ಇನ್ನೇನು ಬೇಸಿಗೆ ಶುರುವಾಗಿದೆ. ಜಿಲ್ಲೆಯಲ್ಲಿ ಫೆಬ್ರವರಿ ಮೊದಲ ವಾರದಿಂದ ಬಿರು ಬಿಸಿಲಿನ ಧಗೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಜನರ ಬಾಯಾರಿಕೆ ತಣಿಸಲು ಬೀದರ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಿದ ಶುದ್ಧ ನೀರಿನ ಘಟಕ ತುಕ್ಕು ಹಿಡಿಯುತ್ತಿದ್ದರೂ ಅಧಿಕಾರಿಗಳು ದುರಸ್ತಿ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಗಾಂಧಿ ಗಂಜ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ನಿತ್ಯ ಗ್ರಾಮೀಣ ಭಾಗದ ಸಾವಿರಾರು ರೈತರು ವಿವಿಧ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಮಾರುಕಟ್ಟೆಯಲ್ಲಿ ಇರುವ 4 ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಕಾಣದೆ ಧೂಳು ತಿನ್ನುತ್ತಿವೆ. ಇದರಿಂದ ಮಾರುಕಟ್ಟೆಗೆ ಬಂದ ಬಹುತೇಕರು ಅಂಗಡಿಗಳಲ್ಲಿ ಹಣ ಕೊಟ್ಟು ಬಾಟಲಿ ನೀರು ಖರೀದಿಸುವ ಪರಿಸ್ಥಿತಿ ಏರ್ಪಟ್ಟಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಮುಂಭಾಗದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಮಾರುಕಟ್ಟೆಯ ವಿವಿಧೆಡೆ ಸ್ಥಾಪಿಸಿದ ಶುದ್ಧ ನೀರಿನ ಘಟಕಗಳು ಹಾಳಾಗಿ ಹಲವು ವರ್ಷಗಳೇ ಕಳೆದರೂ ಅವುಗಳ ದುರಸ್ತಿ ಕಾರ್ಯ ನಡೆದಿಲ್ಲ. ತೊಗರಿ, ಕಡಲೆ, ಸೋಯಾ ಮಾರಾಟ ಸೇರಿದಂತೆ ವಿವಿಧ ಕೆಲಸಗಳಿಗೆ ಬೆಳಿಗ್ಗೆ ಮಾರುಕಟ್ಟೆಗೆ ಬಂದ ಬಹುತೇಕ ರೈತರು ಸಂಜೆವರೆಗೂ ಇರುತ್ತಾರೆ. ಮಾರುಕಟ್ಟೆಗೆ ಬರುವವರಿಗೆ ಕನಿಷ್ಠ ಮೂಲಸೌಕರ್ಯ ಇಲ್ಲದಿರುವುದು ವಿಪರ್ಯಾಸವೇ ಸರಿ.
ಬೀದರ್ ನಗರದ ಗಾಂಧಿ ಗಂಜ್‌ನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಬಗ್ಗೆ ʼಈದಿನ.ಕಾಮ್ʼ ಪ್ರತಿನಿಧಿ ರಿಯಾಲಿಟಿ ಚೆಕ್ ಮಾಡಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಬಂದಿತು.

ಎಪಿಎಂಸಿ ಪ್ರಾಂಗಣದಲ್ಲಿ ಕೆಲವೆಡೆ ಸ್ಥಾಪಿಸಿದ ನೀರಿನ ಟ್ಯಾಂಕ್, ನಲ್ಲಿಗಳ ಸುತ್ತಮುತ್ತ ತ್ಯಾಜ್ಯ ಸಂಗ್ರವಾಗಿ ದುರ್ನಾತ ಬೀರುತ್ತಿದೆ. ಕೆಟ್ಟು ನಿಂತ ಕೆಲ ಶುದ್ಧ ಕುಡಿಯವ ನೀರಿನ ಘಟಕಗಳ ಅಕ್ಕಪಕ್ಕದಲ್ಲಿ ಅಂಗಡಿಗಳು ತಲೆಯೆತ್ತಿದರೆ, ಉಳಿದ ಘಟಕ ಸುತ್ತ ಕಸ ಸಂಗ್ರಹವಾಗಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಫಿಲ್ಟರ್, ಉಪಕರಣಗಳು ತುಕ್ಕು ಹಿಡಿಯಲಾರಂಭಿಸಿವೆ.
ಈ ಹಿಂದೆ ಎಪಿಎಂಸಿ ಮುಂಭಾಗದ ಶುದ್ಧ ನೀರಿನ ಘಟಕದ ನೀರು ಸಾರ್ವಜನಿಕರು ಬಳಸುತ್ತಿದ್ದರು. ಶುದ್ಧ ನೀರಿನ ಘಟಕದ ಪಕ್ಕದಲೇ ಕೊಳವೆಬಾವಿ ಇದ್ದರೂ ಘಟಕ ಬಾಗಿಲು ಮುಚ್ಚಿವೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೂಡಲೇ ಘಟಕ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಇಲ್ಲಿನ ವರ್ತಕರು ಒತ್ತಾಯಿಸುತ್ತಿದ್ದಾರೆ.

ʼಸದಾ ಜನರಿಂದ ಗಿಜುಗುಡುವ ಎಪಿಎಂಸಿಯಲ್ಲಿ ಸಾರ್ವಜನಿಕರಿಗೆ ಕನಿಷ್ಠ ನೀರಿನ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಹಣ ಇದ್ದವರು ನೀರಿನ ಬಾಟಲಿ ಖರೀದಿಸಿ ಬಾಯಾರಿಕೆ ನೀಗಿಸಿಕೊಳ್ಳುತ್ತಾರೆ. ಮಾರುಕಟ್ಟೆ ಬಂದವರು ಬಾಯಾರಿಕೆಯಿಂದ ಪರದಾಡುವುದು ಇಲ್ಲಿ ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ಗರಿಷ್ಠ ಉಷ್ಣಾಂಶ 38-40 ಡಿಗ್ರಿ ಸೆಲ್ಸಿಯಸ್‌ವರೆಗೂ ಇದ್ದೇ ಇರುತ್ತದೆ. ಹೀಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಸಾರ್ವಜನಿಕರಿಗೆ ಶುದ್ಧ ನೀರಿನ ಸೌಲಭ್ಯ ಕಲ್ಪಿಸಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಪಡಶೆಟ್ಟಿ ಆಗ್ರಹಿಸಿದ್ದಾರೆ.
’ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸ್ಥಾಪಿಸಿದ ಟ್ಯಾಂಕರ್‌ಗಳಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇದೆ. ಅಂಗಡಿಯವರು, ಸಾರ್ವಜನಿಕರು ಅದನ್ನೇ ಬಳಸುತ್ತಿದ್ದಾರೆ. ಎಪಿಎಂಸಿಯಲ್ಲಿ ನೀರಿನ ಸಮಸ್ಯೆ ಇಲ್ಲವೆಂದು ಇಂಜಿನಿಯರ್ ಅವರು ಶುದ್ಧ ನೀರಿನ ಘಟಕ ದುರಸ್ತಿಗೆ ಅನುಮತಿ ನೀಡಲಿಲ್ಲʼ ಎಂದು ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರಿ ಫುಲೇಕರ್ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.

ಔರಾದ್‌ನಲ್ಲೂ ಇದೇ ಪರಿಸ್ಥಿತಿ :
ಔರಾದ್ ಕೃಷಿ ಉತ್ಪನ್ನ ಮಾರುಕಟ್ಟೆಲ್ಲೂ ಇಂತಹದ್ದೇ ಸ್ಥಿತಿ ಇದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಹಾಳಾಗಿದೆ. ಅಧಿಕಾರಿಗಳು ದುರಸ್ತಿ ಕಾರ್ಯ ಮಾಡುವ ಗೋಜಿಗೆ ಹೋಗಿಲ್ಲ.

ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಸೋಮವಾರ ಜಾನುವಾರು ಅಂಗಡಿ ನಡೆಯುತ್ತದೆ. ತಾಲ್ಲೂಕು ಅಲ್ಲದೆ ನೆರೆಯ ಮಹಾರಾಷ್ಟ್ರ, ತೆಲಂಗಾಣದ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮಾರುಕಟ್ಟೆಗೆ ಬಂದವರು ಕುಡಿಯುವ ನೀರಿಗಾಗಿ ಅಲೆದಾಡುವುದು ಸಾಮಾನ್ಯವಾಗಿದೆ. ಎಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡು ಜನರು ಬಾಟಲಿ ನೀರು ಖರೀದಿಸಲು ಅಂಗಡಿಗಳಿಗೆ ತೆರಳುತ್ತಿದ್ದಾರೆ.

ಔರಾದ್‌ನಲ್ಲಿ ನೀರಿನ ಸಮಸ್ಯೆ ಕಾರಣಕ್ಕೆ ಶುದ್ಧ ನೀರಿನ ಘಟಕ ಬಂದ್ ಆಗಿದೆ. ಹೀಗಾಗಿ ಎಪಿಎಂಸಿ ವತಿಯಿಂದ ನೀರಿನ ಕ್ಯಾನ್ ಖರೀದಿಸಲಾಗುತ್ತಿದೆ. ಶೀಘ್ರದಲ್ಲೇ ಹಾಳಾದ ಶುದ್ಧ ನೀರಿನ ಘಟಕ ದುರಸ್ತಿ ಮಾಡಲಾಗುವುದುʼ ಎಂದು ಔರಾದ್ ಎಪಿಎಂಸಿ ಕಾರ್ಯದರ್ಶಿ ಸಂತೋಷಕುಮಾರ್ ಮುದ್ದಗೊಂಡ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.