ಸಮಾಜದಲ್ಲಿ ಬೇರೂರಿದ ಅನಿಷ್ಟ ಆಚರಣೆಗಳನ್ನು ಜನರಾಡುವ ಭಾಷೆಯಲ್ಲೇ ತ್ರಿಪದಿಗಳು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಶ್ರೇಷ್ಠ ಸಮಾಜ ಸುಧಾರಕ ಸರ್ವಜ್ಞ ಆಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಔರಾದ್ ತಾಲ್ಲೂಕಾಧ್ಯಕ್ಷ ಬಿ.ಎಂ.ಅಮರವಾಡಿ ಹೇಳಿದರು.
ಔರಾದ್ ಪಟ್ಟಣದ ಭಕ್ತ ಗೋರೊಬಾ ಕಾಕಾ ಸ್ವ ಸಹಾಯ ಸಂಘ ಹಾಗೂ ತಾಲ್ಲೂಕು ಕುಂಬಾರ ಸಮಾಜ ವತಿಯಿಂದ ಗುರುವಾರ ಆಯೋಜಿಸಿದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ʼತ್ರಿಪದಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರರಾಗಿ 16ನೇ ಶತಮಾನದಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದರು. ಯಾವುದೇ ಒಂದು ಜಾತಿಗೆ ಸೀಮಿತರಾಗದೆ ಸಮಾಜದಲ್ಲಿ ಎಲ್ಲ ವರ್ಗ, ಕ್ಷೇತ್ರಗಳಲ್ಲಿನ ಅಂಧಕಾರವನ್ನು ತೊಡೆದು ಹಾಕಲು ಶ್ರಮಿಸಿದರು. ಸರ್ವಜ್ಞರ ಆದರ್ಶ ತತ್ವಗಳು ಎಂದೆಂದಿಗೂ ಮಾದರಿಯಾಗಿವೆʼ ಎಂದರು.
ಔರಾದ್ ತಾಲ್ಲೂಕು ಕುಂಬಾರ ಸಮಾಜದ ಅಧ್ಯಕ್ಷ ನಾಗಪ್ಪ ಕುಂಬಾರ ಮಾತನಾಡಿ, ʼಕುಂಬಾರ ಸಮುದಾಯದ ಜನರು ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಪಡೆದು ಉನ್ನತ ಶಿಕ್ಷಣ ಕೊಡಿಸಬೇಕುʼ ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಾಡುಹಗಲೇ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ; ಚಿನ್ನಾಭರಣ ದರೋಡೆ
ಈ ಸಂದರ್ಭದಲ್ಲಿ ಗಣಪತಿ ಕುಂಬಾರ ಚಟ್ನಾಳ, ನರಸಿಂಗ ಹಂದಿಕೇರಾ, ಈರಪ್ಪ ಕುಂಬಾರ, ಬಸವರಾಜ ಕುಂಬಾರ, ಗುಂಡಪ್ಪ ಕುಂಬಾರ, ನರಸಿಂಗ ಕುಂಬಾರ ಸೇರಿದಂತೆ ಮತ್ತಿತರರಿದ್ದರು.