ಚಾಲಕನ ನಿಯಂತ್ರಣ ತಪ್ಪಿ ಆಟೊ ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೀದರ್ ತಾಲ್ಲೂಕಿನ ಮರಖಲ್ ಗ್ರಾಮ ಹೊರವಲಯದ ರಾಷ್ಟ್ರೀಯ ಹೆದ್ದಾರಿ-161ಎ ರಲ್ಲಿ ಗುರುವಾರ ನಡೆದಿದೆ.
ಔರಾದ್ ತಾಲ್ಲೂಕಿನ ಬಲ್ಲೂರ(ಜೆ) ಗ್ರಾಮದ ರಾಜಕುಮಾರ್ ಉದಗೀರೆ (58) ಮೃತರು. ಮೃತರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ.
ರಾಜಕುಮಾರ್ ಅವರು ಗುರುವಾರ ಬೆಳಿಗ್ಗೆ ಅದೇ ಗ್ರಾಮದ ಆಟೊದಲ್ಲಿ ಬೀದರ್ ಕಡೆಗೆ ತೆರಳುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ಆಟೊ ಟ್ರ್ಯಾಕ್ಟರ್‌ಗೆ ಹಿಂದಿಕ್ಕುವ ಭರದಲ್ಲಿ ಪಲ್ಟಿಯಾಗಿದೆ. ಚಾಲಕನ ಪಕ್ಕ ಮುಂದೆ ಕುಳಿತಿದ್ದ ರಾಜಕುಮಾರ್ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸೆರೆಳೆದಿದ್ದಾರೆ. ಆಟೊ ಚಾಲಕ ಸೇರಿ ಆಟೊದಲ್ಲಿದ್ದ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.