ಭೀಕರ ಅಪಘಾತ ಸಂಭವಿಸಿದ್ದು, ಕರ್ನಾಟಕದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ ಬಳಿ ನಡೆದಿದೆ. ಮೃತರು ಬೀದರ್ ಜಿಲ್ಲೆಯವರು ಎಂದು ತಿಳಿದುಬಂದಿದೆ. ಕುಂಭಮೇಳದಲ್ಲಿ ಭಾಗಿಯಾಗಲು ಕರ್ನಾಟಕದಿಂದ ತೆರಳಿದ್ದವರಲ್ಲಿ ಕನಿಷ್ಠ 20 ಮಂದಿ ವಿವಿಧ ಅವಘಡಗಳಲ್ಲಿ ಸಾವನ್ನಪ್ಪಿದ್ದಾರೆ.
ಬೀದರ್‌ನ ಲಾಡಗೇರಿ ಬಡಾವಣೆಯ 14 ಮಂದಿ ಕ್ರೂಸರ್ ವಾಹನದಲ್ಲಿ ಕುಂಭಮೇಳಕ್ಕೆ ತೆರಳಿದ್ದರು. ಈ ವೇಳೆ, ವಾರಣಾಸಿಯ ಮೀರ್ಜಾಮುರತ್ ನಗರದ ಬಳಿ ತೆರಳುತ್ತಿದ್ದಾಗ, ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತ ಸಂಭವಿಸಿದೆ. ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 9 ಮಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮೃತರನ್ನು ಬೀದರ್‌ನ ಲಕ್ಷ್ಮೀ (56), ನೀಲಮ್ಮ (55), ಸಂತೋಷ್‌ಕುಮಾರ್ (42), ಸುನೀತಾ (42) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತರ ಹೆಸರು ಗೊತ್ತಾಗಿಲ್ಲ.
ಕುಂಭಮೇಳಕ್ಕೆ ತೆರಳಿದ್ದ ಲಾಡಗೇರಿ ಬಡಾವಣೆಯ ನಿವಾಸಿಗಳು ಪ್ರಯಾಗ್‌ರಾಜ್ ಮತ್ತು ಕಾಶಿಗೆ ಭೇಟಿ ನೀಡಿದ್ದರು. ಬಳಿಕ, ಅಯೋಧ್ಯೆಗೆ ತೆರಳುತ್ತಿದ್ದರು. ಈ ವೇಳೆ, ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕುಂಭಮೇಳಕ್ಕಾಗಿ ಕರ್ನಾಟಕದಿಂದ ಉತ್ತರ ಪ್ರದೇಶಕ್ಕೆ ತೆರಳಿದ್ದವರಲ್ಲಿ ಈವರೆಗೆ ಸುಮಾರು 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ಸಾವನ್ನಪ್ಪಿದ್ದರು. ಪ್ರಯಾಗ್‌ರಾಜ್ ನಗರಕ್ಕೆ ತೆರಳಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರದ ಪ್ರವೀಣ್ ಹೊಸಮನಿ ಎಂಬವರು ಗೋರಖಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದರು.
ಇನ್ನು, ಮೈಸೂರು ಜಿಲ್ಲೆಯ ಮಂಟಿಕ್ಯಾತನಹಳ್ಳಿ ಗ್ರಾಮದ ರಾಮಕೃಷ್ಣ ಶರ್ಮಾ ಮತ್ತು ಶ್ರೀರಂಗಪಟ್ಟನ ತಾಲೂಕಿನ ಕೆಆರ್‌ಎಸ್ ನಿವಾಸಿ ಅರುಣ್ ಶಾಸ್ತ್ರಿ ಎಂಬವರು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಅಲ್ಲದೆ, ಮಧ್ಯಪ್ರದೇಶದ ಇಂಧೋರ್ ಬಳಿ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದರು.