ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಂಡಿಸಿದ ಉತ್ತರ ಪ್ರದೇಶ ಬಜೆಟ್ ಅನ್ನು ಗುರುವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ, ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿರಸ್ಕರಿಸಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿಯ ‘ಎರಡನೇ ಕೊನೆಯ ಬಜೆಟ್’ ಎಂದು ಹೇಳಿರುವ ಅಖಿಲೇಶ್, ಉತ್ತರ ಪ್ರದೇಶ ಬಜೆಟ್‌ಗೂ ಬಿಜೆಪಿ ಪ್ರಣಾಳಿಕೆಗೂ ಸಂಬಂಧವೇ ಇಲ್ಲ ಎಂದಿದ್ದಾರೆ.
ಸರ್ಕಾರದ ವಿಧಾನವನ್ನು ಟೀಕಿಸಿದ ಯಾದವ್, “ಇತ್ತೀಚಿನ ಬಜೆಟ್ ಸೇರಿದಂತೆ ಬಿಜೆಪಿ ಸರ್ಕಾರದ ಯಾವುದೇ ಬಜೆಟ್‌ಗಳು ಉತ್ತರ ಪ್ರದೇಶಕ್ಕೆ ಸ್ಪಷ್ಟ ದೃಷ್ಟಿಕೋನ ಅಥವಾ ನಿರ್ದೇಶನವನ್ನು ಹೊಂದಿಲ್ಲ. ಇದು ಈ ಸರ್ಕಾರದ ಒಂಬತ್ತನೇ ಬಜೆಟ್, ಹಾಗೆಯೇ ಎರಡನೇ ಕೊನೆಯ ಬಜೆಟ್” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಯುಪಿ ಸಿಎಂ ನಿವಾಸದಡಿಯಲ್ಲಿ ಶಿವಲಿಂಗವಿದೆ: ಅಖಿಲೇಶ್ ಯಾದವ್
ಬಜೆಟ್‌ಗೂ ಬಿಜೆಪಿಯ ಪ್ರಣಾಳಿಕೆಗೂ ಯಾವುದೇ ಸಂಬಂಧವಿಲ್ಲ. ಈ ಬಜೆಟ್ ಬಳಿಕ ನಂತರ ಈ ಆಡಳಿತಾವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಅದಾದ ಬಳಿಕ ಜನರಿಗೆ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಅವಕಾಶ ಸಿಗುತ್ತದೆ” ಎಂದರು.
“ರಾಜ್ಯವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದರ ಕುರಿತು ಯಾವುದೇ ಮಾರ್ಗಸೂಚಿಯಿಲ್ಲದೆ ಸರ್ಕಾರ ಬಜೆಟ್‌ಗಳನ್ನು ಮಂಡಿಸಿದೆ. ಸಾಮಾನ್ಯ ಜನರ ಅಗತ್ಯಗಳನ್ನು ಹೇಗೆ ಪೂರೈಸಲಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ” ಎಂದು ಅಖಿಲೇಶ್ ಬಜೆಟ್ ಅನ್ನು ಟೀಕಿಸಿದರು.
ಇನ್ನು ಅತಿ ದೊಡ್ಡ ಬಜೆಟ್ ಅನ್ನು ಮಂಡಿಸಲಾಗಿದೆ ಎಂಬ ಬಿಜೆಪಿಯ ಹೇಳಿಕೆಯನ್ನು ಟೀಕಿಸಿದ ಎಸ್‌ಪಿ ನಾಯಕ, ಪ್ರತಿ ಹೊಸ ಬಜೆಟ್ ಸ್ವಾಭಾವಿಕವಾಗಿ ಹಿಂದಿನದಕ್ಕಿಂತ ದೊಡ್ಡದಾಗಿರುತ್ತದೆ ಎಂದು ಹೇಳಿದರು. “ಪ್ರತಿ ಬಾರಿ ಬಜೆಟ್ ಮಂಡಿಸಿದಾಗಲೂ ಬಿಜೆಪಿಗರು ತಮ್ಮ ಬಜೆಟ್ ದೊಡ್ಡ ಬಜೆಟ್ ಎಂದು ಹೇಳಿಕೊಳ್ಳುತ್ತಾರೆ. ಈ ಹೇಳಿಕೆಯನ್ನು ಯಾವುದೇ ಸರ್ಕಾರ ನೀಡಬಹುದು. ಏಕೆಂದರೆ ಪ್ರತಿ ಬಜೆಟ್ ಹಿಂದಿನ ಬಜೆಟ್‌ಗಿಂತ ದೊಡ್ಡದಾಗಿರುತ್ತದೆ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ? ನಾವು ಅಧಿಕಾರಕ್ಕೆ ಬಂದ ತಕ್ಷಣ ಅಗ್ನಿವೀರ ಯೋಜನೆ ರದ್ದು ಮಾಡುತ್ತೇವೆ: ಅಖಿಲೇಶ್ ಯಾದವ್
“ಇದು ಬಜೆಟ್ ಅಲ್ಲ, ಇದು ಬಹಳಷ್ಟು ಶಬ್ದ ಮಾಡುವ, ಆದರೆ ಒಳಗೆ ಏನೂ ಇಲ್ಲದ ಖಾಲಿ ಡ್ರಮ್. ಜನರು ನಿಜವಾದ ಬಜೆಟ್ ಅನ್ನು ಮಂಡಿಸಿಲ್ಲ ಎಂದು ಭಾವಿಸುತ್ತಾರೆ. ಕೇವಲ ಧರ್ಮೋಪದೇಶಗಳನ್ನು ನೀಡಲಾಗಿದೆ. ಆದರೆ ನಿಜವಾದ ಬಜೆಟ್ ಯಾವಾಗ ಮಂಡಿಸಲಾಗುತ್ತದೆ ಎಂದು ಜನರು ಆಶ್ಚರ್ಯದಿಂದ ಕಾಯುತ್ತಿದ್ದರು” ಎಂದು ಯೋಗಿ ಸರ್ಕಾರವನ್ನು ಕುಟುಕಿದರು.
2025-2026ರ ಹಣಕಾಸು ವರ್ಷಕ್ಕೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಇಂದು ಬಜೆಟ್ ಮಂಡಿಸಲಾಗಿದೆ. ಹಣಕಾಸು ಸಚಿವ ಸುರೇಶ್ ಖನ್ನಾ 8.09 ಲಕ್ಷ ಕೋಟಿ (8,08,736 ಕೋಟಿ ರೂ.) ರೂ.ಗಳ ಬಜೆಟ್ ಅನ್ನು ಮಂಡಿಸಿದರು.
