“ಸಂವಿಧಾನ ರಚನೆಯಲ್ಲಿ ದಲಿತರ ಪಾತ್ರ ಪ್ರಮುಖವಾದದ್ದು. ಆದರೆ, ವ್ಯವಸ್ಥೆಯ ದಬ್ಬಾಳಿಕೆಯಿಂದಾಗಿ ದಲಿತರು ನಲುಗಿ ಹೋಗಿದ್ದಾರೆ” ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತಾವು ಪ್ರತಿನಿಧಿಸುವ ರಾಯ್‌ಬರೇಲಿಯ ಬರ್ಗಡ್ ಚೌರಾಹಾದಲ್ಲಿರುವ ‘ಮೂಲ್ ಭಾರತಿ’ ಹಾಸ್ಟೆಲ್‌ನಲ್ಲಿ ದಲಿತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಗುರುವಾರ ಸಂವಾದ ನಡೆಸಿದ್ದಾರೆ.”ಭಾರತದಲ್ಲಿರುವ 500 ಅತೀ ದೊಡ್ಡ ಖಾಸಗಿ ಕಂಪನಿಗಳನ್ನು ಪಟ್ಟಿ ಮಾಡಿದರೆ, ಅವುಗಳ ಪೈಕಿ ಎಷ್ಟು ಕಂಪನಿಗಳನ್ನು ದಲಿತರು ನಡೆಸುತ್ತಿದ್ದಾರೆ” ಎಂದು ವಿದ್ಯಾರ್ಥಿಗಳನ್ನು ರಾಹುಲ್ ಪ್ರಶ್ನಿಸಿದ್ದಾರೆ.
ಅವರ ಪ್ರಶ್ನೆಗೆ ಉತ್ತರಿಸಿದ ಓರ್ವ ವಿದ್ಯಾರ್ಥಿ, ‘ಒಂದೂ ಇಲ್ಲ’ ಎಂದಿದ್ದಾರೆ. ‘ಯಾಕೆ ಹೀಗೆ’ ಎಂದು ರಾಹುಲ್ ಗಾಂಧಿ ಮರುಪ್ರಶ್ನೆ ಕೇಳಿದ್ದು, ಮತ್ತೋರ್ವ ವಿದ್ಯಾರ್ಥಿ, ‘ಏಕೆಂದರೆ, ನಮಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿಲ್ಲ” ಎಂದು ಉತ್ತರಿಸಿದರು.
ಅವರ ಉತ್ತರವನ್ನು ಒಪ್ಪದ ರಾಹುಲ್ ಗಾಂಧಿ, “ಬಿ.ಆರ್ ಅಂಬೇಡ್ಕರ್ ಅವರಿಗೆ ಯಾವುದೇ ಸೌಲಭ್ಯವಿರಲಿಲ್ಲ. ಅವರು ಏಕಾಂಗಿಯಾಗಿ ತಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದರು. ಅವರು ದೇಶದ ರಾಜಕೀಯವನ್ನೇ ಅಲ್ಲಾಡಿಸಿದರು” ಎಂದು ಹೇಳಿದ್ದಾರೆ.
“ಸಮಾಜದಲ್ಲಿ ನಿಮ್ಮ (ದಲಿತರು) ವಿರುದ್ಧವಾದ, ನಿಮ್ಮ ಪ್ರಗತಿಯನ್ನು ಸಹಿಸದ ವ್ಯವಸ್ಥೆ ಇದೆ. ಈ ವ್ಯವಸ್ಥೆಯು ಪ್ರತಿದಿನ ನಿಮ್ಮ ಮೇಲೆ ದಾಳಿ ಮಾಡುತ್ತದೆ. ಬಹುತೇಕ ಸಮಯದಲ್ಲಿ, ನಿಮ್ಮ ಮೇಲೆ ವ್ಯವಸ್ಥೆಯ ದಾಳಿ ಹೇಗೆ ನಡೆಯುತ್ತಿದೆ ಎಂಬುದು ನಿಮಗೂ ತಿಳಿದಿರುವುದಿಲ್ಲ” ಎಂದು ರಾಹುಲ್ ವಿವರಿಸಿದ್ದಾರೆ.
“ಸಂವಿಧಾನದ ಸಿದ್ಧಾಂತವೇ ನಿಮ್ಮ ಸಿದ್ಧಾಂತ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಈ ದೇಶದಲ್ಲಿ ದಲಿತರು ಇಲ್ಲದಿದ್ದರೆ, ಭಾರತಕ್ಕೆ ಇಂತಹ ಸಂವಿಧಾನ ಸಿಗುತ್ತಿರಲಿಲ್ಲ ಎಂದು ನಾನು ಖಚಿತವಾಗಿ ಹೇಳುತ್ತೇನೆ. ಇದು ನಿಮ್ಮ ಸಿದ್ಧಾಂತ, ಇದು ನಿಮ್ಮ ಸಂವಿಧಾನ. ಆದರೆ, ನೀವು ಎಲ್ಲಿಗೇ ಹೋದರೂ ವ್ಯವಸ್ಥೆಯ ದಬ್ಬಾಳಿಕೆಯಿಂದ ನೀವು ನಲುಗಿ ಹೋಗುತ್ತಿದ್ದೀರಿ” ಎಂದು ಹೇಳಿದ್ದಾರೆ.