- ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬರುವ ಪ್ರಶ್ನೆಯೇ ಇಲ್ಲ
- ವಿದ್ಯುತ್ ದರ ಏರಿಕೆಗೆ ನಾವು ಒಪ್ಪಿಗೆ ಸೂಚಿಸಿರಲಿಲ್ಲ
ಉಚಿತ ಗ್ಯಾರಂಟಿಗಳಿಗೆ ಯಾವ ರೀತಿ ಹಣ ಹೊಂದಿಸುತ್ತಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಇದನ್ನು ತಿಳಿದುಕೊಳ್ಳುವುದು ಎಲ್ಲರ ಹಕ್ಕು. ಆದರೆ, ಯಾರಾದರು ಈ ಬಗ್ಗೆ ಕೇಳಿದರೆ ಸಿಎಂ ಉಡಾಫೆ ಉತ್ತರ ಕೊಡುತ್ತಾರೆ. ಈ ರೀತಿಯ ಧೋರಣೆ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿಗಳ ಹೆಸರಲ್ಲಿ ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಿತ್ತುಕೊಳ್ಳುವುದು ನಡೆಯುತ್ತಿದೆ. ಗ್ಯಾರಂಟಿಗಳ ಬಗ್ಗೆ ನಾವು ಕಾದು ನೋಡುತ್ತೇವೆ. ಫ್ರೀ ಬಸ್ ಮೂಲಕ ಆರಂಭದ ಶೂರತ್ವ ತೋರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಸರಿಪಡಿಸಬೇಕು. ಶಾಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಬೇಕು. ಉಚಿತ ಅನ್ನೋ ಕಾರಣಕ್ಕೆ ಬಸ್ಗಳು ತುಂಬಿ ತುಳುಕುತ್ತಿವೆ. ಈ ನಿಟ್ಟಿನಲ್ಲಿ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಹಣಕಾಸಿನ ನಿರ್ವಹಣೆಯಲ್ಲಿ ಯಾವ ರೀತಿ ಮುಂದುವರೆಯುತ್ತೇವೆ ಎಂದು ಹೇಳಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳಾಗುತ್ತಾ ಬಂದಿದೆ. ಉಚಿತ ಗ್ಯಾರಂಟಿಗಳಿಗೆ ಯಾವ ರೀತಿ ಹಣ ಹೊಂದಿಸುತ್ತಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಇದನ್ನು ತಿಳಿದುಕೊಳ್ಳುವುದು ಎಲ್ಲರ ಹಕ್ಕು. ಆದರೆ, ಯಾರಾದರು ಈ ಬಗ್ಗೆ ಕೇಳಿದರೆ ಸಿಎಂ ಉಡಾಫೆ ಉತ್ತರ ಕೊಡುತ್ತಾರೆ. ಈ ರೀತಿಯ ಧೋರಣೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಣಕಾಸಿನ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಡಲಾಗುತ್ತಿದೆ. ನಾವು ವಿದ್ಯುತ್ ದರ ಏರಿಕೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಒಮ್ಮೆಗೆ ವಿದ್ಯುತ್ ದರ ಏರಿಸುವುದರಿಂದ ಜನ ಶಾಕ್ನಲ್ಲಿದ್ದಾರೆ. ಜೊತೆಗೆ 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆಯೂ ಸ್ಪಷ್ಟತೆಯಿಲ್ಲ. ಎಲ್ಲ ಹೆಸ್ಕಾಂಗಳು ಸಾಲದಲ್ಲಿ ಮುಳುಗಿವೆ. ಪ್ರಸ್ತುತ ಸರ್ಕಾರ ಗ್ಯಾರಂಟಿ ಕೊಡುವುದರಲ್ಲಿಯೇ ಸಮಯ ಕಳೆಯಬಾರದು. ಸಂಸ್ಥೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಸರ್ಕಾರ ಸಬ್ಸಿಡಿ ಕೊಡುವಾಗ ಮುಂಚಿತವಾಗಿಯೇ ಹಣ ಕೊಡಬೇಕು. ಹೀಗಾದರೆ ಮಾತ್ರ ಸಂಸ್ಥೆಗಳು ಉಳಿಯುತ್ತವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿಗೆ ಟಿಕೆಟ್ ನೀಡಬಾರದು ಎಂದು ಅಭಿಯಾನ ಕುರಿತು ಮಾತನಾಡಿದ ಬೊಮ್ಮಾಯಿ, ಪ್ರತಿಬಾರಿ ಚುನಾವಣಾ ಪೂರ್ವದಲ್ಲಿ ಇಂತಹ ಅಭಿಯಾನಗಳು ನಡೆಯುತ್ತವೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ. ಪರಿಷತ್ ಚುನಾವಣೆಯ ಮೂರೂ ಸ್ಥಾನಕ್ಕೆ ನಾವು ಸ್ಪರ್ಧಿಸುತ್ತೇವೆ. ನಮ್ಮಲ್ಲಿಂದ ಪ್ರತಿಪಕ್ಷವಾಗಿ ಸ್ಪರ್ಧೆ ಖಚಿತ ಎಂದು ಸ್ಪಷ್ಟಪಡಿಸಿದರು.
ಲೋಕಸಭೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಕುರಿತು ಚರ್ಚೆಗಳು ನಡೆದಿಲ್ಲ. ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಹೋಗಿದ್ದರಿಂದ ಸಂತೃಪ್ತಿ ಇದೆ ಎಂದು ಅವರೆ ಹೇಳಿಕೊಂಡಿದ್ದಾರೆ. ಹಾಗಿದ್ದಾಗ ಮತ್ತೆ ಬಿಜೆಪಿಗೆ ಬರುವ ಪ್ರಶ್ನೆ ಬರಲ್ಲ ಎಂದು ಹೇಳಿದರು.
ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಲ್ಲ, ಆ ಪ್ರಶ್ನೆಯೇ ಇಲ್ಲ. ಈ ಸ್ಥಿತಿಯಲ್ಲಿ ನಾನು ಅದನ್ನು ಬಯಸಲು ಹೋಗುತ್ತಿಲ್ಲ. ವಿಪಕ್ಷ ನಾಯಕ ಸ್ಥಾನದ ಆಯ್ಕೆ ವಿಳಂಬವಾಗುತ್ತಿಲ್ಲ, ಅಧಿವೇಶನ ಕರೆದ ಕೂಡಲೇ ಆಯ್ಕೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಧಾನಪರಿಷತ್ ಉಪ ಚುನಾವಣೆ | ಇಂದಿನಿಂದ ನಾಮಪತ್ರ ಸಲ್ಲಿಕೆ
ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮುಂಗಾರು ಮಳೆ ತಡವಾಗಿರುವುದರಿಂದ, ಬಿತ್ತನೆ ಕೂಡ ತಡವಾಗಿ ಆಗುತ್ತಿದೆ. ಮಾನ್ಸೂನ್ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. ಹೀಗಿದ್ದರೂ ಸಿಎಂ ಇವುಗಳನ್ನು ನಿಭಾಯಿಸಲು ಯಾವುದೇ ರೀತಿ ಸನ್ನದ್ಧವಾಗಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿರುವ ಡ್ಯಾಂಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ. ಇಷ್ಟು ಬೇಗ ಬರಗಾಲ ಅಂತಾ ಶಬ್ದ ಬಳಸಲ್ಲ. ಆದರೆ ರಾಜ್ಯ ಸರ್ಕಾರ ಸಮರ್ಪಕವಾಗಿ ಪ್ಲಾನ್ ಮಾಡಬೇಕು. ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಮುಖ್ಯಮಂತ್ರಿಗಳು, ಸ್ಥಳೀಯ ಜನಪ್ರತಿನಿಧಿಗಳು ಆ ಟಾಸ್ಕ್ ಫೋರ್ಸ್ನಲ್ಲಿರಬೇಕು, ಅವರಿಂದ ಸಹಕಾರ ಪಡೆಯಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದರು.
ಮುನ್ನೆಚ್ಚರಿಕೆಯಾಗಿ ಕೂಡಲೇ ನೂರು ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು. ಎನ್‌ಡಿಆರ್‌ಎಫ್ ತಂಡಗಳನ್ನು ಚುರುಕುಗೊಳಸಬೇಕು. ಸ್ಥಳೀಯ ಮಟ್ಟದಲ್ಲಿ ಬಿಗಿ ಮಾಡಬೇಕು ಎಂದು ಒತ್ತಾಯಿಸಿದರು.
ತುಂಬಾ ಸುಲಭ ಸರ್, ಭ್ರಷ್ಟರ ಪಾಕೆಟ್ ನಿಂದ ತೆಗೆದು ಜನರ ಪಾಕೆಟ್ ಗೆ ಹಾಕುದು ಅಷ್ಟೇ.