- ರಸ್ತೆ ರಿಪೇರಿಗಾಗಿ ₹3 ಲಕ್ಷ ಖರ್ಚು ಮಾಡಿದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ
- ಮಳೆ ಸುರಿದರೆ ಚರಂಡಿಯಲ್ಲಿ ನೀರು ಹರಿಯಲಾಗದೆ, ರಸ್ತೆ ಜಲಾವೃತವಾಗುತ್ತದೆ
ಖ್ಯಾತ ವಿಜ್ಞಾನಿಯ ಹೆಸರಿಟ್ಟುಕೊಂಡಿರುವುದು ಬೆಂಗಳೂರಿನ ಸಿ.ವಿ ರಾಮನ್ ನಗರ. ಆದರೆ, ಅಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಗುಂಡಿಬಿದ್ದಿರುವ ರಸ್ತೆಗಳು, ರಸ್ತೆ ಬದಿಯಲ್ಲಿ ಗಬ್ಬುನಾರುವ ಕಸದ ರಾಶಿ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಸಿ.ವಿ ರಾಮನ್ ನಗರದ ಭಾಗವಾಗಿರುವ ವರ್ಸೋವಾ ಲೇಔಟ್‌ನ ಪರಿಸ್ಥಿತಿಯಂತೂ ಹೇಳತೀರದು. ಈ ಬಡಾವಣೆ ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು, ಅಲ್ಲಿನ ನಿವಾಸಿಗಳು ತಾವೇ ಬೀದಿಗಿಳಿದು ಚರಂಡಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಆದರೂ, ಅಲ್ಲಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ.
ಈಗ ಮಳೆಗಾಲ ಆರಂಭವಾಗಿದೆ. ಬಡಾವಣೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲದೆ, ನಿವಾಸಿಗಳು ಪರದಾಡುತ್ತಿದ್ದಾರೆ. ಮಳೆ ಸುರಿದರೆ ಚರಂಡಿಯಲ್ಲಿ ನೀರು ಹರಿಯಲಾಗದೆ, ರಸ್ತೆ ಜಲಾವೃತವಾಗುತ್ತದೆ. ರಸ್ತೆಗಳೂ ಗುಂಡಿಬಿದ್ದಿದ್ದು ಅಪಾಯವನ್ನು ಹೆಚ್ಚಿಸುವ ಆತಂಕವಿದೆ. ಹೀಗಾಗಿ, ಅಲ್ಲಿನ ಜನರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ರಸ್ತೆ ಮತ್ತು ಚರಂಡಿಗಳನ್ನು ರಿಪೇರಿ ಮಾಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
“ಪ್ರತಿ ಬಾರಿ ಮಳೆಗಾಲದಲ್ಲೂ ಲೇಔಟ್‌ನ ರಸ್ತೆಗಳು ಜಲಾವೃತವಾಗುತ್ತವೆ. ಮನೆಗಳಿಗೂ ನೀರು ನುಗ್ಗುತ್ತದೆ. ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ನಾವೇ ರಿಪೇರಿ ಕೆಲಸ ಮಾಡಿಸುತ್ತಿದ್ದೇವೆ. ಬಡಾವಣೆಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಿದ್ದೇವೆ” ಎಂದು ಅಲ್ಲಿನ ನಿವಾಸಿ ಶಿವಾ ರೆಡ್ಡಿ ಹೇಳಿರುವುದಾಗಿ ‘ಟಿಒಐ’ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಪುನರ್ ರಚನೆಗೆ ಸಮಿತಿ ರಚಿಸಿದ ರಾಜ್ಯ ಸರ್ಕಾರ
“ನಮ್ಮ ಬಡಾವಣೆಯ ರಸ್ತೆಗಳು ಕಿತ್ತುನಿಂತಿವೆ. ಸಮಸ್ಯೆ ಬಗ್ಗೆ ಮನವಿ ಮಾಡಿದಾಗ ಬಿಬಿಎಂಪಿ ಅಧಿಕಾರಿಗಳು, ಎಂಜಿನಿಯರ್‌ಗಳು ಬಂದು ಪರಿಶೀಲನೆ ಮಾಡುತ್ತಾರೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಇದುವರೆಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಸ್ತೆ ಮತ್ತು ಚರಂಡಿ ರಿಪೇರಿಗಾಗಿ ಅಲ್ಲಿನ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ₹3 ಲಕ್ಷ ಖರ್ಚು ಮಾಡಿದೆ. ಅಲ್ಲದೆ, ಸ್ಥಳೀಯರಿಂದ ಮೂರು ಲಕ್ಷ ರೂ. ಸಂಗ್ರಹಿಸಿ ದುರಸ್ತಿ ಕೆಲಸಗಳಿಗೆ ಬಳಸಿದೆ” ಎಂದು ನಿವಾಸಿಗಳು ಹೇಳಿದ್ದಾರೆ.