ಈ ದಿನ ಸಂಪಾದಕೀಯ | ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ದೇವರು ಬೇಕಿಲ್ಲ – ಇಚ್ಛಾಶಕ್ತಿ ಸಾಕು

Date:

Advertisements
ಬೆಂಗಳೂರನ್ನು ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿ ಮಾಡುತ್ತೇವೆ ಎನ್ನುತ್ತಿದ್ದರೆ, ರಾಜ್ಯ ಸರ್ಕಾರ ‘ಬ್ರಾಂಡ್‌ ಬೆಂಗಳೂರು’ ಮಾಡುತ್ತೇವೆ ಎನ್ನುತ್ತಿದೆ. ಆದರೆ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಎರಡೂ ಸರ್ಕಾರಗಳ ಬಳಿ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ರೂಪುರೇಷೆಯೂ ಇಲ್ಲ.

”ಬೆಂಗಳೂರಿಗೆ ಗುಡ್​ ಬೈ, ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವುದರಿಂದ ಫಾಸ್ಟ್​ ಆಗಿ ಹೋಗಲು ಆಗುವುದಿಲ್ಲ. ಆದ್ದರಿಂದ ವಾಹನಗಳು ಶೋರೂಂನಲ್ಲಿ ಇರುವಂತೆ ಇರುತ್ತವೆ. ನನ್ನ ವಾಹನವೂ ಬಹಳ ಸುರಕ್ಷಿತವಾಗಿದೆ. ನನ್ನ ಕಾರಿಗೆ ಎಷ್ಟೊಂದು ಜನರ ದೃಷ್ಟಿ ಬೀಳುತ್ತಿದೆ. ಟ್ರಾಫಿಕ್‌ನಲ್ಲಿ ಸಿಲುಕಿರುವ ಕಾರಣಕ್ಕಾಗಿ ಅಕ್ಕ ಪಕ್ಕದವರೂ ಈ ಕಾರನ್ನು ನೋಡುವುದಕ್ಕೆ ಹೆಚ್ಚು ಸಮಯ ಸಿಕ್ಕಿತು. ಈ ಕಾರಿಗೆ ಮನಸೋತು ಇನ್ನೊಂದಿಷ್ಟು ಗ್ರಾಹಕರು ಬರಬಹುದು” –ಇದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ಉದ್ಯಮಿ ಆನಂದ್ ಮಹಿಂದ್ರಾ ಅವರ ಮಾರ್ಮಿಕ ಮಾತು.

ಆನಂದ್ ಮಹಿಂದ್ರಾ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಇನ್ವೆಸ್ಟ್‌ ಕರ್ನಾಟಕ’ ಹೆಸರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ”ದೇವರು ಸ್ವತಃ ಮೇಲಿನಿಂದ ಇಳಿದು ಬಂದರೂ ಬೆಂಗಳೂರಿನ ಟ್ರಾಫಿಕ್ ಸರಿಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಸಂಚಾರ ದಟ್ಟಣೆ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಯೋಜಿಸದೆ, ದೇವರಿಂದಲೂ ಸಾಧ್ಯವಿಲ್ಲವೆಂದು ದೇವರ ಮೇಲೆ ಭಾರ ಹಾಕಿ ಕೈಚೆಲ್ಲಿದ್ದಾರೆ.

Advertisements

ಈಗಾಗಲೇ ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಸಿಕೊಂಡಿರುವ ಬೆಂಗಳೂರನ್ನು ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿ ಮಾಡುತ್ತೇವೆ ಎನ್ನುತ್ತಿದ್ದರೆ, ರಾಜ್ಯ ಸರ್ಕಾರ ‘ಬ್ರಾಂಡ್‌ ಬೆಂಗಳೂರು’ ಮಾಡುತ್ತೇವೆ ಎನ್ನುತ್ತಿದೆ. ಆದರೆ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಎರಡೂ ಸರ್ಕಾರಗಳ ಬಳಿ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ರೂಪುರೇಷೆಯೂ ಇಲ್ಲ.

ನಗರೀಕರಣದ ಬೆನ್ನುಬಿದ್ದಿರುವ ಜಗತ್ತಿನ ಅತ್ಯಂತ ಹೆಚ್ಚು ಸಂಚಾರ ದಟ್ಟಣೆಯುಳ್ಳ ನಗರಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಕ್ರಮವಾಗಿ ಕೊಲಂಬಿಯಾದ ಬ್ಯಾರನ್‌ಕ್ವಿಲ್ಲಾ ನಗರ ಮತ್ತು ಭಾರತ ಕೋಲ್ಕತ್ತಾ ನಗರಗಳಿವೆ. ಶೀಘ್ರದಲ್ಲಿಯೇ ಕೋಲ್ಕತ್ತಾವನ್ನೂ ಬೆಂಗಳೂರು ಹಿಂದಿಕ್ಕುವ ಸಾಧ್ಯತೆಗಳಿವೆ.

ಸಂಚಾರ ದಟ್ಟಣೆಗೆ ಪ್ರಮುಖ ಕಾರಣವೇ ಒಂದು ನಗರ (ಸಿಂಗಲ್ ಸಿಟಿ) ಕೇಂದ್ರಿತ ಆರ್ಥಿಕತೆ, ಅಭಿವೃದ್ಧಿ, ಕೈಗಾರಿಕೀಕರಣ. ನಗರೀಕರಣ ಮತ್ತು ಕೈಗಾರಿಕೀಕರಣ ಒಟ್ಟಿಗೆ ಸಾಗುತ್ತಿವೆ. ಪರಿಣಾಮ, ಪ್ರಮುಖ ನಗರಗಳು ಸಂಚಾರ ದಟ್ಟಣೆಯಲ್ಲಿಯೇ ಹೆಚ್ಚಿನ ಸಮಯವನ್ನು ತಿಂದು ಹಾಕುತ್ತಿವೆ. ಕಳೆದ ಐದಾರು ದಶಕಗಳಲ್ಲಿ ಜಗತ್ತಿನ ಹಲವಾರು ದೇಶಗಳು, ಅವುಗಳ ನಗರಗಳು ಭಾರೀ ಸಂಚಾರ ದಟ್ಟಣೆಯನ್ನು ಎದುರಿಸಿವೆ ಮತ್ತು ಹೊರಬಂದಿವೆ. ಸಂಚಾರ ದಟ್ಟಣೆಯನ್ನು ನಾನಾ ರೀತಿಯಲ್ಲಿ ನಿಭಾಯಿಸಿರುವ ಹಲವಾರು ನಗರಗಳ ಉದಾಹರಣೆಗಳೂ ನಮ್ಮ ಮುಂದಿವೆ.

ಚೀನಾದ ಬೀಜಿಂಗ್, ಶಾಂಘೈ ರೀತಿಯ ಹೆಚ್ಚು ಜನಸಂದಣಿಯುಳ್ಳ ನಗರಗಳು ಅತ್ಯಂತ ಕೆಟ್ಟ ಸಂಚಾರ ದಟ್ಟಣೆಯನ್ನು ಎದುರಿಸಿದ್ದವು. ಆದರೆ, ಸಮಸ್ಯೆಯನ್ನು ಪರಿಹರಿಸಲು ತಮ್ಮಿಂದ ಸಾಧ್ಯವಿಲ್ಲವೆಂದು ಅಲ್ಲಿನ ಆಡಳಿತಗಳು ಕೈಚೆಲ್ಲಿ ಕೂರಲಿಲ್ಲ. ನಾನಾ ರೀತಿಯ ಕ್ರಮಗಳನ್ನು ರೂಪಿಸಿವೆ. ಟ್ರಾಫಿಕ್ ಸಮಸ್ಯೆಯಿಂದ ಹೊರಬಂದಿವೆ.

ಬೆಲ್ಜಿಯಂನ ಘೆಂಟ್‌ ಮತ್ತು ಸ್ವಿಡ್ಜರ್‌ಲೆಂಡ್‌ನ ಜೆರ್ಮಟ್‌ನಂತಹ ನಗರಗಳಲ್ಲಿ ನಗರ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ. ಹಲವಾರು ನಗರಗಳಲ್ಲಿ ನಗರ ವಲಯ ಆರಂಭದ ಬಿಂದುವಿನಲ್ಲಿ ಟೋಲ್‌ಗಳನ್ನು ಇರಿಸಲಾಗಿದೆ. ಅಲ್ಲಿಯೇ ಖಾಸಗಿ ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕ ಸಾರಿಗೆಗಳನ್ನು ಬಳಸಿಕೊಂಡು ನಗರದಲ್ಲಿ ಸಂಚರಿಸುವಂತೆ ನಿಯಮಗಳನ್ನು ರೂಪಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಾರಿಗೆಯಲ್ಲಿನ ಪ್ರಯಾಣವನ್ನು ಉಚಿತವಾಗಿ ಒದಗಿಸಲಾಗಿದೆ. ಒಂದು ವೇಳೆ, ಖಾಸಗಿ ವಾಹನದಲ್ಲಿಯೇ ನಗರವನ್ನು ಪ್ರವೇಶಿಸಬೇಕಿದ್ದರೆ, ದುಬಾರಿ ಟೋಲ್‌ಗಳನ್ನು ಪಾವತಿಸಿ ನಗರವನ್ನು ಪ್ರವೇಶಿಸಬೇಕಾಗುತ್ತದೆ.

ಜೊತೆಗೆ, ಹಲವಾರು ನಗರಗಳಲ್ಲಿ ವಾಹನಗಳ ವೇಗ ಮಿತಿಯನ್ನು ಕಡಿತಗೊಳಿಸಿವೆ. ದುಬೈ ಮತ್ತು ಅಬುದಾಬಿಯ ನಗರೀಕರಣವು ಟ್ರಾಫಿಕ್‌ ಸಮಸ್ಯೆಯೇ ಎದುರಾಗದಂತೆ ನಿರ್ಮಾಣವಾಗಿವೆ. ಅಲ್ಲಿ, ಈಗಲೂ ಟ್ರಾಫಿಕ್ ಸಮಸ್ಯೆಯೇ ಇಲ್ಲ. ಜೊತೆಗೆ, ಈ ನಗರಗಳಲ್ಲಿ ವಾಹನಗಳ ವೇಗ ಮಿತಿಯನ್ನು ಗಂಟೆಗೆ 25-40 ಕಿ.ಮೀ.ಗೆ ನಿಗದಿ ಮಾಡಲಾಗಿದೆ. ಐಸ್‌ಲೆಂಡ್‌ನ ನಗರಗಳಲ್ಲಿ 30-50 ಕಿ.ಮೀ., ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ 55 ಕಿ.ಮೀ. ಹಾಗೂ ಬಲ್ಗೇರಿಯಾದ ನಗರಗಳಲ್ಲಿ 50 ಕಿ.ಮೀ. ವೇಗ ಮಿತಿಯನ್ನು ರೂಪಿಸಿದ್ದು, ತಮ್ಮದೇ ರೀತಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತಿವೆ.

ಅಷ್ಟೇ ಏಕೆ, ದೆಹಲಿಯಲ್ಲಿ ಸಮ ಮತ್ತು ಬೆಸ ಸಂಖ್ಯೆಗಳ ಆಧಾರದ ಮೇಲೆ ವಾಹನಗಳು ರಸ್ತೆಗೆ ಬರುವ ನಿಯಮವನ್ನು ರೂಪಿಸಲಾಗಿತ್ತು. ಇದು, ಒಂದು ಹಂತದಲ್ಲಿ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ನೆರವಾಗಿತ್ತು.

ಇವೇ ಅಂತಿಮ ಪರಿಹಾರಗಳೂ ಅಲ್ಲ. ಇಂತಹ ಕೆಲವು ನಿಮಯಗಳನ್ನು ರೂಪಿಸುವುದರಿಂದ ಭಾರತದ ನಗರಗಳಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವೂ ಇಲ್ಲ. ಆದರೆ, ಇಂತಹ ಕನಿಷ್ಠ ಒಂದೇ ಒಂದು ಕ್ರಮವನ್ನೂ ಕೈಗೊಳ್ಳದ ಕರ್ನಾಟಕ ಸರ್ಕಾರ, ತಮ್ಮಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದೆ.

ಭಾರತದಂತಹ ಹೆಚ್ಚು ಜನಸಂಖ್ಯೆಯುಳ್ಳ ದೇಶದಲ್ಲಿ ಏಕ ನಗರ ಕೇಂದ್ರಿತ ನಗರೀಕರಣವನ್ನು ನಿಯಂತ್ರಿಸುವುದೇ ಟ್ರಾಫಿಕ್‌ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಆದರೆ, ಸರ್ಕಾರಗಳ ಧೋರಣೆಗಳೇ ಗ್ರಾಮೀಣ ಭಾಗದ 20% ಜನರನ್ನು ಪಟ್ಟಣಗಳಿಗೆ ವಲಸೆ ಹೋಗುವಂತೆ ಮಾಡುವ ರೀತಿಯಲ್ಲಿವೆ. ಕರ್ನಾಟಕದಲ್ಲಿ ಬೆಂಗಳೂರು ಮಾತ್ರವೇ ಅಭಿವೃದ್ಧಿ, ಕೈಗಾರಿಕೋದ್ಯಮ, ಆಡಳಿತ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಕೇಂದ್ರವಾಗಿದೆ. ಬೆಂಗಳೂರಿನ ಮೇಲೆ ಒತ್ತಡ ಹೆಚ್ಚುತ್ತಿದೆ. ಸಂಚಾರ ದಟ್ಟಣೆ, ಗಾಳಿ ಗುಣಮಟ್ಟ ಕುಸಿತ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳನ್ನೂ ಸೃಷ್ಟಿಸುತ್ತಿದೆ.

ಅದಕ್ಕಾಗಿಯೇ, ಎಲ್ಲ ಕ್ಷೇತ್ರಗಳಿಗೂ ಬೆಂಗಳೂರು ಕೇಂದ್ರವಾಗಬಾರದು, ನಗರ ಯೋಜನೆಗಳು, ಕೈಗಾರಿಕಾ ವಲಯಗಳು ವಿಕೇಂದ್ರೀಕರಣಗೊಳ್ಳಬೇಕು ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಆದರೆ, ಇಂತಹ ಎಚ್ಚರಿಕೆಗಳಿಗೆ ಸರ್ಕಾರಗಳು ಕಿವಿಗೊಡುತ್ತಿಲ್ಲ.

ಈ ವರದಿ ಓದಿದ್ದೀರಾ?: ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು

ನಗರೀಕರಣ ಒಂದೇ ಕಡೆ ಏಕೆ ಎಂದು ಚರ್ಚಿಸಿದ್ದ ಸರ್ಕಾರ, ಎಲ್ಲ ವಲಯಗಳನ್ನೂ ಮ್ಯಾಗ್ನೆಟ್‌ ರೀತಿ ಬೆಂಗಳೂರು ಸೆಳೆಯುತ್ತಿದೆ. ಇದಕ್ಕೆ ಪರ್ಯಾಯವಾಗಿ ‘ಕೌಂಟರ್‌ ಮ್ಯಾಗ್ನೆಟ್‌ ಥಿಯರಿ’ಯನ್ನು ಜಾರಿಗೊಳಿಸುತ್ತೇವೆಂದು ಮುಂದಾಗಿತ್ತು. ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಯ ಮೂಲಕ ಎರಡೂ ನಗರಗಳ ನಡುವೆ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿಕೊಂಡಿತ್ತು. ಆದರೆ, ನಿರ್ಮಾಣವಾಗುವ ಟೌನ್‌ಶಿಪ್‌ನಲ್ಲಿ ಮನೆಯಿದ್ದು, ಬೆಂಗಳೂರಿನಲ್ಲಿ ಉದ್ಯೋಗವಿದ್ದರೆ ಅಥವಾ ಬೆಂಗಳೂರಿನಲ್ಲಿ ಮನೆಯಿಂದ ಹೊಸ ಟೌನ್‌ಶಿಪ್‌ನಲ್ಲಿ ಉದ್ಯೋಗವಿದ್ದರೆ ಪ್ರಯಾಣ ಅನಿವಾರ್ಯವಾಗುತ್ತದೆ.

ಹಿಂದೆ, ನಗರಗಳಲ್ಲಿ ಪುರುಷರು ಮಾತ್ರವೇ ದುಡಿಮೆಯ ಭಾಗವಾಗಿದ್ದರು. ಈಗ, ಸಕಾರಾತ್ಮಕ ಬೆಳವಣಿಗೆಯಾಗಿ ನಗರಗಳಲ್ಲಿರುವ ಬಹುತೇಕ ಮಹಿಳೆಯರೂ ದುಡಿಮೆಯಲ್ಲಿ ತೊಡಗಿದ್ದಾರೆ. ಆದರೆ, ಪತ್ನಿ-ಪತಿ ಇಬ್ಬರಿಗೂ ಒಂದೇ ಪ್ರದೇಶದಲ್ಲಿ ಉದ್ಯೋಗ ದೊರೆಯದ ಕಾರಣ, ದುಡಿಮೆ ಸ್ಥಳ ಮತ್ತು ವಾಸ ಸ್ಥಳಕ್ಕೂ ಅಂತರವಿರುತ್ತದೆ. ಇದು ಉದ್ಯೋಗಿಗಳ ಪ್ರಯಾಣ ಬೆಳೆಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಇಂತಹ ಕಾರಣಗಳಿಂದಾಗಿ ಸಂಚಾರ ದಟ್ಟಣೆ ಅಥವಾ ನಗರೀಕರಣದ ಸಮಸ್ಯೆಗೆ ಕೌಂಟರ್ ಮ್ಯಾಗ್ನೆಟ್ ಥಿಯರಿಯಿಂದ ಪರಿಹಾರ ದೊರೆಯುವುದಿಲ್ಲ. ಪಟ್ಟಣಗಳಲ್ಲಿ ಸುರಂಗಗಳು, ಮೇಲುರಸ್ತೆಗಳು, ಮೆಟ್ರೋಗಳನ್ನು ನಿರ್ಮಿಸುವುದರಿಂದ ಸಂಚಾರ ಸಮಸ್ಯೆಗೆ ಕಡಿವಾಣ ಬೀಳುವುದೂ ಇಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!

ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಸರ್ಕಾರಗಳ ‘ಮೋಡ್‌ ಆಫ್‌ ಡೆವಲಪ್‌ಮೆಂಟ್‌’ (ಅಭಿವೃದ್ಧಿ ಮಾದರಿ) ಬದಲಾಗಬೇಕು. ಬೆಂಗಳೂರು ಕೇಂದ್ರಿತ ನಗರೀಕರಣ ಮತ್ತು ಕೈಗಾರಿಕೋದ್ಯಮ ವಿಕೇಂದ್ರೀಕರಣಗೊಳ್ಳಬೇಕು. ಉದ್ದಿಮೆಗಳು ಎಲ್ಲ ಜಿಲ್ಲೆ-ತಾಲೂಕು ಕೇಂದ್ರಗಳಿಗೆ ಹಂಚಿಕೆಯಾಗಬೇಕು ಮತ್ತು ಸ್ಥಾಪನೆಯಾಗಬೇಕು. ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುವಂತೆ ಮಾಡಬೇಕು. ಗ್ರಾಮೀಣ ಭಾಗದ ಜನರು ಬೃಹತ್ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯಲು ಯೋಜನೆಗಳನ್ನು ರೂಪಿಸಬೇಕು.

ಸರ್ಕಾರಗಳು, ಕೃಷಿ ಲಾಭದಾಯಕವಲ್ಲ ಎನ್ನುತ್ತಲೇ, ಗ್ರಾಮೀಣ ಭಾಗದ ಜನರನ್ನು ನಗರಗಳಿಗೆ ಓಡಿಸುವ ನೀತಿಯನ್ನು ರೂಪಿಸುತ್ತಿವೆ. ಕೃಷಿ ಮಾಡುವುದು ಸಾಮಾಜಿಕ ಘನತೆಯನ್ನು ಒದಗಿಸುವುದಿಲ್ಲ ಎಂಬ ಭಾವನೆ ಯುವಜನರಲ್ಲಿ ಬೆಳೆಯುವಂತೆ ಮಾಡಲಾಗುತ್ತಿದೆ. ಇಂತಹ ನೀತಿ-ಧೋರಣೆಗಳನ್ನು ಬದಿಗಿಟ್ಟು, ಕೃಷಿಯಲ್ಲಿ ಹೆಚ್ಚಿನ ಜನರು ತೊಡಗಿಸಿಕೊಳ್ಳುವಂತೆ ಮಾಡಬೇಕು. ಅದು ಕೇವಲ ‘ರೈತ ದೇಶದ ಬೆನ್ನೆಲುಬು’ ಎಂಬ ರೊಮ್ಯಾಂಟಿಕ್ ಘೋಷಣೆಯಿಂದಲ್ಲ. ಕೃಷಿಗೆ ಹೆಚ್ಚಿನ ಪ್ರೋತ್ಸಾಹಗಳು ದೊರೆಯುವಂತೆ ಮಾಡಬೇಕು. ಕೃಷಿಯಲ್ಲಿ ಲಾಭ ದೊರೆಯುವಂತೆ ಬೆಂಬಲ ಬೆಲೆ ಕೊಡಬೇಕು. ಕೃಷಿಯಿಂದ ಸುಸ್ಥಿರ, ಸ್ವಾಭಿಮಾನ ಮತ್ತು ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ವಾತಾವರಣವನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರವೇ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು, ಸಮಸ್ಯೆಯನ್ನು ಪರಿಹರಿಸಲು ಸಾಧ್ಯ.

ಇದಕ್ಕೆ ಯಾವುದೇ ದೇವರು ಎಲ್ಲಿಂದಲೋ ಇಳಿದುಬರಬೇಕಿಲ್ಲ. ಸರ್ಕಾರಗಳಿಗೆ ಇಚ್ಛಾಶಕ್ತಿ ಮತ್ತು ಮುನ್ನೋಟ ಇದ್ದರೆ ಸಾಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X