2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು.
ಮಹತ್ವದ ಈ ಗೆಲುವಿನಲ್ಲಿ ಶುಭ್ಮನ್ ಗಿಲ್ ಅವರ ಪಾತ್ರ ಅಪಾರವಾಗಿದೆ. ತಮ್ಮ ಚೊಚ್ಚಲ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಸಾಧನೆ ಮಾಡಿದ್ದಲ್ಲದೆ, ಐಸಿಸಿ ಟೂರ್ನಿಯಲ್ಲಿ ಮೊದಲ ಶತಕ ಬಾರಿಸಿದ ದಾಖಲೆಗೂ ಪಾತ್ರರಾಗಿದ್ದಾರೆ.
ರನ್‌ರೇಟ್ ದಿಢೀರ್ ಕುಸಿತದ ನಡುವೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಗಿಲ್ ಅಜೇಯ 101 ರನ್‌ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಶತಕದೊಂದಿಗೆ ಗಿಲ್ ಅವರು ಐಸಿಸಿ ಈವೆಂಟ್‌ನಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದ ಸಾಧನೆಯೂ ಮಾಡಿದ್ದಾರೆ. ಇದು ಅವರ ಏಕದಿನ ವೃತ್ತಿಜೀವನದ 8ನೇ ಶತಕವಾಗಿದ್ದು, ಇದಕ್ಕೂ ಮುನ್ನ ಅವರು ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿಯೂ ಇಂಗ್ಲೆಂಡ್ ವಿರುದ್ಧವೂ ಶತಕ ಬಾರಿಸಿದ್ದರು.
ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 125 ಎಸೆತಗಳನ್ನು ಎದುರಿಸಿದ ಗಿಲ್ 100 ರನ್ ಪೂರ್ಣಗೊಳಿಸಿದರು. ಇದರಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿವೆ. ಇಷ್ಟೇ ಅಲ್ಲ, ಗಿಲ್ ಕಳೆದ 4 ಏಕದಿನ ಇನ್ನಿಂಗ್ಸ್‌ಗಳಲ್ಲಿ 50+ ರನ್‌ಗಳ ಗಡಿಯನ್ನು ದಾಟಿದ್ದು, ಇದು ಅವರ ಉತ್ತಮ ಫಾರ್ಮ್ ಅನ್ನು ತೋರಿಸುತ್ತದೆ.
57 ಏಕದಿನ ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಬಾರಿಸಿದ್ದ ದಾಖಲೆ ಶಿಖರ್ ಧವನ್ ಅವರ ಹೆಸರಿನಲ್ಲಿತ್ತು. ಧವನ್ ದಾಖಲೆ ಮುರಿಯುವ ಮೂಲಕ ಭಾರತ ಪರ ಏಕದಿನ ಪಂದ್ಯಗಳಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಗಿಲ್ 51 ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಹಾಗೆಯೇ ಈ ಶತಕದೊಂದಿಗೆ ಶುಭ್ಮನ್ ಗಿಲ್ ಕೂಡ ಸಚಿನ್ ತೆಂಡೂಲ್ಕರ್ ಅವರ ವಿಶೇಷ ಪಟ್ಟಿಗೆ ಸೇರಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ನಾಲ್ಕನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಕೈಫ್ ಹಾಗೂ ಶಿಖರ್ ಧವನ್ ಈ ಸಾಧನೆ ಮಾಡಿದ್ದರು.