ಫೆಬ್ರವರಿ 25ರಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಲಾಟರಿ ಮೂಲಕ ಗೋವಿಂದಾಪುರದ ಆಶ್ರಯ ಮನೆಗಳನ್ನು ಹಂಚಲಿದ್ದಾರೆ ಎಂದು ವಿಧಾನ ಪರಿಷತ್ ಶಾಸಕಿ ಬಿಲ್ಕಿಸ್ ಬಾನು ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಳಗ್ಗೆ 11 ಗಂಟೆಗೆ ಆಶ್ರಯ ಮನೆಗಳನ್ನು ಹಂಚುವ ಕಾರ್ಯಕ್ರಮ ಆರಂಭವಾಗಲಿದ್ದು, ವಸತಿ ಸಚಿವರು ಲಾಟರಿ ಮೂಲಕ 625 ಮನೆಗಳನ್ನು ಫಲಾನುಭವಿಗಳಿಗೆ ಹಂಚುತ್ತಾರೆ. ನಂತರ ಮನೆಯ ಬೀಗದ ಕೀಯೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ವಿತರಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸರಣಿ ಅಪಘಾತಗಳಿಂದ ಬೇಸತ್ತ ಮಂದಿ; ಕ್ರಮವಹಿಸುವುದೇ ಜಿಲ್ಲಾಡಳಿತ?
ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಕಾರ್ಪೊರೇಷನ್ ಅಧಿಕಾರಿಗಳು ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ಆಶ್ರಯ ಸಮಿತಿಯ ತೀರ್ಮಾನದಂತೆ ಮನೆಗಳಲ್ಲಿ ತಾತ್ಕಾಲಿಕವಾಗಿ ನೀರು, ಕರೆಂಟ್ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಸತಿ ಸಚಿವ ಜಮೀರ್ ಅಹ್ಮದ್ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಿದ್ದು, ಆ ವೇಳೆ ಇನ್ನಷ್ಟು ಮನೆಗಳನ್ನು ಹಂಚಬೇಕೆಂಬ ಬೇಡಿಕೆಯನ್ನು ಅವರ ಬಳಿ ಇಡಲಾಗುತ್ತದೆ” ಎಂದರು.
