ಜನನಿಬಿಡ ಸ್ಥಳದಲ್ಲಿರುವ ಸಿಂಧನೂರು ಘನತ್ಯಾಜ್ಯ ಸಂಗ್ರಹ ಘಟಕವನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ಜನರ ಜೀವ, ಬೆಳೆ ಮತ್ತು ಪರಿಸರ ಕಾಪಾಡಬೇಕೆಂದು ಒತ್ತಾಯಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ತಾಲೂಕು ಘಟಕವು ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಸಲ್ಲಿಸಿತು.
“ಸಿಂಧನೂರು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಘನತ್ಯಾಜ್ಯ ಕೂಡಾ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಮಲ್ಲಾಪುರ-ದೇವರಗುಡಿ ರಸ್ತೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಸ್ಟೋರೇಜ್ ಶೆಡ್ ಗೆ ಅವೈಜ್ಞಾನಿಕವಾಗಿ ಕಸ ಎಸೆಯಲಾಗುತ್ತಿದೆ. ನಗರದಿಂದ 15 ಕೀಮಿ ದೂರದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕೆಂಬ ನಿಯಮವಿದ್ದರೂ ಉಲ್ಲಂಘನೆ ಮಾಡಲಾಗಿದೆ. ಕೂಡಲೇ ಕಸ ವಿಲೇವಾರಿ ಘಟಕದ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಸಿಪಿಐಎಂಎಲ್ ಮುಖಂಡರು ಆಗ್ರಹಿಸಿದರು.
“ದಟ್ಟವಾದ ಕಲುಷಿತ ಗಾಳಿಯು ಜನರ ಆರೋಗ್ಯದ ಮೇಲೆ ಪರಿಸರದ ಜೀವ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದಕ್ಕೆಲ್ಲಾ ನಗರಸಭೆಯೇ ನೇರವಾಗಿ ಹೊಣೆಯಾಗಲಿದೆ. ವಿಷದ ಗಾಳಿಯಿಂದ ಬಾಧಿತರಾದ ಜನರ ಆರೋಗ್ಯದ ವೆಚ್ಚವನ್ನು ಹಾಗೂ ಬೆಳೆ ನಷ್ಟವನ್ನು ನಗರಸಭೆಯವರೇ ಭರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಮಾಜಿ ಶಾಸಕನ ಬೆಂಬಲಿಗರಿಂದ ದೌರ್ಜನ್ಯ; ದಯಾಮರಣ ಕೋರಿ ಧರಣಿ ಕುಳಿತ ಕುಟುಂಬ
ಈ ವೇಳೆ ಎಂ.ಗಂಗಾಧರ, ವೆಂಕನಗೌಡ ಮಲ್ಲಾಪುರ, ಅಮರೇಗೌಡ ವನಸಿರಿ ಮಲ್ಲಾಪುರ, ಪರಶುರಾಮ ಮಲ್ಲಾಪುರ ಇನ್ನಿತರರು ಹಾಜರಿದ್ದರು.
