ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆ ರಸ್ತೆಯು ಸರಣಿ ಅಪಘಾತಗಳ ಕೂಪವಾಗಿದೆ. ದಿನನಿತ್ಯ ಸಂಭವಿಸುತ್ತಿರುವ ಸಾವು ನೋವುಗಳಿಂದ ಬೇಸತ್ತಿರುವ ಮಂದಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಈ ಮೆಗ್ಗಾನ್ ಆಸ್ಪತ್ರೆ ಎದುರು ಪೊಲೀಸ್ ಜಿಲ್ಲಾ ಕಚೇರಿ, ಅಗ್ನಿ ಶಾಮಕ ಠಾಣೆ ಹಾಗೂ ಬೇರೆ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಸರ್ಕಲ್ ಇದೆ. ಪ್ರತಿನಿತ್ಯ ಜನರಿಂದ ತುಂಬಿ ತುಳುಕುವ ಪ್ರದೇಶದಲ್ಲಿ ಸರಿಯಾದ ಬೀಮ್ ಲೈಟ್ಸ್ ಅಳವಡಿಸಿಲ್ಲ ಎಂದರೆ ನಂಬಲೇಬೇಕು. ಸಾಗರ ಕಡೆಯಿಂದ ಬರುವ ವಾಹನಗಳು ಹಾಗೂ ಆಂಬುಲೆನ್ಸ್‌ಗಳು ವೇಗವಾಗಿ ಸಂಚರಿಸುತ್ತವೆ. ಸಂಜೆಯಾದರೆ ಸಾಕು.. ಜನ ಯಾವ ಮೂಲೆಯಲ್ಲಿ ಅಪಘಾತವಾಗುವುದೋ ಎಂದು ಭಯದಲ್ಲೇ ಕಾಲ ಕಳೆಯುವಂತಾಗಿದೆ.

ಹಾಗೆಯೇ ಸಾಗರ ಆಯನೂರಿಂದ ಬರುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸ್ವಲ್ಪ ಮುಂದೆ ಇರುವ ಬಸ್‌ಸ್ಟಾಪ್‌ಗಳಲ್ಲಿ ನಿಲುಗಡೆ ಮಾಡುತ್ತಿಲ್ಲ. ಆಸ್ಪತ್ರೆ ಗೇಟ್ ಪಕ್ಕದಲ್ಲೇ ಬಸ್‌ಗಳನ್ನು ನಿಲ್ಲಿಸುತ್ತವೆ. ಮೊದಲೇ ಜನಸಂದಣಿ ಇರುವ ಪ್ರದೇಶದಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಬಸ್ ನಿಲ್ಲಿಸಿಬಿಟ್ಟರೆ ಜನ ಸರಾಗವಾಗಿ ಓಡಾಡುವುದಾದರೂ ಹೇಗೆ.. ವಾಹನ ಸವಾರರು ಏಕಾಏಕಿ ಬಂದು ಅಪಘಾತ ಸಂಭವಿಸಿದರೆ ಅದಕ್ಕೆ ಹೊಣೆಗಾರರು ಯಾರು ಎಂಬುದು ಅಲ್ಲಿನ ಜನಗಳ ವಾದ.

ಅಲ್ಲದೆ, ಮೆಗ್ಗಾನ್ ಒಂದು ನಗರದ ಪ್ರತಿಷ್ಠಿತ ಸರ್ಕಾರೀ ಬೋಧನಾ ಕಾಲೇಜು ಮತ್ತು ಆಸ್ಪತ್ರೆ ಆಗಿದೆ. ಆದರೂ ರಾತ್ರಿ ವೇಳೆಯಲ್ಲಿ ಇಲ್ಲೊಂದು ಆಸ್ಪತ್ರೆ ಇದೆ ಎನ್ನುವುದೇ ತಿಳಿಯುವುದಿಲ್ಲ. ಮೊದಲ ಬಾರಿಗೆ ಇಲ್ಲಿಗೆ ಬರುವವರು ಯಾರನ್ನಾದರೂ ಕೇಳಿ ತಿಳಿದುಕೊಂಡು ಹೋಗಬೇಕಷ್ಟೆ. ಕಾರಣ ಆಸ್ಪತ್ರೆಯ ಮುಂಭಾಗವಾಗಲೀ, ಎದುರಿಗಿರುವ ಸರ್ಕಾರಿ ಕಚೇರಿಗಳ ಮುಂಭಾಗವಾಗಲೀ ಸರಿಯಾದ ಲೈಟಿಂಗ್ ವ್ಯವಸ್ಥೆ ಇಲ್ಲ. ವಿವಿಧ ದಿಕ್ಕಿನಿಂದ ಬರುವ ವಾಹನಗಳೂ ಸಹ ಇದೇ ಕಾರಣದಿಂದ ಅಪಘಾತಕ್ಕೀಡಾಗುತ್ತಿವೆ. ಮುಂದೆ ವಾಹನಗಳೋ ಇಲ್ಲ ಪಾದಚಾರಿಗಳೋ ಇದ್ದಾರೆ ಎಂದು ತಿಳಿಯದೇ ವಾಚನ ಚಲಾಯಿಸುವುದು ಹೇಗೆ ಎನ್ನುತ್ತಾರೆ ಅದೇ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ವಾಹನ ಚಾಲಕರು.
ಹಾಗೆ ರಾತ್ರಿ ವೇಳೆಯಲ್ಲಿ ಆಸ್ಪತ್ರೆ ಬಳಿ ಏಕಾಏಕಿ ಬಸ್ ಸ್ಟಾಪ್ ಮಾಡುವುದು ಹಿಂಬದಿ ಬರುವ ವಾಹನಗಳಿಗೆ ಸಮಸ್ಯೆಯಾಗಿದೆ.

ಆಸ್ಪತ್ರೆ ಮುಂಭಾಗಕ್ಕೆ ತಿರುವು ನೀಡಿರುವ ಕಾರಣ ದಿನ ನಿತ್ಯ ಒಂದಿಲ್ಲೊಂದು ಅಪಘಾತ ಸರ್ವೇ ಸಾಮಾನ್ಯವಾಗಿದೆ. ಅದರಂತೆ ಸಾರ್ವಜನಿಕರು, ರೋಗಿಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಈದಿನ ಡಾಟ್ ಕಾಮ್ ಜತೆ ಮಾತನಾಡಿ ಇಲ್ಲಿಗೆ ಒಂದು ದೊಡ್ಡ ಫೋಕಸ್ ಲೈಟ್ ಹಾಗೂ ಸ್ಪೀಡ್ ಬ್ರೇಕರ್ ಅವಶ್ಯಕತೆಯಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡರು.
ಈ ಸಂಬಂಧ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ತಿಮ್ಮಪ್ಪ ಮಾತನಾಡಿ, “ಇದೆಲ್ಲ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಏನೇ ಫೋಕಸ್ ಲೈಟ್, ಟ್ರಾಫಿಕ್ ಮತ್ತೊಂದು ಎಲ್ಲವೂ ಸಹ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಟ್ರಾಫಿಕ್ ಪೊಲೀಸ್‌ಗೆ ತಿಳಿಸಿ ಸರಿಪಡಿಸಿಕೊಳ್ಳಿ ಎಂದು ಉಡಾಫೆಯ ಉತ್ತರ ನೀಡಿ” ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು.

ವಾಸ್ತವವಾಗಿ ಮೆಗ್ಗಾನ್ ಆಸ್ಪತ್ರೆ ಗೇಟ್ ಒಳಗೂ ಸಹ ದೊಡ್ಡದೊಂದು ಲೈಟ್ ಇಲ್ಲ. ಅದೂ ಕೂಡ ಆಸ್ಪತ್ರೆಯ ವ್ಯಾಪ್ತಿಗೆ ಬರುವುದಿಲ್ಲವೇ? ಎಂಬುದು ರೋಗಿಗಳು ಹಾಗೂ ಸಾರ್ವಜನಿಕರ ಪ್ರಶ್ನೆಯಾಗಿದೆ.
ವಿಷಯ ಕುರಿತು ಮಹಾನಗರ ಪಾಲಿಕೆ ಎಲೆಕ್ಟ್ರಿಕಲ್ ಇಂಜಿನಿಯರ್ ನಾಗರಾಜ್ ಈದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿಮ, “ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ಮೆಗ್ಗಾನ್ ಆಸ್ಪತ್ರೆಯಿಂದ ಲೆಟರ್ ಕೊಡಬೇಕು. ಅವರ ಮನವಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಎಲ್ಲಿ ಅಳವಡಿಸಿದರೆ ಸೂಕ್ತ ಎಂಬುದನ್ನು ಪರಿಶೀಲಿಸಿ ಬಳಿಕ ಫೋಕಸ್ ಲೈಟ್ ಹಾಕಿಸಲು ಕ್ರಮವಹಿಸಲಾಗುತ್ತದೆ” ಎಂದು ತಿಳಿಸಿದರು.

ಟ್ರಾಫಿಕ್ ಸ್ಪೀಡ್ ಬ್ರೇಕರ್ ಇರದಿರುವ ಕುರಿತು ಶಿವಮೊಗ್ಗ ಟ್ರಾಫಿಕ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ಮಾತನಾಡಿ, “ಇದು ನ್ಯಾಷನಲ್ ಹೈವೇ ಆಗಿರುವ ಕಾರಣ ಸ್ಪೀಡ್ ಬ್ರೇಕರ್ ಅಥವಾ ಹಂಪ್ ಅಳವಡಿಸಲು ಸಾಧ್ಯವಿಲ್ಲ. ಹಂಪ್ ಅಥವಾ ಸ್ಪೀಡ್ ಬ್ರೇಕರ್ ಹಾಕಿದರೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಹಾಗಾಗಿ ಸದ್ಯಕ್ಕೆ ಮೆಗ್ಗಾನ್ ಆಸ್ಪತ್ರೆಯಿಂದ ಸ್ವಲ್ಪ ಮುಂದಿರುವ ಬಸ್ ಸ್ಟಾಪ್‌ಗಳಲ್ಲಿ ಬಸ್‌ಗಳನ್ನು ನಿಲ್ಲಿಸಲು ತಿಳಿಸುತ್ತೇನೆ” ಎಂದರು.
ಸಾಗರ, ಆಯನೂರು ರಸ್ತೆಗಳಲ್ಲಿ ಅತೀ ವೇಗದ ಚಾಲನೆ ಮಾಡುವವರ ವಿರುದ್ಧ ಕ್ರಮ ಏನು? ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಾರೆಯೇ? ಅತಿ ವೇಗದ ಚಾಲನೆಯಿಂದ ಸಂಭವಿಸಬಹುದಾದ ಅಪಘಾತಗಳಿಗೆ ಹೊಣೆ ಯಾರು? ಮುಂದಿನ ಕ್ರಮ ಏನು? ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಇನ್ಶೂರೆನ್ಸ್ ಪಾವತಿಸದೆ ಓಡಿಸುತ್ತಿದ್ದ ಖಾಸಗಿ ಬಸ್ ಮಾಲೀಕನಿಗೆ ದಂಡ
ಜೊತೆಗೆ ಮೆಗ್ಗಾನ್ ಆಸ್ಪತ್ರೆ ಎದುರೇ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಿದ್ದು, ಇಲ್ಲಿ ರಾತ್ರಿ ವೇಳೆಯಲ್ಲಿ ಒಂದು ಫೋಕಸ್ ಲೈಟ್ ಲೈಟ್ ಇಲ್ಲದೇ ಅಧಿಕಾರಿಗಳು ಹೇಗೆ ಕರ್ತವ್ಯ ನಿರ್ವಹಿಸುತ್ತಿರಬಹುದು ಎಂಬುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ದಿನ ನಿತ್ಯ ಅದೇ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳು ತಮ್ಮದೇ ಕಚೇರಿಗೆ, ಆಸ್ಪತ್ರೆಗೆ ಈ ರೀತಿಯ ಪರಿಸ್ಥಿತಿ ಒದಗಿರುವುದು ನೋಡಿಕೊಂಡು ಸುಮ್ಮನಿರುವುದು ಯಾತಕ್ಕಾಗಿ ಎಂಬುದೇ ತಿಳಿಯದಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚರ ವಹಿಸಿ ಇಲ್ಲಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಾರಾ ಎಂಬುದು ಶಿವಮೊಗ್ಗ ನಗರದ ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.