ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯದೊಂದಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಹೊಸ ಉಚಿತ ಕನ್ನಡ ಕಲಿಕಾ ಕೇಂದ್ರ ಪ್ರಾರಂಭಿಸಿಲಾಗಿದೆ.
ಕೇಂದ್ರವು 3 ತಿಂಗಳ ಕೋರ್ಸ್‌ನಲ್ಲಿ ಒಟ್ಟು 36 ಗಂಟೆಗಳ ಅವಧಿಯ ಕಲಿಕಾ ತರಗತಿಗಳನ್ನು ನಡೆಸಿ, ಭಾಗವಹಿಸುವವರಲ್ಲಿ ಕನ್ನಡದಲ್ಲಿ ಮಾತನಾಡುವ, ಓದುವ ಮತ್ತು ಬರೆಯುವ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಕಲಿಯುವವರ ಅನುಕೂಲಕ್ಕೆ ಅನುಗುಣವಾಗಿ ತರಗತಿ ಸಮಯವನ್ನು ನಿಗದಿಪಡಿಸಲಾಗಿದೆ. ವಾರಕ್ಕೆ ಮೂರು ಗಂಟೆಗಳ ಕಾಲ ತರಗತಿ ನಿಗದಿಪಡಿಸಲಾಗಿದ್ದು, ಅಗತ್ಯವಿದ್ದರೆ ಅವಧಿಯನ್ನು ವಿಸ್ತರಿಸಬಹುದು. ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಕರ್ನಾಟಕ ಸರ್ಕಾರ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಮಾಣಪತ್ರ ದೊರೆಯುತ್ತದೆ. ಒಂದು ತರಗತಿಯಲ್ಲಿ 30 ಜನರನ್ನು ಮಾತ್ರ ನಿಗದಿಪಡಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ತರಗತಿಯು ಪ್ರಾರಂಭವಾಗುತ್ತವೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರೊ. ನಿರಂಜನರಾಧ್ಯ ವಿ ಪಿ ಕನ್ನಡ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. “ನಮ್ಮ ಮಾತೃಭಾಷೆಯ ಮೂಲಕವೇ ಎರಡನೇ ಭಾಷೆಯನ್ನು ಕಲಿಯಬೇಕು. ಭಾಷೆಯ ಬಗ್ಗೆ ಅಭಿಮಾನವಿರಲಿ, ಆದರೆ ದುರಭಿಮಾನ ಬೇಡ. ಭಾಷೆಯನ್ನು ಸಹಕಾರ ಸಾಮರಸ್ಯದ ಮೂಲಕ ಕಲಿಯಬೇಕೇ ಹೊರತು ಸಂಘರ್ಷ ಅಥವಾ ಭಯದಿಂದಲ್ಲ. ಕನ್ನಡದ ನೆಲದಲ್ಲಿ ಎಲ್ಲವನ್ನೂ ಪಡೆವ ಕನ್ನಡೇತರರು, ಕನ್ನಡ ಕಲಿತು ಕನ್ನಡಿಗರ ಜೊತೆ ಶಾಂತಿಯುತ ಸಹಬಾಳ್ವೆ ನಡೆಸಲು ಹಿಂದೇಟು ಹಾಕಬಾರದು. ಕನ್ನಡಿಗರ ಶಾಂತಿ ಸಂಯಮವನ್ನು ಅರಿತು ನಡೆಯಬೇಕು” ಎಂದರು.
ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಲಯಾಳಂ ಮಿಷನ್ ಕರ್ನಾಟಕದ ಅಧ್ಯಕ್ಷ ಕೆ. ದಾಮೋದರನ್, ಟಾಮಿ ಜೆ. ಅಲುಂಕಲ್, ನ್ಯಾಯವಾದಿ ಬುಶ್ರ ವಲಪ್ಪಿಲ್, ಆರ್ಟ್ ಆಫ್ ಲಿವಿಂಗ್‌ನ ಆರ್ ಶ್ರೀನಿವಾಸ್, ಪ್ರವಾಸಿ ಮಲಯಾಳಿ ಅಸೋಸಿಯೇಷನ್ ವೈಟ್‌ಫೀಲ್ಡ್ ಅಧ್ಯಕ್ಷ ರಮೇಶ್ ಕುಮಾರ್ ವಿ, ಕಾರ್ಯದರ್ಶಿ ರಾಗೇಶ್ ಪಿ, ಸಂತೋಷ್ ಕುಮಾರ್, ಕೇರಳ ಸಮಾಜ ವೈಟ್‌ಫೀಲ್ಡ್ ಜೋನ್ ಸಂಚಾಲಕ ಸುರೇಶ್ ಕುಮಾರ್ ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮಧ್ಯರಾತ್ರಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ
ಕರ್ನಾಟಕ ಸರ್ಕಾರದಿಂದ ವಿಶೇಷ ತರಬೇತಿ ಪಡೆದಿರುವ ಡಾ. ಸುಷ್ಮಾ ಶಂಕರ್ ತರಗತಿಗಳನ್ನು ಮುನ್ನಡೆಸಲಿದ್ದಾರೆ.
ತರಬೇತಿ ಪಡೆದ ಪ್ರೊ. ರಾಕೇಶ್ ವಿ.ಎಸ್ ಮತ್ತು ರೆಬಿನ್ ರವೀಂದ್ರನ್ ತರಗತಿಗಳನ್ನು ನಡೆಸಲಿದ್ದಾರೆ ಎಂದು ಕಲಿಕಾ ಕೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
