“ಸ್ಲಂ ಜನರ ಸಾಮಾಜಿಕ ಮತ್ತು ಅಭಿವೃದ್ಧಿ ತಾರತಮ್ಯ ವಿರೋಧಿಸಿ ಫೆಬ್ರವರಿ 24ರಂದು ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ರಾಜ್ಯ ಮುಖಂಡ, ಗೌರವಾಧ್ಯಕ್ಷ ಎಸ್ ಎಲ್ ಆನಂದಪ್ಪ ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಖಾಸಗೀ ಮಾಲೀಕತ್ವದ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ಸಂವಿಧಾನ ವಿರೋಧಿ ವಸತಿ ಇಲಾಖೆ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕು. 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ನೀಡಿರುವ ಪ್ರಣಾಳಿಕೆ ಭರವಸೆಗಳನ್ನು ಹಾಗೂ ಸ್ಲಂ ಜನರಿಗೆ ಪ್ರತ್ಯೇಕ ಸಚಿವಾಲಯ ಮತ್ತು ನಗರ ಉದ್ಯೋಗ ಖಾತ್ರಿ ಯೋಜನೆ ಘೋಷಣೆ ಮಾಡಬೇಕು. ನಿವೇಶನ ರಹಿತರಿಗೆ ವಸತಿ ಕಲ್ಪಿಸುವ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಹಕ್ಕೋತ್ತಾಯಗಳ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನೆಡೆಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ| ಯುವಜನತೆ ದೇಶದ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ನೆಡೆದುಕೊಳ್ಳುವುದೇ ದೇಶಪ್ರೇಮ: ವಿಧಾನಸಭಾಧ್ಯಕ್ಷ ಯು ಟಿ ಖಾದರ್
“ನಗರ ಸ್ಲಂ ನಿವಾಸಿಗಳಾದ ಪರಿಶಿಷ್ಟ ಜಾತಿ/ಪಂಗಡ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಅಲೆಮಾರಿ ಸಮುದಾಯಗಳಿಗೆ ಭೂಮಿ ವಸತಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು.ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯ, ಜೀವನೋಪಾಯದಂತಹ ಕನಿಷ್ಠ ಸೌಲಭ್ಯಗಳನ್ನು ನೀಡದೆ ಅಭಿವೃದ್ಧಿಯಿಂದ ನಮ್ಮನ್ನು ದೂರ ಇಡುವ ಮೂಲಕ ಸಂವಿಧಾನದ ಖಾತ್ರಿಗಳನ್ನು ದೊರಕದಂತೆ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
“ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ಹಣ ಮೀಸಲಿಡಬೇಕು. ಸ್ಲಂ ಸಂಭಂದಿಸಿದ ವಸತಿ ಇಲಾಖೆ ಸುತ್ತೋಲೆ ಹಿಂಪಡೆಯಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆಯನ್ನು ತಿದ್ದುಪಡಿ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು. ಸ್ಲಂ ಜನರ ಜೀವನೋಪಾಯಕ್ಕಾಗಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ, ನಿವೇಶನ ರಹಿತರಿಗೆ ನಗರ ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿ, ಬೆಂಗಳೂರು ಸ್ಲಂ ನಿವಾಸಿಗಳ ಪುರ್ನವಸತಿಗಾಗಿ ಭೂ ಮಂಜೂರಾತಿ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕು. ಸ್ಲಂ ಜನರ ಪರವಾಗಿ ನಿಲುವಿಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದು” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯು ಮುಖಂಡರಾದ ರೇಣುಕಾ ಎಲ್ಲಮ್ಮ, ಶಬ್ಬೀರ್ ಸಾಬ್, ಶಂಶೀದಾಬಾನು, ಗೀತಮ್ಮ, ಬೀಬೀಜಾನ್, ಮಂಜುಳಾ ಹಾಜರಿದ್ದರು.