ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದ 52 ಮಂದಿ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸರ್ಕಾರವು ಪೊಲೀಸ್ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಭ್ರಷ್ಟಾಚಾರ ವಿರೋಧಿ ಅಂದೋಲನದಿಂದಲೇ ಪ್ರವರ್ದಮಾನಕ್ಕೆ ಬಂದು, ರಾಜಕೀಯ ನೆಲೆಯನ್ನು ವಿಸ್ತರಿಸುತ್ತಿರುವ ಎಎಪಿ, ಪಂಜಾಬ್‌ನಲ್ಲಿ ತಮ್ಮ ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಮುಂದುವರೆಸಿದೆ. 52 ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸುವ ಮೂಲಕ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
“ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪ ಹೊತ್ತಿರುವ 52 ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಭ್ರಷ್ಟಾಚಾರದ ಕೃತ್ಯಗಳ ವಿರುದ್ಧದ ಕಠಿಣ ಕ್ರಮಗಳ ಭಾಗವಾಗಿ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಂತಹ ಕೃತ್ಯಗಳಲ್ಲಿ ಅಧಿಕಾರಿಗಳು ಭಾಗಿಯಾದಲ್ಲಿ, ಕ್ರಮವು ತೀವ್ರವಾಗಿರುತ್ತದೆ” ಎಂದು ಪೊಲೀಸ್ ಅಧಿಕಾರಿಗಳಿಗೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಈ ವರದಿ ಓದಿದ್ದೀರಾ?: ಸೊಕ್ಕು-ಸರ್ವಾಧಿಕಾರ-ಮೆದು ಹಿಂದುತ್ವದ ದಾರಿಯನ್ನು ತೊರೆಯುವರೇ ಕೇಜ್ರೀವಾಲ್?
ಭ್ರಷ್ಟಾಚಾರದ ವಿರುದ್ಧದ ಕ್ರಮಗಳಿಗಾಗಿ ಎಎಪಿ ಸರ್ಕಾರವು ಸಹಾಯವಾಣಿಯನ್ನು ಆರಂಭಿಸಿದೆ. ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಅಥವಾ ರಾಜಕೀಯ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡುಬಂದರೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗೆ ‘9501200200’ ಕರೆ ಮಾಡುವಂತೆ ಮನವಿ ಮಾಡಿದೆ.
ಸಾರ್ವಜನಿಕರು ಅಧಿಕಾರಗಳು ಲಂಚ ಪಡೆಯುತ್ತಿರುವ ಅಥವಾ ಬೇಡಿಕೆ ಇಡುತ್ತಿರುವ ಆಡಿಯೋ ಅಥವಾ ವಿಡಿಯೋಗಳನ್ನು ಚಿತ್ರೀಕರಿಸಿ ಸಹಾಯವಾಣಿ ಸಂಖ್ಯೆಗೆ ಕಳುಹಿಸಬಹುದು. ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.