ಹಸಿವು ಮುಕ್ತ ಕರ್ನಾಟಕ ಆಶಯದೊಂದಿಗೆ ರಾಜ್ಯ ಸರ್ಕಾರ ಆರಂಭಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯು ರಾಜ್ಯದ ಸುಮಾರು 4.50 ಕೋಟಿಗೂ ಹೆಚ್ಚು ಬಡವರ ಹಸಿವನ್ನು ನೀಗಿಸುತ್ತಿದೆ. ಪ್ರಸ್ತುತ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿ ಜತೆಗೆ ಬೇಳೆಕಾಳು ಹಾಗೂ ಅಡುಗೆ ಎಣ್ಣೆಯನ್ನು ಉಚಿತವಾಗಿ ನೀಡಿ ಬಡವರ ಜೀವನಕ್ಕೆ ನೆರವಾಗುವಂತೆ ಫಲಾನುಭವಿಗಳು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಈ ಯೋಜನೆಯನ್ನು ಆರಂಭಿಸಿದಾಗ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ಕೊಡಲು ಒಪ್ಪಿರಲಿಲ್ಲ. ಇಬ್ಬಂದಿಗೆ ಸಿಲುಕಿದ ರಾಜ್ಯ ಕಾಂಗ್ರೆಸ್ ಸರ್ಕಾರ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ಫಲಾನುಭವಿಗೆ 170 ರೂಗಳನ್ನು ಅವರ ಖಾತೆಗೆ ಜಮೆ ಮಾಡುತ್ತಿತ್ತು. ಈ ತಿಂಗಳಿನಿಂದ ಹಣಕ್ಕೆ ಬದಲಾಗಿ ಮತ್ತೆ 10ಕೆಜಿ ಅಕ್ಕಿ ವಿತರಿಸುವುದಾಗಿ ಹೇಳಿದೆ. ಆದರೆ, ಈ ಕುರಿತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು 5 ಕೆಜಿ ಅನ್ನಭಾಗ್ಯ ಅಕ್ಕಿ ಜತೆಗೆ ಬೇಳೆ, ಸಕ್ಕರೆ, ಅಡುಗೆ ಎಣ್ಣೆಯನ್ನ ವಿತರಿಸುವಂತೆ ಮನವಿ ಮಾಡುತ್ತಿದ್ದಾರೆ.
ಅಡುಗೆ ಎಣ್ಣೆ, ಸಕ್ಕರೆ, ಬೇಳೆ ಕಾಳು ಸೇರಿದಂತೆ ಅನೇಕ ಅಡುಗೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಕೂಲಿ ಕೆಲಸ ಮಾಡಿ ಜೀವನ ನಡೆಸುವ ಬಡ ವರ್ಗ ದುಡಿದ ದುಡ್ಡನ್ನು ಅಡುಗೆ ದಿನಸಿ ವಸ್ತುಗಳ ಖರೀದಿ ಮಾಡುವುದಕ್ಕಾಗಿಯೇ ಖರ್ಚು ಮಾಡುವ ಪರಿಸ್ಥಿತಿ ಇದೆ. ಮಕ್ಕಳ ಶಿಕ್ಷಣದ ಖರ್ಚು, ಆಸ್ಪತ್ರೆಯ ಖರ್ಚು, ಮನೆ ಬಾಡಿಗೆ ಎಂದೆಲ್ಲಾ ಮತ್ತೂ ಖರ್ಚುಗಳು ಒಟ್ಟುಗೂಡಿ ಇಂದಿನ ದಿನಗಳಲ್ಲಿ ಜೀವನ ನಡೆಸಲು ಪರದಾಡುವಂತಾಗಿದೆ. ಈ ಕಾರಣಕ್ಕಾಗಿಯೇ ಬಡ ಜನತೆ ಅನ್ನಭಾಗ್ಯ ಅಕ್ಕಿ ಜತೆಗೆ ಕೆಲ ಅಗತ್ಯ ದಿನಸಿ ಸಾಮಗ್ರಿ ನೀಡುವಂತೆ ಈ ದಿನ ಡಾಟ್ ಕಾಮ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಅನ್ನಭಾಗ್ಯ ಫಲಾನುಭವಿ ರತ್ನಾ ಪೂಜೇರ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ಮನೆಯಲ್ಲಿ ನಾಲ್ಕು ಜನರಿದ್ದೇವೆ. ಈಗ ತಿಂಗಳಿಗೆ ಕೊಡುತ್ತಿರುವ 20 ಕೆಜಿ ಅಕ್ಕಿ ಕುಟುಂಬ ನಿರ್ವಹಣೆಗೆ ಸಾಕಾಗುತ್ತದೆ. ಅಲ್ಲದೆ ಈ ಭಾಗದ ಜನ ಅಕ್ಕಿ ಬಳಸುವುದು ಕಡಿಮೆ. ಸರ್ಕಾರವು ಅಕ್ಕಿ ಜೊತೆಗೆ ನೀಡುತ್ತಿದ್ದ ಒಟ್ಟು 680 ರೂಪಾಯಿಗಳು ಕುಟುಂಬಕ್ಕೆ ಬೇಕಾದ ದಿನಸಿ ವಸ್ತುಗಳನ್ನು ಕೊಂಡುಕೊಳ್ಳಲು ಅನುಕೂಲವಾಗುತ್ತಿತ್ತು. ಇದೀಗ ಸರ್ಕಾರ ಪ್ರತಿಯೊಬ್ಬರಿಗೆ 10 ಕೆಜಿ ಕೊಡುವುದಾಗಿ ತಿಳಿಸಿದೆ. ಇದರ ಬದಲಿಗೆ 5 ಕೆಜಿ ಅಕ್ಕಿಯ ಜೊತೆಗೆ ದಿನಸಿ ನೀಡಿದರೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ನಮ್ಮಂತಹ ಕುಟುಂಬಗಳಿಗೆ ಆಸರೆಯಾಗುತ್ತದೆ” ಎಂದು ಮನವಿ ಮಾಡಿದರು.
ಅನ್ನಭಾಗ್ಯ ಯೋಜನೆಯ ಮತ್ತೋರ್ವ ಫಲಾನುಭವಿ ಮದೀನಾ ಭಾಗವಾನ ಮಾತನಾಡಿ, “ದಿನಸಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಬಡವರು ಜೀವನ ಸಾಗಿಸುವುದೆ ಕಷ್ಟವಾಗಿದೆ. ಕೂಲಿ ಕೆಲಸಕ್ಕೆ ಹೋಗಿ ಬದುಕು ಸಾಗಿಸುತ್ತಿರುವ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಆಸರೆಯಾಗಿದೆ. ಸರ್ಕಾರ ದೊಡ್ಡ ಮನಸ್ಸು ಮಾಡಿ ಅನ್ನಭಾಗ್ಯ ಅಕ್ಕಿಯೊಂದಿಗೆ ದಿನಸಿ ಸಾಮಗ್ರಿ ಕೊಡಬೇಕು. ರಾಜ್ಯದಲ್ಲಿ ಕೋಟ್ಯಂತರ ಜನರಿಗೆ ಅನ್ನಭಾಗ್ಯ ವರದಾನವಾಗಿ ಪರಿಣಮಿಸಿದೆ. ಇದೇ ರೀತಿ ಬಡವರ ಪಾಲಿಗೆ ವರದಾನವಾಗಿಯೇ ಉಳಿಯಬೇಕು” ಎಂದರು.
ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆಯ ಸಿದ್ದನಗೌಡ ಮೋದಗಿ ಈ ಕುರಿತು ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “ರಾಜ್ಯ ಸರ್ಕಾರವು 5 ಕೆಜಿ ಜೊತೆಗೆ ರೈತರ ಮೂಲಕ ಖರೀದಿ ಕೇಂದ್ರಗಳಿಂದ ದವಸ ಧಾನ್ಯಗಳನ್ನು ಖರೀದಿ ಮಾಡಿ ತೊಗರಿ ಬೇಳೆ, ಕಡಲೆ, ಸಕ್ಕರೆ ಮತ್ತು ಸಿರಿ ಧಾನ್ಯಗಳನ್ನು ನೀಡಬೇಕು. ಇದರಿಂದ ದುಡಿಯುವ ವರ್ಗದ ಅಪೌಷ್ಟಿಕತೆಯ ಕೊರತೆ ನಿವಾರಣೆಯಾಗುವುದರ ಜೊತೆಗೆ ರೈತರಿಗೂ ಹೆಚ್ಚು ಅನುಕೂಲವಾಗುತ್ತದೆ ಹಾಗೂ ಹಸಿವು ಮುಕ್ತ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಪಾತ್ರವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ರೌಡಿ ಶೀಟರ್‌ಗಳು ಸಮಾಜ ಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು ತಪ್ಪು ಮಾಡಿದರೆ ತಕ್ಕ ಶಾಸ್ತಿ
ರಾಜ್ಯದಲ್ಲಿ ಒಟ್ಟು 1,16,39,179 ಪಡಿತರ ಕಾರ್ಡ್‌ಗಳಿದ್ದು, 4,12,16,838 ಮಂದಿ ಫಲಾನುಭವಿಗಳಿದ್ದಾರೆ. ಪ್ರತಿ ಕೆಜಿ ಅಕ್ಕಿಗೆ ಸರ್ಕಾರ ಅಂದಾಜು 25 ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಒಂದು ತಿಂಗಳಿಗೆ ಅನ್ನಭಾಗ್ಯ ಯೋಜನೆಗೆ ಸುಮಾರು 890 ಕೋಟಿ ರೂಪಾಯಿ ಹಾಗೂ ವರ್ಷಕ್ಕೆ10,092 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಸದ್ಯ ಸರ್ಕಾರವು 10 ಕೆಜಿ ಅಕ್ಕಿಯನ್ನು ಕೊಡುವುದಾಗಿ ತಿಳಿಸಿದೆ. 5 ಕೆಜಿ ಅಕ್ಕಿಗೆ ತಗಲುವ ವೆಚ್ಚದ ಹಣದಲ್ಲಿಯೆ ಅಡುಗೆ ಎಣ್ಣೆ, ಬೆಳೆಕಾಳುಗಳನ್ನು ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವದು ಫಲಾನುಭಾವಿಗಳ ಒತ್ತಾಸೆಯಾಗಿದೆ. ಸರ್ಕಾರವು ಈ ಕುರಿತು ಗಮನ ಹರಿಸಿ ಹಸಿವು ಮುಕ್ತ ರಾಜ್ಯವನ್ನಾಗಿಸಲು ಮತ್ತೊಂದು ಹೆಜ್ಜೆ ಇಡುವುದು ಅವಶ್ಯವಾಗಿದೆ.