ಕರ್ನಾಟಕದ ಕೆಎಸ್‌ಆರ್‌ಟಿಸಿ ಸೇರಿದಂತೆ ದೇಶಾದ್ಯಂತ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ‘ಮಹಿಳಾ ಮೀಸಲು’ ಸೀಟುಗಳಿವೆ. ಆ ಸೀಟುಗಳನ್ನು ಮಹಿಳೆಯರಿಗೆ ಬಿಟ್ಟುಕೊಡಬೇಕು ಎಂಬ ನಿಯಮವೂ ಇದೆ. ಆದರೆ, ಕೆಎಸ್‌ಆರ್‌ಟಿಸಿಯ ಮೈಸೂರು ವಿಭಾಗವು ಸಾರಿಗೆ ಬಸ್‌ಗಳಲ್ಲಿ ಪುರುಷರಿಗೆ ಸೀಟುಗಳನ್ನು ಬಿಟ್ಟುಕೊಡಿ ಎಂಬ ಆದೇಶ ಹೊರಡಿಸಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾದಾಗಿನಿಂದಲೂ ಮಹಿಳೆಯರ ಪ್ರಯಾಣದ ವಿರುದ್ಧ ಅಪಪ್ರಚಾರಗಳು, ಕುಹಕಗಳು ವ್ಯಕ್ತವಾಗುತ್ತಲೇ ಇವೆ. ಅಂತಹ ಅಪಪ್ರಚಾರದ ಗೀಳಿಗೆ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗವೂ ಸಿಲುಕಿಕೊಂಡಿದ್ದು, ಈ ರೀತಿಯ ಆದೇಶ ಹೊರಡಿಸಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.
ಬಸ್‌ಗಳಲ್ಲಿ ಪುರುಷರಿಗೆ ಸೀಟು ಬಿಟ್ಟುಕೊಡುವಂತೆ ಆದೇಶ ಹೊರಡಿಸಿರುವ ಮೈಸೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ, “ಮೈಸೂರು ನಗರ ಸಾರಿಗೆ ವಾಹನಗಳಲ್ಲಿ ಪುರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳೆಯರು ಕುಳಿತು ಪ್ರಯಾಣಿಸುತ್ತಿದ್ದು, ಪುರುಷ ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಆಸನಗಳು ಸಿಗುವುದಿಲ್ಲವೆಂದು ವಿಷ್ಣುವರ್ಧನ ಎಸ್ ಎಂಬವರು ಕೇಂದ್ರ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಅದರಂತೆ ತಮ್ಮ ಘಟಕಗಳಿಂದ ಕಾರ್ಯಾಚರಣೆಯಾಗುವ ಎಲ್ಲ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿಸಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಎಲ್ಲ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ. ತೆಗೆದುಕೊಂಡ ಕ್ರಮದ ಉರಿತು ಅನುಸರಣಾ ವರದಿ ಕಳುಹಿಸಬೇಕು” ಎಂದು ಆದೇಶಿಸಿದ್ದಾರೆ.
ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್‌ಗಳಲ್ಲಿ ಮಹಿಳೆಯರಿಗೆ, ವಿಶೇಷ ಚೇತನರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲು ಸೀಟುಗಳಿವೆ. ಉಳಿದೆಲ್ಲ ಸೀಟುಗಳು ಪುರುಷರಿಗೆ ಮಾತ್ರವೇ ಎಂದಿಲ್ಲ. ಮೀಸಲು ಅಲ್ಲದ ಸೀಟುಗಳಲ್ಲಿ ಯಾವುದೇ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಬಹುದು. ಇಂತಹ ಕನಿಷ್ಠ ಜ್ಞಾನವೂ ಇಲ್ಲದವರು ಕೆಎಸ್‌ಆರ್‌ಟಿಸಿಯ ಒಂದು ವಿಭಾಗದ ನಿಯಂತ್ರಣಾಧಿಕಾರಿಯಾಗಿದ್ದಾರೆ. ಅವರಿಗೆ ಬಸ್ ಪ್ರಯಾಣ ಮತ್ತು ಸೀಟುಗಳ ಬಗ್ಗೆ ಮೊದಲು ಅರಿವು ಮೂಡಿಸಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಆದೇಶದ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ, “ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕಾಗಿ ಕೆಲವು ಸೀಟುಗಳು ಮೀಸಲಿವೆ. ಹಾಗೆಂದ ಮಾತ್ರಕ್ಕೆ, ಮಹಿಳೆಯರು ಆ ಸೀಟುಗಳಲ್ಲಿ ಮಾತ್ರವೇ ಕುಳಿತುಕೊಳ್ಳಬೇಕು. ಉಳಿದ ಸೀಟುಗಳಲ್ಲಿ ಕುಳಿತುಕೊಳ್ಳಬಾರದು ಎಂಬ ನಿಯಮವೇನೂ ಇಲ್ಲ. ಮೀಸಲು ಸೀಟುಗಳು ಮಾತ್ರವಲ್ಲದೆ, ಉಳಿದ ಸೀಟುಗಳಲ್ಲೂ ಮಹಿಳೆಯರು ಕುಳಿತುಕೊಳ್ಳವ ಅವಕಾಶ – ಹಕ್ಕು ಇದೆ. ಆದಾಗ್ಯೂ, ಮಹಿಳಾ ಮೀಸಲು ಸೀಟುಗಳಲ್ಲದ ಉಳಿದೆಲ್ಲ ಸೀಟುಗಳು ಪುರುಷರಿಗೆ ಎಂಬ ತಪ್ಪು ತಿಳುವಳಿಕೆ ಸಾರ್ವಜನಿಕರಲ್ಲಿದೆ. ಇದೇ ತಿಳುವಳಿಕೆ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿಗೂ ಇದ್ದಂತಿದೆ. ಆದರೆ, ಅವು ಪುರುಷರಿಗಾಗಿ ಮಾತ್ರವೇ ಇರುವ ಸೀಟುಗಳಲ್ಲ. ಯಾರು ಬೇಕಿದ್ದರೂ ಪ್ರಯಾಣಿಸಬಹುದು” ಎಂದು ಹೇಳಿದ್ದಾರೆ.
“ಬಸ್‌ಗಳನ್ನು ಯಾರು ಮೊದಲು ಹತ್ತುತ್ತಾರೆಯೋ? ಅವರು ಖಾಲಿ ಇರುವ ಸೀಟುಗಳಲ್ಲಿ ಕುಳಿತುಕೊಳ್ಳುತ್ತಾರೆ. ಪರುಷರು ಬಂದರೆಂಬ ಕಾರಣಕ್ಕೆ ಸಾಮಾನ್ಯ ಸೀಟುಗಳನ್ನು ಮಹಿಳೆಯರು ಬಿಟ್ಟುಕೊಡಬೇಕು ಎಂಬುದು ಸರಿಯಲ್ಲ. ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ಆದೇಶವನ್ನು ವಾಪಸ್ ಪಡೆಯಬೇಕು” ಎಂದು ಪೂರ್ಣಿಮ ಆಗ್ರಹಿಸಿದ್ದಾರೆ.
“ಶಕ್ತಿ ಯೋಜನೆ ಆರಂಭವಾದ ಬಳಿಕ, ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಕೆಲವು ಪುರುಷರು ಯೋಚನೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಉಚಿತ ಪ್ರಯಾಣ ಎಂಬ ಕಾರಣಕ್ಕೆ ಮಹಿಳೆಯರು ಅಗತ್ಯಕ್ಕಿಂತ ಹೆಚ್ಚು ಓಡಾಡುತ್ತಿದ್ದಾರೆ ಎಂಬೆಲ್ಲ ಅಪಪ್ರಚಾರಗಳು ನಡೆಯುತ್ತಿವೆ. ಇದೆಲ್ಲವೂ, ಮಹಿಳೆಯರ ಏಳಿಕೆಯನ್ನು ಸಹಿಸಲಾಗದ ಪುರುಷಾಧಿಪತ್ಯದ ಪಿತೂರಿಗಳೇ ಆಗಿವೆ. ಆದರೆ, ಅನಗತ್ಯವಾಗಿ ಯಾವುದೇ ಮಹಿಳೆ, ಎಲ್ಲಿಯೂ ಪ್ರಯಾಣಿಸುತ್ತಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಸರ್ಕಾರದ ಉತ್ತಮ ಯೋಜನೆಯನ್ನು ಬೆಂಬಲಿಸಬೇಕು. ಅಂತೆಯೇ, ಅಧಿಕಾರಿಗಳು ಇಂತಹ ಧೋರಣೆಗಳನ್ನು ಬಿಟ್ಟು, ಸರಿಯಾಗಿ ಕಾರ್ಯನಿರ್ವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಆದೇಶದ ಕುರಿತು ಪ್ರತಿಕ್ರಿಯೆ ಪಡೆಯಲು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಅವರನ್ನು ಈದಿನ.ಕಾಮ್ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ದೊರೆತಿಲ್ಲ. ಅವರ ಪ್ರತಿಕ್ರಿಯೆ ಪಡೆದ ಬಳಿಕ, ಸುದ್ದಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ.