ಬೇಸಿಗೆಯಲ್ಲಿ ಜಿಲ್ಲೆಯ 46 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ʼಮುಂದಿನ ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜಿಲ್ಲೆಯ ಎಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂಬ ಕುರಿತು ಸಮಗ್ರ ಮಾಹಿತಿ ನೀಡುವಂತೆ ಎಲ್ಲ ಗ್ರಾಮ ಪಂಚಾಯತ್ ಪಿಡಿಒ ಹಾಗೂ ತಾಲ್ಲೂಕ ಪಂಚಾಯತ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಸಮಸ್ಯೆ ಆಗದಂತೆ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಲಾಗಿದೆʼ ಎಂದರು.
ʼಕಳೆದ ವರ್ಷ ಜಿಲ್ಲೆಯ 90 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. 18 ಗ್ರಾಮಗಳಿಗೆ ಟ್ಯಾಂಕರ್ ಹಾಗೂ 72 ಬೋರವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಈ ವರ್ಷ ಕೂಡ ಬಹುತೇಕ ಔರಾದ್, ಕಮಲನಗರ, ಭಾಲ್ಕಿ, ಹುಲಸೂರ ಹಾಗೂ ಬಸವಕಲ್ಯಾಣ ತಾಲ್ಲೂಕಿನ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಸದ್ಯ ಔರಾದ್ ತಾಲ್ಲೂಕಿನ ಮುರ್ಕಿ ಗ್ರಾ.ಪಂ. ವ್ಯಾಪ್ತಿಯ ಶಿವಂಪುರ ತಾಂಡಾದಲ್ಲಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆʼ ಎಂದರು.
ʼಕೆಟ್ಟು ಹೋಗಿರುವ ಮೋಟಾರ್ ರಿಪೇರಿ, ಪೈಪ್‌ಲೈನ್ ದುರಸ್ತಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹಳೆಯ ಬೋರ್‌ವೆಲ್‌ಗಳನ್ನು ಪ್ಲಶಿಂಗ್ ಮಾಡಲು ತಿಳಿಸಲಾಗಿದೆ. ನೀರು ಪೋಲಾಗದಂತೆ ನೀರಿನ ಬಳಕೆ ಕುರಿತು ಜನರಿಗೆ ತಿಳಿಸಲು ವಾಟರ್ ಮ್ಯಾನ್‌ಗಳಿಗೆ ತಿಳಿಸಲಾಗಿದೆʼ ಎಂದರು.
234 ಕಡೆ ಜಲ ಜೀವನ್ ಮಿಷನ್ ಕೆಲಸ ಪೂರ್ಣ :
ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ನಡೆದರೂ ನೀರಿನ ಸಮಸ್ಯೆ ಯಾಕೆ ಉಲ್ಬಣಗೊಳ್ಳುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ʼಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಅಡಿ ಜಿಲ್ಲೆಯಲ್ಲಿ ಒಟ್ಟು 867 ಕಾಮಗಾರಿಗಳಲ್ಲಿ 234 ಕಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಕಡೆ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಎಲ್ಲ ಕಡೆ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳುತ್ತದೆʼ ಎಂದು ಜಿ.ಪಂ. ಸಿಇಒ ಡಾ.ಗಿರೀಶ ಬದೋಲೆ ಉತ್ತರಿಸಿದರು.
ʼಜಿಲ್ಲೆಯಲ್ಲಿ ಒಟ್ಟು 234 ಜೆಜೆಎಂ ಕಾಮಗಾರಿಗಳಲ್ಲಿ ಬಸವಕಲ್ಯಾಣ 25, ಭಾಲ್ಕಿ 38, ಬೀದರ್ 54, ಹುಮನಾಬಾದ್24 ಹಾಗೂ ಅತೀ ಹೆಚ್ಚು ಔರಾದ್ ತಾಲ್ಲೂಕಿನಲ್ಲಿ 93 ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಕೆಲ ತಾಲ್ಲೂಕಿನಲ್ಲಿ ಕಾಮಗಾರಿ ತಡವಾಗಿ ಆರಂಭವಾದ ಕಾರಣ ಪೂರ್ಣಗೊಂಡಿಲ್ಲ. ಈಗಾಗಲೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡುವ ಮೂಲಕ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಜೂನ್‌ವರೆಗೆ ಎಲ್ಲ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲಾಗುವುದುʼ ಎಂದು ತಿಳಿಸಿದರು.
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲವೇ?
ಜಿಲ್ಲೆಯಲ್ಲಿ ಪ್ರತಿವರ್ಷ ಕನಿಷ್ಠ 100ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಜೆಜೆಎಂ ಕಾಮಗಾರಿ ನಡೆದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆ ಟ್ಯಾಂಕರ್ ನೀರು ಸರಬರಾಜು ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ? ಪುರಾತನ ಬಾವಿ, ಕೆರೆ ನೀರು ಸದ್ಬಳಕೆ ಬಗ್ಗೆ ಯಾಕೆ ಯೋಚಿಸುತ್ತಿಲ್ಲ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಇಒ ಅವರು, ʼಜಲ ಜೀವನ್ ಮೀಷನ್ ಕಾಮಗಾರಿ ಪೂರ್ಣಗೊಂಡ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಿಲ್ಲʼ ಎಂದು ತಿಳಿಸಿದರು.
ಸಿಸಿಟಿವಿ ಕಣ್ಗಾವಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ :
ʼಬರುವ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗಲಿವೆ. ಜಿಲ್ಲೆಯ 91 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಇದರಲ್ಲಿ 10 ಕಡೆ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪಾರದರ್ಶಕ ಪರೀಕ್ಷೆ ನಡೆಸಲು ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಅಳವಡಿಸಲಾಗಿದ್ದು, ವೆಬ್‌ಕಾಸ್ಟಿಂಗ್ ಸಹ ನಡೆಯಲಿದೆʼ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ ತಿಳಿಸಿದರು.
ʼಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ62 ರಷ್ಟು ಫಲಿತಾಂಶ ಬರುವ ಮೂಲಕ ರಾಜ್ಯದಲ್ಲಿ 33ನೇ ರ‍್ಯಾಂಕ್ ಬಂದಿತ್ತು. ಈ ಬಾರಿ ಫಲಿತಾಂಶ ಹಾಗೂ ರ‍್ಯಾಂಕ್ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 20 ಅಂಶಗಳ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆʼ ಎಂದರು.
ʼಪ್ರಸಕ್ತ ವರ್ಷ ಜಿಲ್ಲೆಯಲ್ಲಿ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿ, ಘಟಕ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಪಠ್ಯಕ್ರಮವು ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗಿದ್ದು, 2 ಬಾರಿ ಪುನರಾವಲೋಕನ ನಡೆಸಲಾಗಿದೆ. ಇತರೆ ಕಲಿಕಾಶ್ರಯ ಪುಸ್ತಕ ನೀಡಲಾಗಿದೆ. ಡಯಟ್‌ನಿಂದ ಫೋನ್ ಮೂಲಕ ಮಾರ್ಗದರ್ಶನ ಮಾಡಲಾಗುತ್ತಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ : ಡಿಸಿ ಶಿಲ್ಪಾ ಶರ್ಮಾ
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಬೀದರ ನಗರಾಭಿವೃದ್ಧಿ ಕೋಶದ ಮೋತಿಲಾಲ್ ಲಮಾಣಿ, ಸಹಕಾರ ಸಂಘಗಳ ಉಪನಿಬಂಧಕಿ ಮಂಜುಳಾ ಹಾಜರಿದ್ದರು.