- ಸ್ನೇಹಪೂರ್ವಕ ಭೇಟಿ ಎಂದ ಸಿಎಂ ಸಿದ್ದರಾಮಯ್ಯ
- ಶಿವಣ್ಣ ಭೇಟಿಯ ಹಿಂದಿದೆ ರಾಜಕೀಯ ಲೆಕ್ಕಾಚಾರ
ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಶಿವರಾಜ್ ಕುಮಾರ್ ಸೋಮವಾರ ಬೆಳಗ್ಗೆ ತಮ್ಮ ಪತ್ನಿ ಗೀತಾ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ದಂಪತಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಸ್ನೇಹಪೂರ್ವಕ ಭೇಟಿ ಎನ್ನಿಸಿದರೂ ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ಬೆನ್ನಲ್ಲೇ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರ ಪರವಾಗಿ ಶಿವಣ್ಣ ಚುನಾವಣಾ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ತಮ್ಮ ಸಂಬಂಧಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಶಿವಣ್ಣ ಪಟ್ಟು ಹಿಡಿದಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಅದರಂತೆ ಮಧು ಅವರಿಗೆ ಮಂತ್ರಿಗಿರಿ ಕೂಡ ಒಲಿದಿತ್ತು.
ವಿಧಾನಸಭಾ ಚುನಾವಣೆಯ ಬಳಿಕ ಇದೀಗ ಎಲ್ಲರ ಚಿತ್ತ 2024ರ ಲೋಕಸಭಾ ಚುನಾವಣೆಯತ್ತ ನೆಟ್ಟಿದೆ. ಇದೇ ಕಾರಣಕ್ಕೆ ಶಿವಣ್ಣ ಮತ್ತು ಗೀತಾ ಅವರು ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸಿದ್ದರಾಮಯ್ಯನವರು ಮಾತ್ರ, ಶಿವಣ್ಣ ದಂಪತಿ ನನ್ನನ್ನು ಅಭಿನಂದಿಸುವ ಸಲುವಾಗಿ ಮನೆಗೆ ಭೇಟಿ ನೀಡಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚೀನಾ | ವಿಮಾನ ನಿಲ್ದಾಣದಲ್ಲಿ ಮೆಸ್ಸಿಯನ್ನು ವಶಕ್ಕೆ ಪಡೆದ ಪೊಲೀಸರು
ಗೀತಾ ಶಿವರಾಜ್ ಕುಮಾರ್, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಮಗಳು. ಈ ಹಿಂದೆ ಜೆಡಿಎಸ್‌ನಲ್ಲಿದ್ದ ಗೀತಾ, 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಯಡಿಯೂರಪ್ಪನವರ ವಿರುದ್ಧ ಸೋಲನುಭವಿಸಿದ್ದರು. ಇದೀಗ ಕೈಪಾಳೆಯ ಸೇರಿರುವ ಅವರು ಮತ್ತೊಮ್ಮೆ ಅದೇ ಕ್ಷೇತ್ರದಿಂದ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ ಎಂಬ ಚರ್ಚೆ ಕೂಡ ಜೋರಾಗಿದೆ.