹೊಂದಾಣಿಕೆಯ ರಾಜಕೀಯವೇ ಹೌದು” ಎಂದರು.

ಸುಮನಾ ಶರಣ್‌ ರಾಜಕೀಯ
ವಕೀಲೆ ಸುಮನಾ ಶರಣ್‌ ರಾಜಕೀಯ ಕುರುಹುಗಳು

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳನ್ನು ಮಾರಾಟ ಮಾಡುತ್ತಿರುವುದು, ಅವರಿಂದ ದುಡಿಸಿಕೊಳ್ಳುವುದು, ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸುವಂತಹ ಅಪರಾಧಗಳು ಕೇಳಿಬರುತ್ತಲೇ ಇವೆ. ಇಂತಹ ಮಕ್ಕಳ ವಿಚಾರದಲ್ಲಿ ಸೂಕ್ಷ್ಮತೆ ಹೊಂದಿರುವವರು, ಪಳಗಿರುವಂತಹವರರೇ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಸೂಕ್ಷ್ಮತೆಗಳಿರುವವರು, ಮಕ್ಕಳ ಪರ ಧ್ವನಿ ಎತ್ತುವವಂತಹ ತಜ್ಞರು ಬಹುತೇಕರು ಇದ್ದಾರೆ. ಆದರೂ ಇಂತಹ ಸ್ಥಾನಕ್ಕೆ ರಾಜಕೀಯ ಹಿನ್ನೆಲೆ ಇರುವವರನ್ನು ನೇಮಿಸಿರುವುದು ಒಪ್ಪುವಂಥದ್ದಲ್ಲ” ಎಂದು ಖಂಡನೆ ವ್ಯಕ್ತಪಡಿಸಿದರು.

ಬಿಜೆಪಿ ವಕೀಲೆ

“ಬಾಲನ್ಯಾಯ ಮಂಡಳಿ ಸದಸ್ಯರ ನೇಮಕಾತಿ ಕುರಿತು ಪುನರ್‌ ಪರಿಶೀಲನೆ ಮಾಡಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಕಾಳಜಿ ಇರುವಂತಹ ಎಲ್ಲರೂ ಈ ಕುರಿತು ಧ್ವನಿ ಎತ್ತಬೇಕು” ಎಂದು ಆಗ್ರಹಿಸಿದರು.

ಸಿಪಿಐಎಂ ನಾಯಕ ಸುನಿಲ್‌ ಬಜಾಲ್‌ ಮಾತನಾಡಿ, “ಬಾಲನ್ಯಾಯ ಮಂಡಳಿಯೆಂದರೆ ಕಾನೂನಿನ ಸಂಘರ್ಷಕ್ಕೊಳಗಾದ ಮಕ್ಕಳ ನ್ಯಾಯ ವಿಚಾರಣೆಯ ಉದ್ದೇಶದ ಸಂಸ್ಥೆಯಾಗಿದೆ. ಇದರಲ್ಲಿ ಸದಸ್ಯರಾಗಿರುವವರು ಮಕ್ಕಳ ಅಪರಾಧ ಪ್ರಕರಣಗಳ ವಿಚಾರಣೆಯ ಜವಾಬ್ದಾರಿ ಹೊಂದಿದವರಾಗಿರುತ್ತಾರೆ. ಇಲ್ಲಿ ಎಲ್ಲ ಜಾತಿ, ಧರ್ಮ, ವರ್ಗದ ಮಕ್ಕಳು ನ್ಯಾಯ ವಿಚಾರಣೆಗಾಗಿ ಬರುತ್ತಾರೆ. ನ್ಯಾಯ ನೀಡಬೇಕಾದ ಸ್ಥಾನದಲ್ಲಿ ಇರುವವರು ಹೀಗೆ ಸಾರ್ವಜನಿಕವಾಗಿ ತನ್ನ ರಾಜಕೀಯ ಅಸ್ತಿತ್ವವನ್ನು ಪ್ರದರ್ಶಿಸುತ್ತಾರೆ ಎಂದಾದರೆ, ನ್ಯಾಯ ಕೇಳಿ ಬರುವ ಆ ಮಕ್ಕಳಿಗೆ ಎಂತಹ ನ್ಯಾಯ ಸಿಕ್ಕೀತು?” ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರದ ನಿಯಮಗಳ ಪ್ರತಿ

“ಈ ರೀತಿಯ ಸ್ಥಾನಗಳಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರದ ನಿಷ್ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುವವರನ್ನು ಆಯ್ಕೆ ಮಾಡಬೇಕು. ಇದೀಗ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸುಮನಾ ಅವರ ಆಯ್ಕೆ ಸಂವಿಧಾನ ವಿರೋಧಿ ನಡೆಯಾಗಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ವಿರೋಧಿಸುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಾಲನ್ಯಾಯ ಮಂಡಳಿಗೆ ಸುಮನಾ ಅವರನ್ನು ಆಯ್ಕೆ ಮಾಡಿರುವ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ಕೂಡಲೇ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಅದಕ್ಕೆ ನಿಯಮಾನುಸಾರ ಸೂಕ್ತವಾದ ಹಾಗೂ ದೇಶದ ಸಂವಿಧಾನಕ್ಕೆ ಗೌರವ ನೀಡುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು” ಎಂದು ಒತ್ತಾಯಿಸಿದರು.

ಇನ್ನು ಬಿಜೆಪಿಯ ಸಹಸಂಸ್ಥೆ ಸಹಕಾರ ಭಾರತೀಯ ಬ್ಯಾನರ್ ಅಡಿಯಲ್ಲಿ ಸರ್ಕಾರ ಸಂಸ್ಥೆಯ ಚುನಾವಣೆಗೆ ಸ್ಪರ್ಧಿಸಿದ ಸುಮನಾ ಶರಣರಿಗೆ ಮತಯಾಚಿಸಿದ ಶಾಸಕ ವೇದವ್ಯಾಸ್ ಕಾಮತ್, ಆ ಬಳಿಕ ಅವರು ವಿಜಯಿಯಾದ ಬಗ್ಗೆ ಮತ್ತು ಅಧ್ಯಕ್ಷರಾದ ಬಗ್ಗೆ ಅಭಿನಂದಿಸಿ ಕೂಡ ಪೋಸ್ಟ್ ಹಂಚಿಕೊಂಡಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ವಿಜಯೋತ್ಸವದ ಸಂದರ್ಭದಲ್ಲಿ ಖುದ್ದು ವೇದ ವ್ಯಾಸ ಅವರು ಅಲ್ಲಿದ್ದು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಜತೆಗೆ ತನ್ನ ವಿಜಯೋತ್ಸವ ಮತ್ತು ತನ್ನ ಬಳಗದ ವಿಜಯೋತ್ಸವವನ್ನು ಸುಮನಾ ಶರಣ್ ತನ್ನ ಫೇಸ್ ಬುಕ್ ಖಾತೆಗಳಲ್ಲಿ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ| ಯುವಜನತೆ ದೇಶದ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ನೆಡೆದುಕೊಳ್ಳುವುದೇ ದೇಶಪ್ರೇಮ: ವಿಧಾನಸಭಾಧ್ಯಕ್ಷ ಯು ಟಿ ಖಾದರ್

ನಿರ್ದಿಷ್ಟ ಪಕ್ಷ ಒಂದು ನಿರ್ದಿಷ್ಟ ಸಂಘಟನೆಯ ಸದಸ್ಯರಾಗಿ ಮಾಡಿದ ರಂಪಾಟಗಳ ವಿಡಿಯೋ ಮತ್ತು ಫೋಟೋಗಳ ದಾಖಲೆಗಳನ್ನೂ ಕೂಡ ಸುಮನ ಶರಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಟ್ಟುಕೊಂಡಿದ್ದಾರೆ. ಹಾದಿಬೀದಿಯವರಂತೆ ಸ್ಕೂಟರ್ ಮೇಲೆ ನಿಂತು ಬೊಬ್ಬಿ ಹೊಡೆಯುತ್ತಿರುವುದು ಘೋಷಣೆ ಕೂಗುತ್ತಿರುವ ಇವರು ಮಕ್ಕಳಿಗೆ ಯಾವ ರೀತಿ ಯಾವುದರ ಆಧಾರದಲ್ಲಿ ನ್ಯಾಯ ಒದಗಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ನ್ಯಾಯಾಧೀಶರಿಗೆ ಸಮಾನವಾದ ಸ್ಥಾನದಲ್ಲಿ ಇರುವವರು ಹೀಗೆ ಒಂದು ರಾಜಕೀಯ ಪಕ್ಷದ ಪರವಾಗಿ ನಡೆದುಕೊಳ್ಳುವುದು ಎಷ್ಟು ಸರಿ?, ಇಂತಹವರ ಬಳಿ ನ್ಯಾಯ ಕೇಳಿ ಬರುವ ಸಂತ್ರಸ್ತ ಮಕ್ಕಳ ಗತಿಯೇನು?

ಬಾಲನ್ಯಾಯ ಮಂಡಳಿ ಯಾನೆ ಜೆಜೆಬಿಗೆ ಸದಸ್ಯರನ್ನಾಗಿ ನೇಮಿಸುವ ಮೊದಲು ಆ ವ್ಯಕ್ತಿಯ ನಡತೆ ನಡವಳಿಕೆ ಬಗ್ಗೆ ಪೊಲೀಸ್ ಮತ್ತು ಅಧಿಕಾರಿಗಳಿಂದ ಕ್ಲಿಯರೆನ್ಸ್ ಕೇಳಲಾಗುತ್ತದೆ. ಇವರ ಬಗ್ಗೆ ಅಧಿಕಾರಿಗಳು ಅದೆಂತಹ ಕ್ಲಿಯರೆನ್ಸ್ ನೀಡಿರಬಹುದು ಎನ್ನುವುದರ ಸಾಕ್ಷ್ಯ ಈಗಾಗಲೆ ಕಣ್ಣೆದುರೇ ಇದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X