ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಮಾಡುವಂತಹ ಹ್ಯಾಮ್ ಸ್ಟೇಷನ್ ಹೊಂದುವ ಮೂಲಕ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಿಲ್ಲೆಗೆ ಕೀರ್ತಿ ತಂದಿದೆ. ರಾಜ್ಯದ ಮೂರನೆಯ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೇ ಪ್ರಥಮ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂಟರ್ನೆಟ್ ಅಥವಾ ಸೆಲ್ ಫೋನ್ಗಳಿಲ್ಲದೆ ಜನರು ನಗರ, ಪಟ್ಟಣ, ಪ್ರಪಂಚದಾದ್ಯಂತ ಅಥವಾ ಬಾಹ್ಯಾಕಾಶಕ್ಕೆ ಮಾತನಾಡಲು ಹ್ಯಾಮ್ ಬಳಸುತ್ತಾರೆ. ಇದು ಮೋಜಿನ, ಸಾಮಾಜಿಕ, ಶೈಕ್ಷಣಿಕ ಮತ್ತು ಅಗತ್ಯವಿರುವ ಸಮಯದಲ್ಲಿ ಜೀವಸೆಲೆಯಾಗಬಹುದು. ಕೇಂದ್ರ ಸರ್ಕಾರದ ಅಡಿಯಲ್ಲಿ ನಡೆಸುವ ಹ್ಯಾಮ್ ಸಂಸ್ಥೆ ವತಿಯಿಂದ ರಾಷ್ಟ್ರಮಟ್ಟದ ಹ್ಯಾಮ್ ಪರೀಕ್ಷೆ ನಡೆಸುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಲೈಸೆನ್ಸ್ ನೀಡಲಾಗುತ್ತದೆ.

ಮೊರಾರ್ಜಿ ದೇಸಾಯಿ ವಸತಿ ಹ್ಯಾಮ್ ಸ್ಟೇಷನ್‌ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹ್ಯಾಮ್ ಲೈಸೆನ್ಸ್ ಹೊಂದಿದವರ ಜತೆಗೆ ನಿರರ್ಗಳವಾಗಿ ಮಾತನಾಡಲು ಅನುಕೂಲವಾಗಿದೆ. ಮೊಬೈಲ್ ನೆಟ್ವರ್ಕ್ ನಿಂತಾಗ ನೈಸರ್ಗಿಕ ಅಪಘಾತಗಳು ಸಂಭವಿಸಿದಾಗ ತುರ್ತು ಸಂದರ್ಭದಲ್ಲಿ ಹ್ಯಾಮ್ ಲೈಸೆನ್ಸ್ ಪಡೆದವರ ನೆರವು ಪಡೆದು ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು. ನಿತ್ಯ ಶಾಲಾ ಆವರಣದಲ್ಲಿ ಹ್ಯಾಮ್ ಬಳಕೆ ಮಾಡಲಾಗುತ್ತದೆ.
ಬೃಹತ್ ಜಾತ್ರೆ, ಕುಂಭಮೇಳ, ದೊಡ್ಡ ಪ್ರಮಾಣದ ಶುಭ, ಸಮಾರಂಭದಲ್ಲಿ ಸೇರುವ ಜನದಟ್ಟಣೆ ಪ್ರದೇಶಗಳಲ್ಲಿ ಹ್ಯಾಮ್ ಮಾಧ್ಯಮದ ಬಳಕೆ ಸಹಕಾರಿಯಾಗುತ್ತದೆ. ತುರ್ತು ಪರಿಸ್ಥಿತಿ, ಭೂಕಂಪ, ಭೂಕುಸಿತ, ಕಾಡ್ಗಿಚ್ಚು, ಸುನಾಮಿ, ಚಂಡ ಮಾರುತ, ವಾಯುಭಾರ ಕುಸಿತ ಸೇರಿದಂತೆ ಕರಾವಳಿ ತೀರದಲ್ಲಿ ಮೀನುಗಾರರಿಗೆ ಜನವಸತಿಗಳಲ್ಲಿ ಬಳಕೆಯಾಗುತ್ತದೆ. ಈ ಸಂದರ್ಭದಲ್ಲಿ ಸಂದೇಶ ರವಾನಿಸಲು ಉಪಯುಕ್ತವಾದ ಸಂವಹನ ಮಾಧ್ಯಮ ಇದಾಗಿದೆ.
ಈ ಸುದ್ದಿ ಓದಿದ್ದೀರಾ?: ರನ್ನ ವೈಭವ: ಸಾಂಸ್ಕೃತಿಕ ಮಹಾ ಉತ್ಸವಕ್ಕೆ ಸಜ್ಜಾದ ಬಾಗಲಕೋಟೆ
ಈ ಕುರಿತು ಈದಿನ ಡಾಟ್ ಕಾಂ ಜೊತೆ ಪ್ರತಿಕ್ರಿಯಿಸಿದ ಮೊರಾರ್ಜಿ ವಸತಿ ಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಜೋಶಿ ಮಾತನಾಡಿ, ರಾಜ್ಯದ 20 ವಸತಿ ಶಾಲೆಗಳಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಮಕ್ಕಳಲ್ಲಿ ಭಾಷಾ ಕೌಶಲ್ಯ ಹೆಚ್ಚಿಸುವುದು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಡ್ ವರ್ಡ್ ಬಳಕೆ ಮಾಡಿ ಸಂವಹನ ಮಾಡುವಂತಹ ಅವಕಾಶ ಮಕ್ಕಳಿಗೆ ಸಿಗುತ್ತದೆ. ಶಾಲಾ ಮಟ್ಟದಲ್ಲಿ ಮಕ್ಕಳಿಗೆ ತಂತ್ರಜ್ಞಾನದ ಬೆಳವಣಿಗೆಗೆ ಸೂಚಿಸುವುದಕ್ಕೆ ಅತ್ಯುತ್ತಮ ಸಾಧನ ಇದಾಗಿದೆ” ಎಂದು ಮಾಹಿತಿ ನೀಡಿದರು.

