ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಅಗಲಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಗಲಗಂಚಿ ಗ್ರಾಮಸ್ಥರ ಮನವಿ ಕೊನೆಗೂ ಶಾಸಕರ ಕಿವಿಗೆ ಬಿದ್ದಿದೆ.
ಹಾಗಲಗಂಚಿ ಗ್ರಾಮದಲ್ಲಿ ಸುಮಾರು 70ಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿವೆ. ಸುತ್ತಲಿನ ಎಂಟರಿಂದ ಹತ್ತು ಗ್ರಾಮಗಳ ಜನರು ಹಾಗಲಗಂಚಿ ಗ್ರಾಮದ ಮಾರ್ಗವಾಗಿಯೇ ಸಾಗಬೇಕು. ಹಾಗೆಯೇ ಶೃಂಗೇರಿ ಮತ್ತು ಕೊಪ್ಪ ತಾಲೂಕಿಗೆ ಹಾದು ಹೋಗುವ ಸಂಪರ್ಕ ರಸ್ತೆ ಕೂಡ ಇದೇ ಆಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುವ ಈ ರಸ್ತೆ ಡಾಂಬರು ಕಂಡಿರಲಿಲ್ಲ. ಸೂಕ್ತ ರಸ್ತೆ ಇಲ್ಲದೆ ಪಾದಚಾರಿಗಳು, ಅಲ್ಲಿನ ನಿವಾಸಿಗಳು, ವಾಹನ ಸವಾರರು ಪರದಾಡುವಂತಾಗಿತ್ತು.
ಈ ಬಗ್ಗೆ ಜ. 31ರಂದು ಈದಿನ ಡಾಟ್ ಕಾಮ್ ಗ್ರೌಂಡ್ ರಿಪೋರ್ಟ್ ಮಾಡಿ “ಚಿಕ್ಕಮಗಳೂರು l ಶಾಸಕರಿಗೆ ಪದೆ ಪದೇ ಮನವಿ ಮಾಡಿದರೂ, ಡಾಂಬರೀಕರಣ ಆಗದ ರಸ್ತೆ” ಶೀರ್ಷಿಕೆಯಡಿ ವರದಿ ಮಾಡಿತ್ತು. ಈದಿನ ವರದಿಯ ಫಲವಾಗಿ ಇದೀಗ ಹಾಗಲಗಂಚಿ ಗ್ರಾಮದ ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿದೆ.

ಸುದ್ದಿ ಪ್ರಕಟವಾದ ಬಳಿಕ ಗ್ರಾಮಸ್ಥರು ಹಾಗೂ ಮುಖಂಡರ ಜೊತೆ ಶಾಸಕರು ಸಭೆ ನಡೆಸಿ, ರಸ್ತೆ ಮಾಡಿಕೊಡುವ ಭರವಸೆ ಕೊಟ್ಟಿದ್ದಾರೆ. ಹಾಗೂ ಸುದ್ದಿ ಮಾಡಿದ ಎರಡು ದಿನದ ನಂತರ ಜೆಸಿಬಿ ಮೂಲಕ ರಸ್ತೆಯನ್ನು ಅಗಲೀಕರಣ ಮಾಡಿ ಮಣ್ಣು ಹಾಕಿಸುವ ಕೆಲಸ ಆಗುತ್ತಿದೆ. ಈ ಕೆಲಸ ಮುಗಿದ ತಕ್ಷಣ ಡಾಂಬರೀಕರಣ ಮಾಡಲಾಗುತ್ತದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಭರವಸೆ ನೀಡಿದ್ದಾರೆ.
ಸದ್ಯ ಹಾಗಲಗಂಚಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಆದಷ್ಟು ಬೇಗ ಮಣ್ಣಿನ ಕೆಲಸ ಮುಗಿದು, ರಸ್ತೆಗೆ ಡಾಂಬರೀಕರಣ ಆಗಲಿ ಎಂದು ಎದುರು ನೋಡುತ್ತಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.