ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ ಬಳಿಕ 40 ರಿಂದ 50 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಆತಂಕಕಾರಿ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ನಡೆದಿದೆ.
ಶಿರಾ ಪಟ್ಟಣದ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಒಡೆತನದ ಪ್ರೆಸಿಡೆನ್ಸಿ ಖಾಸಗಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಕಳಪೆ ಗುಣಮಟ್ಟದ ಕಲುಷಿತ ಆಹಾರ ಸೇವಿಸಿ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಸದ್ಯ ಶಿರಾ ತಾಲೂಕು ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ವಿಷಯ ತಿಳಿದ ವಸತಿ ಶಾಲೆಯ ಮಾಲೀಕ ಹಾಗೂ ಎಂಎಲ್‌ಸಿ ಚಿದಾನಂದ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಹಾಗೂ ಕೊಪ್ಪಳದಲ್ಲೂ ಈ ರೀತಿಯ ಘಟನೆಗಳು ನಡೆದಿದ್ದವು. ಅವು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಇಂಥದ್ದೇ ಘಟನೆ ಮರುಕಳಿಸಿರುವುದು ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ.
ಈ ಸುದ್ದಿ ಓದಿದ್ದೀರಾ?: ಶಿರಾ | ಹಾಸ್ಟೆಲ್ ನ 14 ವಿದ್ಯಾರ್ಥಿಗಳು ಅಸ್ವಸ್ಥ : ಆಸ್ಪತ್ರೆಯಲ್ಲಿ ಚಿಕಿತ್ಸೆ
ರಾಜ್ಯದ ಬಹುತೇಕ ಶಾಲೆಗಳಲ್ಲಿ ಊಟದಲ್ಲಿ ನುಸಿ, ಹುಳುಗಳು ಕಂಡುಬರುತ್ತಿರುವ ವರದಿಗಳು ದಿನನಿತ್ಯ ಪ್ರಕಟವಾಗುತ್ತಿವೆ. ಆಹಾರ ಧಾನ್ಯಗಳನ್ನು ಪ್ರತಿ ತಿಂಗಳು ಆಯಾ ಶಾಲೆಗೆ ಬೇಕಾಗುವಷ್ಟು ಸರಬರಾಜು ಮಾಡಲಾಗುತ್ತದೆ. ಜಿಲ್ಲೆಯ ವಿವಿಧ ಗೋಡೌನ್ ಗಳಿಂದ ಅಕ್ಕಿ ಪೂರೈಕೆಯಾದ್ರೆ, ತೊಗರಿಬೇಳೆ, ಎಣ್ಣೆ ಸೇರಿದಂತೆ ಬೇರೆ ಪದಾರ್ಥಗಳು ಟೆಂಡರ್ ಪಡೆಯುವ ಏಜೆನ್ಸಿಗಳು ಪೂರೈಗೆ ಮಾಡುತ್ತವೆ. ಕಳಪೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮನವಿ ಮಾಡುತ್ತಿದ್ದಾರೆ.
